ಗುಡ್ ಮಾರ್ನಿಂಗ್ ಎಂದು ಇಂಗ್ಲಿಷ್ ಭಾಷೆಯಲ್ಲಿ ಹೇಳುವ ಬದಲು  ಕನ್ನಡದಲ್ಲಿ ಅದನ್ನು ಹೇಳಬಯಸುವವರು ‘ಬೆಳಗಿನ ಶುಭೋದಯ’ ಎಂದು ಹೇಳುವುದನ್ನು ನಾವು ಅನೇಕ ಸಾರಿ ಗಮನಿಸುತ್ತೇವೆ. ಶುಭೋದಯ ಎಂಬ ಒಂದು ಪದದಲ್ಲಿ ಗುಡ್( ಶುಭ) ಮತ್ತು ಉದಯ( ಮಾರ್ನಿಂಗ್) ಎಂಬ ಎರಡೂ ಪದಗಳಿವೆ! ಹೀಗಾಗಿ ಬೆಳಗಿನ ಶುಭೋದಯ ಎಂದು ಹೇಳಿದಾಗ ಗುಡ್ ಮಾರ್ನಿಂಗ್ ಆಫ್ ಮಾರ್ನಿಂಗ್ ಎಂಬ ಅರ್ಥ ಬರುತ್ತದೆ! ಹೀಗಾಗಿ‌ ಶುಭೋದಯ ಸಾಕು. ‘ಬೆಳಗಿನ ಶುಭೋದಯ’ ಬೇಡ.

ಇನ್ನು ಕೆಲವರು ಗುಡ್ ಆಫ್ಟರ್ ನೂನ್ ಗೆ ಕನ್ನಡದಲ್ಲಿ ಏನೆನ್ನಬೇಕು, ಗುಡ್ ಈವ್ನಿಂಗ್, ಗುಡ್ ನೈಟ್ ಎನ್ನುವುದಕ್ಕೆ ಏನೆನ್ನಬೇಕು ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಇವಕ್ಕೆ ಶುಭ ಮಧ್ಯಾಹ್ನ, ಶುಭ ಸಂಜೆ, ಶುಭ ರಾತ್ರಿ ಎಂಬ ಪದಗಳಿವೆ.‌ ಡಾ.ಕಮಲಾ ಹಂಪನಾ ಅವರು ನಲ್ಬೆಳಗು, ನಲ್ಮಧ್ಯಾಹ್ನ, ನಲ್ಸಂಜೆ ಮತ್ತು ನಲ್ರಾತ್ರಿ ಎಂಬ ಪದಗಳನ್ನು ಬಳಸಬಹುದು ಎಂದು ಸಭೆಯೊಂದರಲ್ಲಿ ಹೇಳಿದ್ದು ನೆನಪಾಗುತ್ತದೆ. 

ಹೊತ್ತು ಹೊತ್ತಿಗೆ ಬೇರೆ ಬೇರೆ ಪದ ಬಳಸುವ ರಗಳೆಯೇ ಬೇಡ, ಒಂದೇ ಶುಭಾಶಯ ಪದ ಸಾಕು  ಅನ್ನುವವರು ಸರಳವಾಗಿ ನಮಸ್ಕಾರ‌ ಅಥವಾ ನಮಸ್ತೆ ಅನ್ನಬಹುದು, ಮತ್ತು ಇದನ್ನು ಯಾವ ಹೊತ್ತಿನಲ್ಲಾದರೂ ಹೇಳಬಹುದು! ಆದರೆ ಏನೇ ಹೇಳಿದರೂ ಅದು ಅರ್ಥಪೂರ್ಣವಾಗಿರುವಂತೆ ನೋಡಿಕೊಳ್ಳೋಣ ಅಷ್ಟೇ.