ಜೀವನ ಎಂಬುದು ಅನೂಹ್ಯ ಘಟನಾವಳಿಯ ಸರಮಾಲೆ.

ಸಣ್ಣ ಹುಡುಗಿಯಾಗಿದ್ದಾಗಿನಿಂದ ನಾನು ಶಾಲೆಗೆ ಹೋಗುವುದರ ಜೊತೆಜೊತೆಗೆ ಕರ್ನಾಟಕ ಸಂಗೀತ ಹಾಗೂ ಭರತನಾಟ್ಯ ತರಗತಿಗೆ ಹೋಗುತ್ತಿದ್ದವಳು. ಪದವಿಪೂರ್ವ ಹಾಗೂ ಪದವಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ಓದಿದವಳು‌. ನಮ್ಮ ವಿದ್ಯಾಭ್ಯಾಸದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಎಂಬ ಮೂರು ದಾರಿಗಳು ಗೆರೆ ಕೊರೆದಂತೆ ಸ್ಪಷ್ಟವಾಗಿದ್ದವಲ್ಲ. ಇದರ ಜೊತೆಗೆ, ಬೆರಳಚ್ಚು ಮತ್ತು‌ ಶೀಘ್ರಲಿಪಿಗಳು ವಾಣಿಜ್ಯ ವಿದ್ಯಾರ್ಥಿಗಳು ಕಲಿಯುವ ವಿಷಯಗಳು ಎಂಬ ಭಾವನೆಯೂ ನನ್ನಲ್ಲಿ ಯಾಕೋ ಏನೋ ಬಹಳ ಗಟ್ಟಿಯಾಗಿತ್ತು! 

ನಾನು ಬಿ.ಎಸ್ಸಿ.‌ ಪದವಿ ಪೂರೈಸಿದ ವರ್ಷದಲ್ಲಿ ಅಂದರೆ 1991ರಲ್ಲಿ ಗಣಕಯಂತ್ರಗಳು ಇನ್ನೂ‌ ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ಇನ್ನು, ಸದಾ ಹಾಡು, ಭರತನಾಟ್ಯಗಳಲ್ಲಿ ತಲ್ಲೀನಳಾಗಿ, ಸ್ನಾತಕೋತ್ತರ ಪದವಿಗಾಗಿ ಕನ್ನಡ ವಿಷಯವನ್ನು ಆಯ್ದುಕೊಂಡವಳು ನಾನು.‌ ಸಂಗೀತ, ನಾಟ್ಯ, ಸಾಹಿತ್ಯ, ಅಧ್ಯಾಪನ ಈ ಕ್ಷೇತ್ರಗಳಲ್ಲಿ ಆಸಕ್ತಳಾಗಿದ್ದವಳು. ಹೀಗಾಗಿ ನಾನು ಬೆರಳಚ್ಚು ಮಾಡುವುದು, ಗಣಕ ಯಂತ್ರಗಳಲ್ಲಿ ಕೆಲಸ ಮಾಡುವುದು – ಈ  ಬಗ್ಗೆ ಅಷ್ಟಾಗಿ ಯೋಚಿಸಿರಲಿಲ್ಲ. 

