ಒಬ್ಬ ಕಾಲೇಜು ಅಧ್ಯಾಪಕಿಯಾಗಿ ಏಳೆಂಟು ಕಾಲೇಜುಗಳಲ್ಲಿ ಕೆಲಸ ಮಾಡಿರುವ ಹಾಗೂ ಮೌಲ್ಯಮಾಪನ, ವಿಚಾರ ಸಂಕಿರಣ, ಪರೀಕ್ಷಾ ಮಂಡಳಿ ಮುಂತಾದವುಗಳ ದೆಸೆಯಿಂದಾಗಿ ಬೇರೆ ಅನೇಕ ಕಾಲೇಜುಗಳ ಅಧ್ಯಾಪಕರೊಡನೆ ಒಡನಾಡುವ ಅವಕಾಶ ಪಡೆದಿರುವ ನನಗೆ, ಕಾಲೇಜುಗಳ ಕನ್ನಡ ವಿಭಾಗಗಳ ಬಗ್ಗೆ, ಓದುಗರೊಡನೆ ಹಂಚಿಕೊಳ್ಳಬೇಕೆನ್ನಿಸುವ ಒಂದು ಅನುಭವ ಇದೆ. ಅದೇನೆಂದರೆ, ಕನ್ನಡ ವಿಭಾಗಗಳ ಮನುಷ್ಯ ಪ್ರೀತಿ ಮತ್ತು ಅವು ಜನರನ್ನು ಒಳಗೊಳ್ಳುವ ರೀತಿ.
ನಾನು ಕೆಲಸ ಮಾಡಿದ ಕಾಲೇಜುಗಳಲ್ಲಿ ( ಮತ್ತು ಸಾಮಾನ್ಯವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ) ಗರಿಷ್ಠ ಸಂಖ್ಯೆಯ ಉದ್ಯೋಗಿಗಳು ಕನ್ನಡಿಗರಾಗಿರುತ್ತಾರೆ. ಹೀಗಾಗಿ ಕನ್ನಡ ಭಾಷೆಯ ಏಕಸೂತ್ರವೆಂಬುದು ಅವರನ್ನು ಸಹಜವಾಗಿ ಬೆಸೆದೇ ಇರುತ್ತದೆ. ಜೊತೆಗೆ ಕಾಲೇಜಿನ ವಾರ್ಷಿಕ ಸಂಚಿಕೆ, ಸಭೆ ಸಮಾರಂಭಗಳ ನಿರೂಪಣೆ – ಸ್ವಾಗತ- ವಂದನಾರ್ಪಣೆ – ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದ ಭಾಷಾ ಸಾಮರ್ಥ್ಯ ಬೇಡುವ ಕೆಲಸಗಳ ಕಾರಣದಿಂದಾಗಿ ಬೇರೆ ವಿಭಾಗಗಳ ಜೊತೆ ಒಡನಾಡುವ ಸಂದರ್ಭಗಳು ಕನ್ನಡ ಅಧ್ಯಾಪಕರ ಮಟ್ಟಿಗೆ ಇದ್ದೇ ಇರುತ್ತವೆ. ಇದರೊಂದಿಗೆ, ಸಾಮಾನ್ಯವಾಗಿ ಸರ್ಕಾರಿ ಕಾಲೇಜುಗಳ ತೊಂಬತ್ತು ಶೇಕಡ ವಿದ್ಯಾರ್ಥಿಗಳು ಕನ್ನಡವನ್ನೇ ಎರಡನೆಯ ಅಥವಾ ಆಯ್ಕೆಯ ಭಾಷೆಯಾಗಿ ಆರಿಸಿಕೊಂಡಿರುವುದರಿಂದಾಗಿ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ, ತನ್ಮೂಲಕ ಅಧ್ಯಾಪಕರೊಂದಿಗೆ ಕನ್ನಡ ವಿಭಾಗದವರು ಸಂಪರ್ಕಕ್ಕೆ ಬಂದೇ ಬರುತ್ತಾರೆ. ಈ ಎಲ್ಲ ತಾಂತ್ರಿಕ ವಿಷಯಗಳಿಗಿಂತ ಮುಖ್ಯವಾದ ವಿಷಯ ಅಂದರೆ ತಮ್ಮ ವೃತ್ತಿಯ ಭಾಗವಾಗಿ ತಾವು ಓದುವ ಸಾಹಿತ್ಯ ಕೃತಿಗಳು ಕನ್ನಡ ಅಧ್ಯಾಪಕರಿಗೆ ಕಲಿಸುವ ಸಹ-ಅನುಭೂತಿ, ಅನುಕಂಪೆಯ ಗುಣ, ಸ್ಪಂದನಾ ಸಾಮರ್ಥ್ಯಗಳು. ಈ ಗುಣಗಳಿಂದಾಗಿ ಎಲ್ಲ ಭೇದಗಳನ್ಮು ಮೀರಿ ಮನುಷ್ಯರೊಡನೆ ಮಾತಾಡುವ, ಅವರ ಬಗ್ಗೆ ನಿಜವಾದ ಆಸಕ್ತಿ ಇಟ್ಟುಕೊಳ್ಳುವ, ಮನುಷ್ಯತೆಯನ್ನು ಅರ್ಥವಂತಿಕೆಯ ಕಣ್ಣುಗಳಿಂದ ನೋಡುವ ಅಭ್ಯಾಸವು ಅನೇಕ ಕನ್ನಡ ಅಧ್ಯಾಪಕರಲ್ಲಿ ಬೆಳೆದಿರುತ್ತದೆ. ಇದಕ್ಕೆ ಅಪವಾದಗಳಿರಬಹುದಾದರೂ ಬಹುಪಾಲು ಕನ್ನಡ ಅಧ್ಯಾಪಕರ ಮಟ್ಟಿಗೆ ಈ ಮಾತು ನಿಜ. ‘ ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂಬ ಬಸವಣ್ಣನವರ ವಚನದಂತೆ ‘ವಿಶ್ವವನ್ನು ತಬ್ನಿಕೊಳ್ಳುವ’ ಸೊಗಸೊಂದು ಅವರಲ್ಲಿ ಮನೆ ಮಾಡಿರುತ್ತದೆ. ಹೀಗಾಗಿ ಕನ್ನಡ ವಿಭಾಗಕ್ಕೆ ಬರುವ ಬೇರೆ ವಿಭಾಗದ ಅಧ್ಯಾಪಕರು ಅಲ್ಲಿ ತಮಗೆ ಆಪ್ತತೆ, ಆತ್ಮೀಯತೆಗಳು ಭಾಸವಾಗುತ್ತವೆ ಎಂದು ಹೇಳುತ್ತಿರುತ್ತಾರೆ. ಕನ್ನಡ ಅಧ್ಯಾಪಕರ ಮನುಷ್ಯ ಪ್ರೀತಿಯು ಅವರ ನಗೆಮೊಗ, ಸೌಜನ್ಯಯುತ ನಡವಳಿಕೆ, ಚಿಕ್ಕವರು, ದೊಡ್ಡವರೆನ್ನದೆ ಎಲ್ಲರನ್ನೂ ಸಮಾನ ಗೌರವದಿಂದ ನಡೆಸಿಕೊಳ್ಳುವ ಕ್ರಮ, ಬಂದವರಿಗೆ ಒಂದು ಪುಟ್ಟ ಮಿಠಾಯಿಯನ್ನೋ ಹಣ್ಣನ್ನೋ ಕೊಡುವ ಅಭ್ಯಾಸ, ಅವರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ…ಹೀಗೆ ಅನೇಕ ರೀತಿಗಳಿಂದ ವ್ಯಕ್ತವಾಗುತ್ತದೆ.
ಇದೇ ಕಾರಣದಿಂದಲೇ ಇರಬೇಕು, ತಮ್ಮ ತಮ್ಮಲ್ಲಿರುವ ಅಭಿಪ್ರಾಯ ಭೇದ, ಕೆಲಸದ ವಿಷಯದಲ್ಲಿ ಕೆಲವೊಮ್ಮೆ ಉಂಟಾಗುವ ಸಿಟ್ಟು, ಸೆಡವು, ಕಿರಿಕಿರಿಯನ್ನು ಬದಿಗೊತ್ತಿ ತಮ್ಮ ವಿಭಾಗದ ಸಹೋದ್ಯೋಗಿಗಳೊಂದಿಗೆ ಪರಸ್ಪರ ಹೊಂದಿಕೊಳ್ಳಲು ಸಹ ಕನ್ನಡ ಅಧ್ಯಾಪಕರು ಪ್ರಯತ್ನ ಮಾಡುತ್ತಿರುತ್ತಾರೆ. ಒಬ್ಬರ ಬಳಿ ಇನ್ನೊಬ್ಬರು ಮಾತು ಬಿಟ್ಟುಬಿಡುವುದು, ಮುಖ ನೋಡದಿರುವುದು ಇಂತಹ ಅಪಸ್ವರಗಳು ಇಲ್ಲಿ ಕಡಿಮೆ ಅನ್ನಬಹುದು.
ಸಾಹಿತ್ಯ ಕಲಿಸುವ ಮನುಷ್ಯ ಪ್ರೀತಿಗೆ ನಮೋ ಎನ್ನುವೆ.
								
 Like us!
 Follow us!