ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಗಳ ವ್ಯಾಸಂಗ ಕ್ರಮದಲ್ಲಿ, ಒಂದು ಅರ್ಧವರ್ಷ(ಸೆಮಿಸ್ಟರ್)ದಲ್ಲಿ ಕನ್ನಡ ಭಾಷಾ ಚಟುವಟಿಕೆಯ ಮೂಲಕ ವಿದ್ಯಾರ್ಥಿನಿಯರ ಬರಹವನ್ನು ತಿದ್ದುವ ಪ್ರಯತ್ನ ಮಾಡುತ್ತೇವೆ. ಇದರ ಅಂಗವಾಗಿ ಈಚೆಗೆ ಒಂದು ದಿನ, ಹೋಲಿಕೆ ಇರುವ ಪದಗಳ-ಅಕ್ಷರಗಳ ಉಚ್ಚಾರಣೆಗಳ ನಡುವಿನ ವ್ಯತ್ಯಾಸವನ್ನು ಕಲಿಸುತ್ತಿದ್ದಾಗ, ನನಗೆ ಒಂದು ಬೇಸ್ತು ಬೀಳಿಸುವ ಅನುಭವ ಆಯಿತು.
ಅಂದಿನ ಪಾಠದ ವಿಷಯ ‘ಅಕಾರ-ಹಕಾರದ ನಡುವಿನ ವ್ಯತ್ಯಾಸ’. ನಾನು ಮೊದಲು ಅಗಸ, ಅನ್ಯ, ಅಭ್ಯಂತರ, ಅಸಹಜ, ಅರವಟ್ಟಿಗೆ, ಅಕಾರಣ…..ಇಂತಹ, ಅಕಾರದಿಂದ ಶುರುವಾಗುವ ಅಷ್ಟೇನೂ ಕಷ್ಟವಲ್ಲದ ಹತ್ತು ಪದಗಳನ್ನು ಬರೆಸಿ, ಇವುಗಳನ್ನು ಬಳಸಿಕೊಂಡು ವಾಕ್ಯ ಮಾಡುವಂತೆ ಮಕ್ಕಳಿಗೆ ಹೇಳಿದೆ. ಮೊದಲನೆಯ ಅರ್ಧವರ್ಷದ ಬಿ.ಎಸ್ಸಿ. ವಿದ್ಯಾರ್ಥಿನಿಯರು ಅವರು. ಪದಗಳನ್ನು ಬರೆಸಿದ ನಂತರ ಹೀಗೆಯೇ ಒಬ್ಬ ವಿದ್ಯಾರ್ಥಿನಿಯನ್ನು ಸಹಜವಾಗಿ ಕೇಳಿದೆ – “ಈ ಹತ್ತು ಪದಗಳಲ್ಲಿ ಎಷ್ಟು ಪದಗಳ ಅರ್ಥ ನಿಂಗೆ ಗೊತ್ತು, ಹೇಳಮ್ಮ?”. ಅವಳ ಉತ್ತರ ಬಾಣದಂತೆ ಬಂತು ನೋಡಿ – ” ಹತ್ರಲ್ಲಿ ಒಂದು ಪದಕ್ಕೂ ಅರ್ಥ ಗೊತ್ತಿಲ್ಲ ಮ್ಯಾಮ್”. ಅಯ್ಯೋ!!! ನನಗೆ ಬೆಚ್ಚಿ ಬೀಳುವಂತಾಯಿತು. “ಯಾಕಮ್ಮ, ಮನೆಯಲ್ಲಿ ಯಾವ ಭಾಷೆ?” ಅಂತ ಕೇಳಿದೆ. ‘ಕನ್ನಡ’ ಅಂದಳು!! ಹೇಗಾಗಿರಬೇಡ ಹೇಳಿ ನನಗೆ!!
ಮಕ್ಕಳಲ್ಲಿ ಓದುವ ಅಭ್ಯಾಸ ಕಡಿಮೆ ಆಗಿರುವುದು, ವಿದ್ಯುನ್ಮಾನ ‘ನೋಡು ಮಾಧ್ಯಮ’ಗಳ ಅತಿಹೆಚ್ಷಳ, ಭಾಷಾಕಲಿಕೆಯ ಬಗೆಗೆ ಪದವಿಪೂರ್ವ ತರಗತಿಗಳಲ್ಲಿ ಮೂಡುವ ನಿರ್ಲಕ್ಷ್ಯ, ಭಾಷೆ-ಸಾಹಿತ್ಯಗಳನ್ನು ‘ಲಾಭಕರ ಅಲ್ಲದ’ ವಿಷಯಗಳಡಿಯಲ್ಲಿ ಸೇರಿಸಿರುವುದು…..ಏನೆಲ್ಲ ಕಾರಣಗಳಿರಬಹುದು ಈ ದುರವಸ್ಥೆಗೆ? …ತುಂಬ ಯೋಚಿಸುತ್ತಿದ್ದೇನೆ….