ಆದರೆ….ನಮ್ಮ ಯೋಚನೆಗೂ ಕಾಲದ ಯೋಜನೆಗೂ ಸಂಬಂಧ ಎಲ್ಲಿದೆ ಹೇಳಿ! ನಮ್ಮ ಯೋಜನೆಗಳೆಲ್ಲವೆನ್ನೂ ಅಡಿಮೇಲು ಮಾಡುವ ಹಾಗೂ ಎಲ್ಲದರಲ್ಲೂ ತನ್ನದೇ ಅಧಿಪತ್ಯ ಸಾಧಿಸುವ ಕಾಲರಾಯನಿಗೊಂದು ನಮಸ್ಕಾರ! 1995ರ ನಂತರ ಇದ್ದಕ್ಕಿದ್ದಂತೆ ಗರಿಗೆದರಿಕೊಂಡು ಸರ್ವವ್ಯಾಪಿಯಾಗಲಾರಂಭಿಸಿದ ಮಾಹಿತಿ ತಂತ್ರಜ್ಞಾನದಿಂದಾಗಿ ಎಲ್ಲೆಲ್ಲೂ ಗಣಕಯಂತ್ರಗಳು ರಾರಾಜಿಸಲಾರಂಭಿಸಿದವು! ನಿಧನಿಧಾನವಾಗಿ ಗಣಕಯಂತ್ರದಲ್ಲೂ ಕನ್ನಡ ಕಾಣಿಸಲಾರಂಭಿಸಿತು. ಒಂದು ದಿನ, ನನ್ನ ಪಿ.ಎಚ್.ಡಿ. ಮಾರ್ಗದರ್ಶಕರಾದ ಡಾ.ಡಿ.ಆರ್.ನಾಗರಾಜ್ ಅವರನ್ನು ಭೇಟಿ ಮಾಡಲು, ಆಗ ಎ.ಡಿ.ಎ.ರಂಗಮಂದಿರದ ಉಪ್ಪರಿಗೆಯಲ್ಲಿದ್ದ ಅವರ ಕಛೇರಿಯ ಹೊರಗೆ ನಾನು ಕಾಯುತ್ತಾ ಕುಳಿತಿದ್ದಾಗ, ಅಲ್ಲಿಗೆ ಬಂದಿದ್ದ ಪರಿಚಿತ ಕಲಾವಿದೆಯೊಬ್ಬರು, ನನ್ನ ಪಿಎಚ್.ಡಿ. ಎಲ್ಲಿಗೆ ಬಂತು, ಹೇಗೆ ಮಾಡುತ್ತಿದ್ದೇನೆ …ಇತ್ಯಾದಿ ಕುಶಲೋಪರಿ ವಿಚಾರಿಸುತ್ತಾ, ಒಂದು ಪ್ರಶ್ನೆ ಕೇಳಿಬಿಟ್ಟರು. ಅವರು ಆ ಪ್ರಶ್ನೆಯನ್ನು ಲೋಕಾಭಿರಾಮವಾಗಿ ಕೇಳಿದರೋ ಏನೋ, ನನಗೆ ಮಾತ್ರ ಆ ಪ್ರಶ್ನೆ ಮನಸ್ಸಿಗೆ ನಾಟಿಬಿಟ್ಟಿತು. ಆ ಪ್ರಶ್ನೆ ಯಾವುದು ಗೊತ್ತೇ? ‘ನೀವು ಪ್ರಬಂಧಾನ ಕೈಯಲ್ಲೇ ಬರೀತೀರಾ? ‘ ಎಂಬುದು. ಬಹುಶಃ,  ಅದು ಕನ್ನಡ ಬರವಣಿಗೆಗೆ  ಗಣಕಯಂತ್ರದ ಬಳಕೆ ಪ್ರಾಂಭವಾದ‌‌ ಕಾಲವಾದ ಕಾರಣ, ಸಹಜವಾಗಿ ಆಕೆ ಆ ಪ್ರಶ್ನೆ ಕೇಳಿರಬೇಕು‌. ನನಗೆ ಭಾರೀ ಕಸಿವಿಸಿ ಆಯಿತು, ‘ಛೆ, ಗಣಕಯಂತ್ರದ ಬಳಕೆಯಿರಲಿ, ಒಂದು ಬೆರಳಚ್ಚು ಮಾಡುವುದು ಸಹ ನನಗೆ ಗೊತ್ತಿಲ್ಲವಲ್ಲಪ್ಪ’ ಎಂದು! ಇದರ ಜೊತೆಗೆ ಬ್ರಿಟಿಷ್ ಲೈಬ್ರೆರಿಗೆ ಆ ಸಮಯದಲ್ಲಿ ಒಮ್ಮೆ ಹೋಗಿದ್ದಾಗ ‘ಪ್ಲೀಸ್ ಸ್ಕ್ರೋಲ್ ಅಂಡ್ ಚೂಸ್ ದ ಬುಕ್ ಯು ನೀಡ್ ಮೇಡಂ’ ಎಂದು ಒಂದು ಗಣಕಯಂತ್ರದ ಮುಂದೆ ನನ್ನನ್ನು ನಿಲ್ಲಿಸಿಬಿಟ್ಟಿದ್ದರು‌! ನನಗೆ ಕಕ್ಕಾಬಿಕ್ಕಿಯಾಗಿ ನಾನೊಬ್ಬ ನಿರಕ್ಷರ‌ಕುಕ್ಷಿಯೋ ಎಂಬ ಭಾವನೆ ಬಂದುಬಿಟ್ಟಿತು!!

