ವೃತ್ತಿಯಿಂದ ಕನ್ನಡ ಪಾಠ ಮಾಡುವ ಹಾಗೂ ಪ್ರವೃತ್ತಿಯಿಂದ ಕನ್ನಡ ಬರೆಯುವ ನಾನು ಕನ್ನಡ ನಿಘಂಟು, ಶಬ್ದಕೋಶಗಳನ್ನು ಆಗಾಗ ಬಳಸಬೇಕಾಗುತ್ತದೆ. ಪ್ರತಿ ಸಲ ನಿಘಂಟು ತೆರೆದಾಗಲೂ ನನಗೆ ಒಂದು ವಿಷಯ ಮನಸ್ಸಿಗೆ ಬರುತ್ತದೆ. ಅದೇನೆಂದರೆ ನಾವು ಸಾಮಾನ್ಯವಾಗಿ ಮಾತಿನಲ್ಲಿ ಹಾಗೂ ಬರವಣಿಗೆಯಲ್ಲಿ ಬಳಸದೆ ಇರುವ ಅನೇಕಾನೇಕ ಪದಗಳು ಕನ್ನಡ ನಿಘಂಟಿನಲ್ಲಿ ಪ್ರತಿ ಅಕ್ಷರದಲ್ಲೂ ಸಿಗುತ್ತವೆಯಲ್ಲ(!) ಎಂಬುದು.
ಉದಾಹರಣೆಗೆ ,
ಅದ್ದೆ = ಬೇರೊಬ್ಬನ ಸ್ಥಾನದಲ್ಲಿಯ, ಬದಲಿ
ಅಪ್ಪುನಿಧಿ = ಸಮುದ್ರ, ಕಡಲು
ಆರೇಚನ = ( ಕಣ್ಣುಗಳು) ಮುಚ್ಚಿಕೊಳ್ಳುವುದು
ಇಮ್ಮನೆ = ಎರಡನೆಯ ಸಂಬಂಧ
ಈಹಾಮೃಗ = ತೋಳ
ಉಂಚ = ಕೋಳಿ, ಬಾತು ಮುಂತಾದುವುಗಳು ತಪ್ಪಿಸಿಕೊಂಡು ಹೋಗದಂತೆ ಮೇಲೆ ಕವಿಸುವ ಬಿದಿರಿನ ಕುಕ್ಕೆ; ತೂತುಮಂಕರಿ, ಎತ್ತರ, ಉನ್ನತ, ಎತ್ತರವಾದ ಧ್ವನಿ, ಶ್ರೇಷ್ಠನಾದವನು
ಊರಾನೆ = ಹಂದಿ, ಸೂಕರ, ವರಾಹ
ಊರೆಳ್ಳು = ಬೇಸಾಯ ಮಾಡಿ ಬೆಳೆಯುವ ಎಳ್ಳು
ಏಕಾಮಿಷ = ಅನೇಕರ ಬಯಕೆಗೆ ಪಾತ್ರವಾದ ಒಂದೇ ವಸ್ತು
ಗೊದಯ= ರಥದ ವೇಗವನ್ನು ತಡೆಯಲು ಬಳಸುವ ಕೊರಡು; ತಡೆಮರ, ತೆಂಗಿನಗರಿಯ ಬುಡದ ತುಂಡು, ದಪ್ಪವ್ಯಕ್ತಿ, ಬಾಲವುಳ್ಳ ಮರಿಗಪ್ಪೆ
ಈ ಪದಗಳನ್ನು ಆರಿಸಿಕೊಂಡದ್ದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪರಿಷ್ಕೃತ ಸಂಕ್ಷಿಪ್ತ ಕನ್ನಡ ನಿಘಂಟಿನಿಂದ.
ಹೀಗೆಯೇ ಗಮನಿಸುತ್ತಾ ಹೋದರೆ ನೂರಾರು ಉದಾಹರಣೆಗಳನ್ನು ಕೊಡಬಹುದು. ನಮ್ಮ ಕನ್ನಡ ಭಾಷೆ ಎಷ್ಟು ಶ್ರೀಮಂತವಾದುದು ಎಂಬುದು ಇದರಿಂದ ಗೊತ್ತಾಗುತ್ತದೆ. ಕನ್ನಡ ಕವಿ ಎಂ.ಗೋಪಾಲಕೃಷ್ಣ ಅಡಿಗರು ನಿಘಂಟಿನಿಂದ ಪ್ರತಿದಿನ ಒಂದು ಹೊಸ ಪದವನ್ನು ಕಲಿಯುತ್ತಿದ್ದರಂತೆ. ಅವರ ಕಾವ್ಯವು ಎಷ್ಟು ಪದಶ್ರೀಮಂತವಾಗಿದೆ ಎಂಬುದನ್ನು ಕನ್ನಡ ಕಾವ್ಯಪ್ರೇಮಿಗಳು ಬಲ್ಲರು. ಒಟ್ಟಿನಲ್ಲಿ ನಮ್ಮ ಕನ್ನಡಮ್ಮ ರತ್ನಗರ್ಭೆ, ನುಡಿಸಿರಿವಂತೆ. ಅವಳು ನಮಗೆ ಬಳುವಳಿಯಾಗಿ ಕೊಟ್ಟಿರುವ ಅಪಾರ ಪದಸಂಪತ್ತನ್ನು ಬಳಸಿಕೊಂಡು ನಮ್ಮ ಬದುಕು, ಭಾಷೆಗಳನ್ನು ಶ್ರೀಮಂತಗೊಳಿಸಿಕೊಳ್ಳುವುದು ಅವಳ ಮಕ್ಕಳಾದ ನಮಗಿರುವ ಒಂದು ಆಯ್ಕೆ.
Like us!
Follow us!