ನವರಸ ಅಂದ ತಕ್ಷಣ ಕನ್ನಡ ಸಾಹಿತ್ಯ ಮತ್ತು ಭರತನಾಟ್ಯ ಕ್ಷೇತ್ರದ ನನ್ನಂಥವರಿಗೆ ನೆನಪಾಗುವುದು ಶೃಂಗಾರ, ವೀರ, ಕಾರುಣ್ಯ, ಅದ್ಭುತ...ಇಂಥವು ಒಂಬತ್ತು ಇರುವ ಬೇರೆ ಬೇರೆ ಮನಃಸ್ಥಿತಿಗಳು, ಕಲಾಸಂಬಂಧೀ ನೆಲೆಗಳು. ಭರತನ ಕಾವ್ಯಮೀಮಾಂಸೆಯನ್ನು ಅಡಿಗಲ್ಲಾಗಿ ಇಟ್ಟುಕೊಂಡ ಎಲ್ಲ ಲಲಿತಕಲೆಗಳಿಗೂ ನವರಸಗಳು ಸಮಾನ ಅಂಶವಾಗಿರುತ್ತವೆ.
ಹೀಗಿರುವಾಗ ಪ್ರಯಾಣವೊಂದರಲ್ಲಿ ನವರಸ ಎಂಬುದು ಒಂದು ಊರಿನ ಹೆಸರಲ್ಲಿ ಕಾಣಿಸಿಕೊಂಡುಬಿಟ್ಟರೆ ಎಂತಹ ಸೋಜಿಗ ಅನ್ನಿಸಬಹುದು! ಅಲ್ಲವೇ?
ಈಚೆಗೆ ಸಾಹಿತ್ಯ ಕಾರ್ಯಕ್ರಮವೊಂದಕ್ಕಾಗಿ ಬಿಜಾಪುರ( ಈಗ ವಿಜಯಪುರ) ಕ್ಕೆ ಹೋಗಬೇಕಿತ್ತು ನಾನು. ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಬಿಜಾಪುರದಲ್ಲಿ ಇಳಿದವಳನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಒಬ್ಬ ಸಿಬ್ಬಂದಿಯು, ಅಥಣಿ ರಸ್ತೆಯಲ್ಲಿ ಕಾರಿನಲ್ಲಿ ಕರೆದೊಯ್ದರು. ಅಲ್ಲಿ ಇದ್ದಕ್ಕಿದ್ದಂತೆ ನನಗೆ ‘ನವರಸಪುರ’ ಎಂಬ ಊರಿನ ಹೆಸರುಫಲಕ ಕಣ್ಣಿಗೆ ಬಿತ್ತು. ಆಗ ಆ ಕಾರಿನ ಚಾಲಕರನ್ನು ವಿಚಾರಿಸಲಾಗಿ, ಅದು ಆದಿಲ್ ಶಾಹಿ ಕಾಲದ ಹೆಸರೆಂದೂ, 1599 ರಲ್ಲಿ ಆದಿಲ್ ಶಾಹಿಯು ಈ ಪುರವನ್ನು ನಿರ್ಮಿಸಿದನೆಂದೂ, ಸಮೀಪದ ತೊರವಿಯ ಒಬ್ಬನು ತಂದುಕೊಟ್ಟ ಸುರೆ ತುಂಬ ರುಚಿಯಾಗಿತ್ತೆಂದೂ, ಅದಕ್ಕಾಗಿ ಆ ಊರಿಗೆ ನವರಸಪುರ ಎಂದು ಆ ರಾಜನು ಹೆಸರಿಟ್ಟನೆಂದೂ ಹೇಳುತ್ತಾರೆ. ಬಿಜಾಪುರದಿಂದ 7ಕಿ.ಮೀ. ದೂರದಲ್ಲಿದೆ ಈ ಸ್ಥಳ. ಅಲ್ಲಿ 400 – 450 ವರ್ಷಗಳ ಹಿಂದೆ ‘ಸಂಗೀತ ಮಹಲ್’ ಎಂಬುದನ್ನು ನಿರ್ಮಿಸಿ, ಸಂಗೀತ-ನೃತ್ಯ ಕಲೆಗಳಿಗೆ ತುಂಬಾ ಪ್ರೋತ್ಸಾಹ ನೀಡಲಾಗುತ್ತಿತ್ತೆಂದು ಹೇಳುತ್ತಾರೆ. ಈಗ ಸಂಗೀತ ಮಹಲ್ ಪಾಳು ಬಿದ್ದ ಸ್ಥಿತಿಯಲ್ಲಿದ್ದು ನೋಡುಗರಲ್ಲಿ ಬೇಸರ ಹುಟ್ಟಿಸುತ್ತದೆ. ಹೀಗಾಗಿ ನವರಸಪುರವು ನೀರಸಪುರ ಆಗಿದೆ ಅನ್ನಬಹುದೇ..! ಅಯ್ಯೋ…