ಯಕ್ಷಗಾನ. ಈ ಪದ ಕೇಳಿದ ತಕ್ಷಣ ಚಂಡೆ ವಾದ್ಯದ ಶ್ರೀಮಂತ ಧ್ವನಿ, ಅರಳಿ ಎಲೆಯಾಕಾರದ ಸುಂದರ ಕಿರೀಟವಿಟ್ಟ ಪಾತ್ರಧಾರಿಗಳು, ಅವರ ಬಣ್ಣಬಣ್ಣದ ಉಡುಪು – ಒಡವೆಗಳು, ಕಣ್ಸೆಳೆವ ಮುಖಬಣ್ಣ…ಜೊತೆಗೆ ಆಕರ್ಷಕ ಕುಣಿತ, ಅಷ್ಟೇ ಅಲ್ಲದೆ ಶೈಲಿಯುತ ಮಾತು….ಇವೆಲ್ಲ ನೆನಪಾಗುತ್ತವೆ ಅಲ್ಲವೇ? ನಮ್ಮ  ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎರಡೂ ಜಿಲ್ಲೆಗಳಲ್ಲಿ ತುಂಬ ಪ್ರಸಿದ್ಧವಾಗಿರುವ ಪರಂಪರಾನುಗತ ಕಲೆ ಇದು. ‌’ಕಡಲ ತೀರದ ಭಾರ್ಗವ’ನೆಂದು ಹೆಸರಾದ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ.ಕೆ.ಶಿವರಾಮ ಕಾರಂತರು ತುಂಬ ಇಷ್ಟ ಪಟ್ಟು ಮರುಜೀವನ ಕೊಟ್ಟು ಈ ಕಲೆಯ ಅಭಿವೃದ್ಧಿಗೆ ಕಾರಣರಾದರು.‌

ಯಕ್ಷಗಾನ ಕಲೆಯ ಒಂದು ಮುಖ್ಯ ಅಂಶ ಅಂದರೆ ಅದರ ವಾಚಿಕಾಭಿನಯ, ಅಂದರೆ ಮಾತಿನ ಮೂಲಕ ಕಥೆಯನ್ನು ಹೇಳುವುದು‌ ಮತ್ತು ಅಭಿನಯಿಸುವುದು.‌ ಇಲ್ಲಿನ ಪಾತ್ರಧಾರಿಗಳು ಬೇರೆ ಪಾತ್ರಧಾರಿಗಳ ಜೊತೆ ಮಾತ್ರವಲ್ಲ, ಹಾಡು ಹೇಳುವ ಭಾಗವತರ ಜೊತೆ ಕೂಡ ” ಬಲ್ಲಿರೇನಯ್ಯಾ…”  ಎಂದು ಮಾತು ಶುರು ಮಾಡಿ ಕಥೆಯನ್ನು ಮುಂದುವರಿಸುತ್ತಾರೆ. 

ಬೇಸಗೆಯಲ್ಲಿ ರಂಗಸ್ಥಳದ ಮೇಲೆ ಆಡುವ ಯಕ್ಷಗಾನ ಬಯಲಾಟದ ಮಾತುಗಾರಿಕೆಯದ್ದು ಒಂದು ಹದವಾದರೆ, ಮಳೆಗಾಲದಲ್ಲಿ  ದೇವಸ್ಥಾನಗಳು ಮತ್ತು ಮನೆಯ ಜಗಲಿಗಳಲ್ಲಿ ಪ್ರದರ್ಶಿತವಾಗುವ ತಾಳಮದ್ದಳೆಯ ಮಾತಗಾರಿಕೆಯದ್ದು ಇನ್ನೊಂದೇ ಹದ. ಇಲ್ಲಿ  ಬಣ್ಣ, ಕುಣಿತಗಳ ಆಕರ್ಷಣೆ ಇಲ್ಲದೆ ಕೇವಲ ಮಾತಿನ ಮೇಲೆಯೇ ಪ್ರದರ್ಶನವನ್ನು ಗೆಲ್ಲಿಸಬೇಕು. ಇದರಲ್ಲಿ ಅರ್ಥಧಾರಿಗಳ  (ಪಾತ್ರಗಳಾಗಿ ಮಾತಾಡುವವರ)  ಮಾತಿನ ಶೈಲಿ, ಜಾಣ್ಮೆ, ಸಮಯಸ್ಫೂರ್ತಿ ಮತ್ತು ಚಾಕಚಕ್ಯತೆ ತುಂಬ ಮುಖ್ಯ. 

ಇಂದು ಎಲ್ಲ ಆಧುನಿಕತೆ, ಸಮಾಜಿಕ‌ ಮಾಧ್ಯಮಗಳು, ದೂರದರ್ಶನ, ಚಲನವಾಣಿಗಳ ಹೊಸ ಪ್ರಪಂಚದಲ್ಲಿಯೂ ಯಕ್ಷಗಾನ, ತಳಮದ್ದಳೆಗಳು ಅಳಿಯದೆ ಉಳಿದಿರುವುದರಲ್ಲಿ ಈ ಮಾತುಗಾರಿಕೆಯ ಪಾತ್ರವೂ ತುಂಬ ಇದೆ. ಈ ಅದ್ಭುತ ಮಾತಿನ ಮೋಡಿಯನ್ನು ನಮ್ಮ‌ ಮಕ್ಕಳು ಮತ್ತು ಯುವ ಪೀಳಿಗೆಗೆ ಹೆಚ್ಚಾಗಿ ಪರಿಚಯಿಸುವ ಕೆಲಸ ಆಗಬೇಕಿದೆ.