          ಆಗಲೇ ನೋಡಿ, ನಾನು ನಿರ್ಧರಿಸಿದ್ದು, ಏನಾದರಾಗಲಿ, ನಾನು ಬೆರಳಚ್ಚು ಮಾಡುವುದನ್ನು ಮತ್ತು ಗಣಕಯಂತ್ರ ಬಳಸುವುದನ್ನು ಕಲಿಯಲೇಬೇಕು ಎಂದು. ಆಗ ನನಗೆ ಸುಮಾರು 31 ವರ್ಷ ವಯಸ್ಸಿರಬೇಕು( ಈಗ 52). ಸರಿ, ನಮ್ಮ ಮನೆಯ ಹತ್ತಿರ ಇದ್ದ ಒಂದು ಬೆರಳಚ್ಚು ಕಲಿಕಾಕೇಂದ್ರಕ್ಕೆ ಹೋಗಿ ಮೊದಲು “ಎ ಎಸ್ ಡಿ ಅಫ್ ಜಿ ಎಫ್…..ಕ್ಯೂ ಡಬ್ಲ್ಯೂ ಇ ಆರ್ ಟಿ ಆರ್….” ನ ಸಂಪ್ರದಾಯಿಕ ವಿಧಾನದಲ್ಲಿ ಕಲಿಯಲಾರಂಭಿಸಿದೆ ಬೆರಳಚ್ಚು ಮಾಡುವುದನ್ನು! “ಎಂಟು ವರ್ಷಕ್ಕೆ ನನ್ನ ಮಗ ದಂಟು ಅಂದ” ಎಂಬ ಗಾದೆಯ ಹಾಗೆ. ಜೊತೆಗೆ ನನ್ನ ಮನೆಯವರಿಗೆ ಪರಿಚಿತವಾಗಿದ್ದ ಗಣಕಯಂತ್ರ ಕಲಿಕಾಕೇಂದ್ರಕ್ಕೂ ಸೇರಿದೆ, ಅದರಲ್ಲಿ ಒಂದಿಷ್ಟು ಮೂಲ ಪಾಠ ಕಲಿಯೋಣ ಅಂತ. 

ಹೀಗೇ ಸಾಹಸ ಮಾಡುತ್ತಾ, ಬಸವನ ಹುಳುವಿನ ವೇಗದಲ್ಲಿ ಈ ಹೊಸ ಕೌಶಲ್ಯ ಕಲಿಯುತ್ತಿದ್ದಾಗ, ನನ್ನ ಕಾಲೇಜಿನ ಮಹಿಳಾ ಸಹೋದ್ಯೋಗಿಯೊಬ್ಬರು (ಆಗ ಕೋಲಾರದ  ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿ ಕೆಲಸ ಮಾಡ್ತಿದ್ದೆ ನಾನು), ಬೆಂಗಳೂರಿನ ಜಯನಗರದಲ್ಲಿದ್ದ ‘ಸೂಪರ್ ಸಾನಿಕ್ ಕಂಪ್ಯೂಟರ್ ಟೈಪಿಂಗ್ ಇನ್ಸ್ಟಿಟ್ಯೂಟ್’ ಬಗ್ಗೆ ಹೇಳಿದರು. ನಮ್ಮಂತಹ ‘ತಡಾಗಮನ ವಿದ್ಯಾರ್ಥಿ’ಗಳಿಗಾಗಿಯೇ ಎಂಬಂತೆ, ಅರುಣ್ ಕುಮಾರ್ ಎಂಬ ಪುಣ್ಯಾತ್ಮರೊಬ್ಬರು ಸ್ಥಾಪಿಸಿದ್ದ ಕಲಿಕಾ ಸಂಸ್ಥೆಯಂತೆ ಅದು. ಅಲ್ಲಿ ಹೊಸ ವಿಧಾನದಲ್ಲಿ ಗಣಕಯಂತ್ರದ ಬೆರಳಚ್ಚನ್ನು ಕಲಿಸುತ್ತಾರೆ, ಕೇವಲ ಒಂದು ವಾರದಲ್ಲಿ ಅಂದರು ಅವರು! ನನಗೆ ಆಶ್ಚರ್ಯ ಮತ್ತು ಖುಷಿ ಎರಡೂ ಆದವು. 

ಸರಿ. ನಂತರ,  ಜಯನಗರದಲ್ಲಿ ಆ ಕಲಿಕಾ ಕೇಂದ್ರವನ್ನು ಹುಡುಕಿಕೊಂಡು ಹೋಗಿ, ಶುಲ್ಕ ಕಟ್ಟಿ, ನಮ್ಮ ವಿಜಯನಗರದಲ್ಲೇ ಇದ್ದ ಅದರ ಶಾಖೆಯೊಂದರಲ್ಲಿ  ನಾನು ಬೆರಳಚ್ಚು ಮಾಡುವುದನ್ನು ಕಲಿಯಲಾರಂಭಿಸಿದೆ. ಹೌದು, ನನ್ನ ಸಹೋದ್ಯೋಗಿ ಹೇಳಿದ್ದು ನಿಜ, ಅಲ್ಲಿ ಹೊಸ ರೀತಿಯಲ್ಲಿ‌ ಅಂದರೆ,

