ನಾವು ಕನ್ನಡಿಗರು ನಮ್ಮ ಮಕ್ಕಳಿಗೆ ಹೆಸರಿಡುವ ರೀತಿಯ ಬಗ್ಗೆ ನನಗೆ ತುಂಬ ಕುತೂಹಲ ಇದೆ. ಮನೆದೇವರ ಹಸರು, ಬಾಳಿ ಬದುಕಿದ ಮನೆಹಿರಿಯರ ಹೆಸರು, ತಮ್ಮ ಅಭಿಮಾನ ಗಳಿಸಿದ ರಾಜಕೀಯ ನಾಯಕರ, ಕವಿಗಳ, ಸಿನಿಮಾನಟರ ಹೆಸರು, ಸ್ನೇಹಿತರ ಹೆಸರು, ಅಪ್ಪ ಅಮ್ಮನ ಹೆಸರಿನ ಮೊದಲಕ್ಷರಗಳನ್ನು ಸೇರಿಸಿದ ಹೆಸರು, ಇನ್ನು ಮುಂದೆ ಹೆಣ್ಣುಮಗು ಹುಟ್ಟಬಾರದು ಎಂದು ಬಯಸಿ ಇಟ್ಟಂತಹ ಸಾಕಮ್ಮ ಎಂಬ ಹೆಸರು!!!…..ಈ ನಡುವೆ ಗೂಗಲ್ ನಲ್ಲಿ ನೋಡಿ ಅರ್ಥ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಂತೂ ಇಟ್ಟ ಚಿತ್ರವಿಚಿತ್ರ ಹೆಸರು…ಒಂದೇ ಎರಡೇ….ನಮ್ಮ ನಾಡಿನಲ್ಲಿ ಹೆಸರಿಡುವ ರೀತಿಯನ್ನು ಕುರಿತು ಸುದೀರ್ಘವಾದ ಬರವಣಿಗೆ ಬರೆಯುವಷ್ಟು ವಿಷಯಗಳಿವೆ. ಭಾಷಾಶಾಸ್ತ್ರಜ್ಞರು ಮತ್ತು ನಮ್ಮಂತಹ ಕನ್ನಡ ಅಧ್ಯಾಪಕರು ಈ ಬಗ್ಗೆ ಸದಾ ಕುತೂಹಲಿಗಳಾಗಿರುತ್ತಾರೆ. ಡಾ.ಕೆ.ವಿ.ನಾರಾಯಣ ಅವರ ‘ಭಾಷೆಯ ಮಾಂತ್ರಿಕತೆ’ ಎಂಬ ಲೇಖನ ನೆನಪಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಈಚೆಗೆ ನನಗಾದ ಅನುಭವವೊಂದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನ ಎರಡನೆಯ ಮಗಳು ಪ್ರಣತಿಯು ಓದುತ್ತಿರುವ ಸ್ಥಳವಾದ ಮಣಿಪಾಲಕ್ಕೆ ಕಳೆದ ವಾರ ಹೋಗಿದ್ದೆ ನಾನು. ತೆಂಗಿನೆಣ್ಣೆ ಹಾಕಿ ಮಾಡುವ ಚುರುಮುರಿ ನನಗೆ ಇಷ್ಟ ಎಂಬ ಕಾರಣಕ್ಕಾಗಿ ನನ್ನ ಮಗಳು ಒಂದೆಡೆ ನನ್ನನ್ನು ಕರೆದುಕೊಂಡು ಹೋದಳು. ದಾರಿಬದಿಯಲ್ಲಿ ಒಂದು ಪುಟ್ಟ ಮೇಜಿನ ಮೇಲೆ ಅಗತ್ಯ ಸಾಧನಸಾಮಗ್ರಿಗಳನ್ನು ಇಟ್ಟುಕೊಂಡು, ಸುಮಾರು ಮೂವತ್ತೈದು ವಯಸ್ಸಿನ ಗಂಡಸೊಬ್ಬರು ಅಲ್ಲಿ ಚುರುಮುರಿ ಮಾಡುತ್ತಾ ಮಾರುತ್ತಿದ್ದರು. ಅವರ ಬಳಿ ನಾನು ಹೀಗೇ ಲೋಕಾಭಿರಾಮವಾಗಿ ಮಾತಾಡುತ್ತಾ ”ನಿಮ್ಮ ಹೆಸರೇನು?” ಎಂದು ಕೇಳಿದೆ. ಬಂದ ಉತ್ತರ ನನ್ನನ್ನು ಒಂದು ಕ್ಷಣ ಅವಾಕ್ಕಾಗಿಸಿತು – “ನನ್ನ ಹೆಸರು ಯಮನೂರಪ್ಪ ಮೇಡಮ್ಮು”!!!. ಹಾಂ…? ಯಮನೂರಪ್ಪ! ಇದೆಂತಹ ಹೆಸರು!? ಯಾಕೆ ಹೀಗೆ ಹೆಸರಿಡುತ್ತಾರೆ!? ಹೆಸರು ಹೇಳುವುದಕ್ಕೇ ಜನ ಭಯ ಪಡುವ, ನೆನೆದ ತಕ್ಷಣ ಕೋಣ, ಪಾಶ, ಚಿತ್ರಗುಪ್ತ, ನರಕಗಳ ನೆನಪು ತರುವಂತಹ ಸಾವಿನ ದೇವತೆಯ ಊರಿನ ಹೆಸರಿಟ್ಟಿದ್ದಾರಲ್ಲ ಇವರಿಗೆ ಇವರ ಹೆತ್ತವರು! ಸದಾ ಪದಕುತೂಹಲಿಯಾದ ನನ್ನ ಬುದ್ಧಿ ನನ್ನನ್ನು ಸುಮ್ಮನಿರಲು ಎಲ್ಲಿ ಬಿಡುತ್ತೆ! ಕೇಳಿಯೇ ಬಿಟ್ಟೆ ನಾನವರನ್ನು – ” ಯಾಕೆ ನಿಮ್ಗೆ ನಿಮ್ಮ ತಂದೆತಾಯ್ಗಳು ಈ ಹೆಸರಿಟ್ರು?”. ಅವರ ಉತ್ತರ ಹೀಗಿತ್ತು – ” ನಾವು ಹೈದರಾಬಾದ್ ಕರ್ನಾಟಕದ ಕಡೆಯವರು. ನನ್ನ ಅಪ್ಪ ಅಮ್ಮಂಗೆ ಹುಟ್ಟಿದ್ದು ಹದಿನಾಲ್ಕು ಜನ ಮಕ್ಳು ಮೇಡಮ್ಮು. ಆದರೆ ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಮಕ್ಳು ಸತ್ತು ಸತ್ತು ಉಳಿದದ್ದು ಆರು ಜನ ಅಷ್ಟೇ. ನಾನು ಹುಟ್ಟಿದಾಗ ಎಲ್ಲಿ ಸತ್ತು ಹೋಗ್ತೀನೋ ಎಂಬ ಭಯದಿಂದ ನನ್ನ ಅಪ್ಪ ಅಮ್ಮ ಯಮನೂರಿಗೇ ಸೇರಿದವನು ಈ ಮಗು ಎಂದು ದೇವರು ಅಂದ್ಕೊಳ್ಲಿ, ಮತ್ತೆ ಸಾವು ತರದಿರಲಿ, ದೀರ್ಘಾಯಸ್ಸು ಕೊಡಲಿ ಅಂತ ಆಶಿಸಿ ಯಮದೇವರಿಗೆ ಹರಸಿಕೊಂಡು ಈ ಹೆಸರಿಟ್ಟರು! ಅದಕ್ಕೇ ನಾನು ಯಮನೂರಪ್ಪ” ಅಂದರು. ಅವರ ಹೆಸರಿನ ಕಥೆ ಕೇಳಿ ನಾನು ಮತ್ತು ನನ್ನ ಮಗಳು ಬೆರಗಾದೆವು. ಇದೇ ರೀತಿಯಲ್ಲಿ ನನ್ನ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯೊಬ್ಬಳು ‘ನನ್ನ ತಮ್ಮನ ಹೆಸರು ಸಾದಿಕಪ್ಪ ಮೇಡಂ, ಮುಸ್ಲಿಂ ದರ್ಗಾವೊಂದಕ್ಕೆ ಹರಸಿಕೊಂಡು ಹುಟ್ಟಿದ ಮಗುವಾದ್ದರಿಂದ ನಮ್ಮ ಅಪ್ಪ ಅಮ್ಮ ಅವನಿಗೆ ಈ ಹೆಸರಿಟ್ಟರು” ಅಂದಿದ್ದು ಆಗ ನೆನಪಾಯಿತು ನನಗೆ. ಬಹುಶಃ ಉತ್ತರ ಕರ್ನಾಟಕದವರಿಗೆ ಇಂತಹ ಹೆಸರುಗಳನ್ನು ಕೇಳಿ ಅಭ್ಯಾಸ ಇರುತ್ತದೆ.
ಅಂತೂ ಯಮನೂರಪ್ಪನ ಹೆಸರು ನನ್ನಿಂದ ಈ ಪ್ರಸಂಗವನ್ನು ಬರೆಸಿತು ನೋಡಿ!