ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡುವ ಎಲ್ಲ ಅಧ್ಯಾಪಕರ ಕಿವಿಗಳಿಗೂ ಪರೀಕ್ಷಾ ಸಮಯದಲ್ಲಿ ತಲುಪಿಯೇ  ತಲುಪುವ ಒಂದು ಕೋರಿಕೆ ಇದು.‌ ತರಗತಿಗೆ ಬಂದರೋ ಬಿಟ್ಟರೋ, ಪಾಠ ಕೇಳಿದರೋ ಬಿಟ್ಟರೋ ವಿದ್ಯಾರ್ಥಿಗಳು ತಮ್ಮ ಕನ್ನಡ ವಿಷಯದ ಪರೀಕ್ಷೆಗೆ ಒಂದು ಅಥವಾ ಎರಡು ದಿನ ಇದ್ದಾಗ ತಮ್ಮ ಅಧ್ಯಾಪಕರ ಮುಂದೆ ಈ  ‘ ಸಮ್ಮರಿ ಕೋರುವ’  ವಿನಂತಿಯನ್ನಂತೂ ಇಟ್ಟೇ ಇಡುತ್ತಾರೆ.‌  ಸಿರಿಗನ್ನಡವನ್ನು ಅವರು ನೆನಪಿಸಿಕೊಳ್ಳುವ ಪರಿ ಇದು!!          ‌   

“ಅಯ್ಯಯ್ಯೋ …ಏನೂ ಓದಿಲ್ವಲ್ಲಪ್ಪಾ…      ನಾಳೆ ಪರೀಕ್ಷೆಗೆ ಏನಪ್ಪಾ ಬರೆಯುವುದು!” ಎಂಬ ಚಿಂತೆ ಕಾಡಿದಾಗ ವಿದ್ಯಾರ್ಥಿಗಳಿಗೆ ನೆನಪಾಗುವ ಪದ ಅಂದರೆ ಈ ‘ಸಮ್ಮರಿ’.  ಮಕ್ಕಳು ಹೀಗೆ ಕೇಳಿದಾಗ ಅಧ್ಯಾಪಕರಿಗೆ ತುಸು ಸಿಟ್ಟು ಬಂದರೂ ಪರೀಕ್ಷೆಯನ್ನು ಮುಂದಿಟ್ಟುಕೊಂಡು ಅಸಹಾಯಕವಾಗಿ ಸಹಾಯ ಕೇಳುವ ಎಳೆಯ ಜೀವಗಳಿಗೆ ಇಲ್ಲ ಅನ್ನಲಾಗದ ಭಾವನೆಯೂ ಸೇರಿ, ಆ ಕೊನೆಯ ಕ್ಷಣಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ‘ ಸಮ್ಮರಿ’ ( ಸಾರಾಂಶ, ತಾತ್ಪರ್ಯ, ಮುಖ್ಯಾಂಶ…. ಇನ್ನೇನೆಲ್ಲ ಹೆಸರುಗಳಿಂದ ಕರೆಯಬಹುದು  ಈ ಯುದ್ಧಕಾಲೇ ಶಸ್ತ್ರಾಭ್ಯಾಸವನ್ನು!?) ಹೇಳಿ ‘ಚೆನ್ನಾಗಿ ಬರೆ, ಶುಭವಾಗಲಿ’ ಎಂದು ಶುಭ ಹಾರೈಸುವುದಾಗುತ್ತದೆ. ‘ಇನ್ನು ಮುಂದೆ ಹೀಗೆ ಕೊನೆಯ ಘಳಿಗೆ ತನಕ ಬಾಕಿ ಇಟ್ಕೋಬಾರದು, ಮುಂಚೆಯೇ ಓದಿಕೋಬೇಕು’ ಎಂಬ ರೂಢಿಗತ ಎಚ್ಚರಿಕೆ ಕೊಡುವುದು, ಆ ಹುಡುಗನೋ‌, ಹುಡುಗಿಯೋ ” ಓಕೆ ಮ್ಯಾಮ್, ಸಾರಿ ಮ್ಯಾಮ್, ಥ್ಯಾಂಕ್ಯೂ ಮ್ಯಾಮ್ ” ಎಂದು ಉಲಿಯುವುದು ಸಹ ಈ ಸಮ್ಮರಿ ಪ್ರಸಂಗದ ಭಾಗವೇ ಅನ್ನಿ.  ಮತ್ತೆ ಮುಂದಿನ ಪರೀಕ್ಷೆಗೆ ಯಾರೋ ಒಬ್ಬರು ಈ ‘ಸಮ್ಮರಿ’ ಕೇಳಿಯೇ ಕೇಳುತ್ತಾರೆ, ಅಧ್ಯಾಪಕರು ತುಸು ಗೊಣಗಿಯೋ,‌ ನಿಟ್ಟುಸಿರಿಟ್ಟೋ ‘ಸಮ್ಮರಿ’ ಹೇಳಿಯೇ ಹೇಳುತ್ತಾರೆ!  ಅಂತೂ ಪರೀಕ್ಷೆಗಳು ಎಲ್ಲಿಯವರೆಗೂ ಇರುತ್ತವೋ ಅಲ್ಲಿಯವರೆಗೂ ಈ ಸಮ್ಮರಿಯ ವಾಗ್ಝರಿ…ಜೊತೆಗೆ ‘ಡೋಂಟ್ ವರಿ’ ಇದ್ದೇ ಇರುತ್ತದೆ ಅನ್ನಿಸುತ್ತೆ!! 

‘ಸಮ್ಮರಿಗನ್ನಡ’ಕ್ಕೆ  ಒಮ್ಮೆ ಉಘೇ ಅನ್ನಿ!