ಎ.ಎಸ್.ಮೂರ್ತಿ ಅವರ ರಂಗಭೂಮಿಯ ಪರಂಪರೆಯನ್ನು ಸಾರ್ಥಕವಾಗಿ ಮುಂದುವರಿಸಿಕೊಂಡು ಬರುತ್ತಿರುವ ಬೆಂಗಳೂರಿನ ‘ವಿಜಯನಗರ ಬಿಂಬ’ ಸಂಸ್ಥೆಯು ಪ್ರತಿ ವರ್ಷವೂ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತದೆ. ಹಾಡು, ನಾಟ್ಯ, ಚಿತ್ರ, ಕಾವ್ಯ ಮುಂತಾದ ಕಲೆಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಲು ಆಯಾ ಕ್ಷೇತ್ರದ ತಜ್ಞರನ್ನು ಆಯೋಜಕರು ಆಹ್ವಾನಿಸುತ್ತಾರೆ. ಇದೇ ಹಿನ್ನೆಲೆಯಲ್ಲಿ ಈ ಲೇಖಕಿಯನ್ನು ಮಕ್ಕಳಿಗೆ ಕವಿತಾ ರಚನೆಯನ್ನು ಹೇಳಿಕೊಡಲು ಆಹ್ವಾನಿಸುತ್ತಿರುತ್ತಾರೆ. ಮುಗ್ಧ ಮಕ್ಕಳಿಗೆ ಕವಿತಾ ರಚನೆ ಎಂಬ ಮಾಯಾಲೋಕದ ಪರಿಚಯ ಮಾಡಿಸುವುದು ಖುಷಿ ನೀಡುವ ಹಾಗೂ ಅದೇ ಹೊತ್ತಿನಲ್ಲಿ ತುಂಬ ಸವಾಲೊಡ್ಡುವ ಕೆಲಸ.
ಈ ಸವಾಲನ್ನು ಎದುರಿಸಲು ನನಗೆ ಸಹಾಯ ಮಾಡಿದ್ದು ಅಂದರೆ ಜಿ.ಪಿ.ರಾಜರತ್ನಂ ಅವರು ತಮ್ಮ ಕನ್ನಡ ತರಗತಿಗಳಲ್ಲಿ ಪಾಲಿಸುತ್ತಿದ್ದ ಕ್ರಮ. ತಮ್ಮ ವಿದ್ಯಾರ್ಥಿಗಳಿಗೆ ಛಂದಸ್ಸನ್ನು, ಅದರ ಲಯವನ್ನು ಪರಿಚಯಿಸಲು, ಎರಡು ಸಾಲು ಪದ್ಯವನ್ನು ಕರಿಹಲಗೆಯ ಮೇಲೆ ಬರೆದು, ಅದೇ ಲಯದಲ್ಲೇ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಹೊಸ ಪದ್ಯವನ್ನು ಬರೆಯಲು ಹೇಳುತ್ತಿದ್ದರು ಆ ಪ್ರತಿಭಾವಂತ ಗುರುಗಳು. ಬಿಂಬದಲ್ಲಿ ಮಕ್ಕಳಿಗೆ ಕವಿತೆಯ ಬಗ್ಗೆ ಪಾಠ ಮಾಡುವಾಗ ನಾನು ಸಹ ಇದೇ ವಿಧಾನವನ್ನು ಅನುಸರಿಸಿದೆ. ಉದಾಹರಣೆಗೆ, “ಬಂತು ಬಂತು ಬಂತು ಬಂತು ಬೇಸಿಗೆ ರಜ, ಮಾವಿನ್ಹಣ್ಣು ತಿನ್ನೋದಂದ್ರೆ ನಂಗೆ ಬಲು ಮಜ” ಎಂಬ ಎರಡು ಸಾಲನ್ನು ಮಕ್ಕಳಿಂದ ಹೇಳಿಸಿ, ನಂತರ ಮೊದಲನೆಯ ಸಾಲನ್ನು ಹಾಗೇ ಉಳಿಸಿಕೊಂಡು ಎರಡನೆಯ ಸಾಲಿನ ಮೊದಲ ಅರ್ಧಕ್ಕೆ ಮಾತ್ರ ತಮ್ಮ ಸ್ವಂತ ಚಿಂತನೆಯ ಪದ ಸೇರಿಸಿ, ಚರಣವನ್ನು ಅವರು ಮರುರಚಿಸಬೇಕು. ಒಬ್ಬೊಬ್ಬರೇ ಒಂದೊಂದು ಚರಣ ಸೇರಿಸಿ ಸೇರಿಸಿ ಕೆಲವೇ ನಿಮಿಷಗಳಲ್ಲಿ ಪದ್ಯ ಪೂರ್ಣಗೊಳ್ಳುತ್ತದೆ!
ಮಕ್ಕಳು ಈ ಪ್ರಯೋಗದಲ್ಲಿ ತುಂಬ ಉತ್ಸಾಹದಿಂದ ಭಾಗವಹಿಸುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಕೆಲವು ದಿನಗಳ ನಂತರ ನಡೆದ ಮಕ್ಕಳ ಕವಿ ಮೇಳದಲ್ಲಿ, “ಈ ಮಕ್ಕಳು ಕವಿತೆ ಬರೆದು ಓದುವ ಆಸಕ್ತಿ ತೋರಿದರು” ಎಂದು ಬಿಂಬದ ಪದಾಧಿಕಾರಿಗಳು ಹೇಳುವಾಗ ಮನಸ್ಸಿಗೆ ಸಂತೋಷವಾಗುತ್ತದೆ. ಮನಸ್ಸು ರಾಜರತ್ನಂ ಎಂಬ ಕನ್ನಡ ಮೇಷ್ಟ್ರುಗಳ ಕನ್ನಡ ಮೇಷ್ಟ್ರಿಗೆ ಒಮ್ಮೆ ನಮಸ್ಕರಿಸುತ್ತದೆ.