ಎಬಬಿಎ, ಬಿಸಿಸಿಬಿ, ಸಿಡಿಡಿಸಿ, ಡಿಇಇಡಿ …..ಎಂದು ಬೆರಳುಗಳನ್ನು ಉದ್ದುದ್ದಕ್ಕೆ ಚಲಿಸುತ್ತಾ  ಬೆರಳಚ್ಚು ಮಾಡುವುದನ್ನು ಕಲಿಸುತ್ತಾರೆ, ಮತ್ತು ಹೀಗೆ ಕಲಿತರೆ,

ನಿಜವಾಗಿಯೂ ಒಂದು ವಾರ – ಹತ್ತು ದಿನದಲ್ಲಿ‌ ತಕ್ಕಮಟ್ಟಿಗೆ ಬೆರಳಚ್ಚು ಮಾಡುವುದು ಕರಗತವಾಗುತ್ತೆ. ಇದರ ಜೊತೆಗೆ ಕನ್ನಡದ ನುಡಿ ತಂತ್ರಾಂಶವನ್ನು ಸಹ ನಮ್ಮ ಪಕ್ಕದ ಮನೆಯವರ ಸಹಾಯದಿಂದ ಕಲಿತೆ ನಾನು.  ಒಟ್ಟಿನಲ್ಲಿ,  ನನ್ನ ಮೂವತ್ತೆರಡನೆಯ ವಯಸ್ಸಿನಲ್ಲಿ  ಬರವಣಿಗೆ ಹಾಗು ಗಣಕಯಂತ್ರವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವುದನ್ನು ಪ್ರಾರಂಭಿಸಿದೆ ಅನ್ನಬಹುದು! 

ಹಾಂ…..ಇಂದು ಬರೆಯುವುದು ಅಂದರೆ  ನನ್ನ ಮಟ್ಟಿಗೆ ಗಣಕಯಂತ್ರ ತೆರೆಯುವುದು ಅಥವಾ ಚಲನವಾಣಿಯಲ್ಲಿ ಬೆರಳಚ್ಚು ಮಾಡುವುದು ಎನ್ನಿಸುವಷ್ಟರ ಮಟ್ಟಿಗೆ ‘ಉಪಕರಣದಲ್ಲಿನ ಬರವಣಿಗೆ’ ಅಭ್ಯಾಸ ಆಗಿಬಿಟ್ಟಿದೆ ನನಗೆ! 

ತಂಬೂರಿ, ಲೇಖನಿ, ಗೆಜ್ಜೆಗಳ ನನ್ನ ಲೋಕಕ್ಕೆ ಗಣಕಯಂತ್ರ ಪ್ರವೇಶಿಸಿದ್ದು ಹೀಗೆ! ಕಾಲ ಬದಲಾದಂತೆ ನಾವು ಬದಲಾಗಲೇಬೇಕಲ್ಲ. 

ಒಂದು ಮಾತು ಹೇಳಬೇಕು. ಗಣಕಯಂತ್ರ ಬರವಣಿಗೆ ಕಲಿಯುವಾಗ ಅದು ತುಂಬ ಕಷ್ಟ ಅನ್ನಿಸಿದರೂ,‌ ಅದರಲ್ಲಿನ ತಿದ್ದುಪಡಿಯ ಸಲೀಸು, ಮಿಂಚಂಚೆಯ ಆರಾಮ, ಮತ್ತು ಗಣಕಯಂತ್ರದಲ್ಲಿ ಬರೆದ ಮೇಲೆ ಮುದ್ರಣದಲ್ಲಿ ಉಂಟಾಗುವ  ಸುಲಭತೆ, ಕ್ಷಣ ಮಾತ್ರದಲ್ಲಿ ಬರವಣಿಗೆಯನ್ನು ಬೇರೆಯವರಿಗೆ ಕಳಿಸಬಹುದಾದ ಅನುಕೂಲ ಇದೆಲ್ಲವನ್ನು ನೋಡುವಾಗ ಕಲಿತದ್ದು  ತುಂಬ ಒಳ್ಳೆಯದಾಯ್ತು ಅನ್ನಿಸುತ್ತದೆ. ಜೀವನದಲ್ಲಿ ಕಲಿಕೆಗಿಂತ ದೊಡ್ಡ ಸಂಪತ್ತಿಲ್ಲ.‌ ಏನಂತೀರಿ?