ಸುಧಾ, ಕರ್ಮವೀರ ಮುಂತಾದ ಕನ್ನಡ ವಾರಪತ್ರಿಕೆಗಳ ಸಾಲಿನಲ್ಲಿ ಬರುವ ಒಂದು ವಾರಪತ್ರಿಕೆ ‘ತರಂಗ’.‌ ನಲವತ್ತೆರಡು ವರ್ಷಗಳ ಹಿಂದೆ ಪ್ರಾರಂಭವಾಯಿತು.‌ ಉದಯವಾಣಿ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಮಣಿಪಾಲ್ ಪಬ್ಲಿಕೇಷನ್ಸ್ ನವರು ತರಲಾರಂಭಿಸಿದ ವಾರಪತ್ರಿಕೆ ಇದು‌‌. 

ನನ್ನ ಬಾಲ್ಯಕಾಲದ ನೆನಪುಗಳಲ್ಲಿ ‘ತರಂಗ’ ಆಪ್ತವಾಗಿ‌ ಸೇರಿ ಹೋಗಿದೆ. ಇದಕ್ಕೆ, ಮಂಗಳೂರಿನಲ್ಲಿ ಕಳೆದ ನನ್ನ ಬಾಲ್ಯದಲ್ಲಿ ಪುಸ್ತಕ ಪ್ರಿಯರಾದ ನನ್ನ ತಂದೆತಾಯಿಯರು ಮನೆಗೆ ತರಿಸುತ್ತಿದ್ದ ತರಂಗ ವಾರಪತ್ರಿಕೆ ಹಾಗೂ ಅದರಲ್ಲಿನ ‘ಬಾಲವನದಲ್ಲಿ ಕಾರಂತಜ್ಜ’ ಅಂಕಣಗಳು ಒಂದು ಕಾರಣವಾದರೆ, ಸೈಕಲ್ ಮೇಲೆ ಪತ್ರಿಕೆ ತರುವಾಗ ‘ತರಂ…ಗ…..ತರಂ…ಗ ‌…’ ಎಂದು ಖುಷಿಯಾಗಿ ಕೂಗುತ್ತಾ ಬರುತ್ತದ್ದ ಪೇಪರ್ ವಿತರಕರ ಧ್ವನಿ ಇನ್ನೊಂದು ಕಾರಣ. 

ಸದಾ ಶೋಭಿಸುತ್ತಿದ್ದ ನಗೆಮೊಗ ಆ ಹಿರಿಯರದು. ಸುಮಾರು ಅರವತ್ತೈದು ವರ್ಷ ಇದ್ದಿರಬೇಕು ಅವರಿಗೆ. ಕಚ್ಚೆಪಂಚೆ ಉಟ್ಟು, ಮೇಲೆ ಒಂದು ತಿಳಿಕಿತ್ತಳೆ ಬಣ್ಣದ ಶರಟನ್ನು ಧರಿಸುತ್ತಿದ್ದರು. ಅವರ ಶರಟು ಯಾವಾಗಲೂ ಬಹುತೇಕ ಅದೇ ಬಣ್ಣದ್ದು ಎಂದು ನನಗೆ ನೆನಪು.‌ ‘ತರಂ’ ಪದ ಹೇಳಿದ ಮೇಲೆ ಧ್ವನಿ ಎಳೆದು ನಂತರ ‘ಗ ‘ ಎನ್ನುತ್ತಿದ್ದರು. ನಾವು ಮಕ್ಕಳು ಅವರನ್ನು ಪೇಪರ್ ತಾತ ಅನ್ನುತ್ತಿದ್ದೆವು.‌ ಅವರು ಮತ್ತು ಅವರ ಸೈಕಲ್ ಸದಾ ಜೋಡಿಯಾಗೇ ಇದ್ದದ್ದು.  ನಮ್ಮ ಬಾಲ್ಯದ ಆಟದ ಬುದ್ಧಿಗೆ ಆ ಹಿರಿಯರ ಧ್ವನಿಯ ರಾಗವು ಪ್ರಿಯವಾಗುತ್ತಿತ್ತೇ ಹೊರತು, ಹೊಟ್ಟೆಪಾಡಿಗಾಗಿ ಆ ವಯಸ್ಸಿನಲ್ಲಿ ಕೆಲಸ ಮಾಡಬೇಕಾದ ಅವರ ಬದುಕಿನ‌ ಸಂಕಷ್ಟ-ಸವಾಲುಗಳು ಅರಿವಾಗುತ್ತಿರಲಿಲ್ಲ. ಈಗ ನೆನೆದರೆ, ತಮ್ಮ ಕಷ್ಟ ಲೆಕ್ಕಿಸದೆ ನಗುನಗುತ್ತಾ ನಮಗೆ ಪ್ರತಿದಿನ, ಪ್ರತಿವಾರ ಪತ್ರಿಕೆ ತಂದುಕೊಟ್ಟು ನಮ್ಮ ಬಾಲ್ಯವನ್ನು  ಅವರು ಎಷ್ಟು ಶ್ರೀಮಂತಗೊಳಿಸಿದ್ದರಲ್ಲ ಅನ್ನಿಸುತ್ತದೆ‌. 

ಅಂದು, ನಲತ್ತೆರಡು ವರ್ಷಗಳ ಹಿಂದೆ ನಮ್ಮ ಮನೆಗೆ ಬರಲಾರಂಭಿಸಿದ್ದ ‘ತರಂಗ’  ಈಗಲೂ, ಪ್ರತಿವಾರವೂ ಬರುತ್ತದೆ‌. ಈಗ ಪೇಪರ್ ತಾತನ ಬದಲು ಬೇರೆ ವ್ಯಕ್ತಿ ಬರುತ್ತಾರೆ, ಆದರೆ ‘ತರಂಗ’ವನ್ನು ನೋಡಿದಾಗೆಲ್ಲ ‘ತರಂ……ಗ’ತಾತ ನೆನಪಾಗುತ್ತಾರೆ. 

ನಮ್ಮ‌ ಬದುಕು ಎಷ್ಟೊಂದು ಜನರಿಗೆ ಋಣಿ ಅಲ್ಲವೇ!