ಬೇಕರಿ ಅನ್ನುವುದು ಪಾಶ್ಚಾತ್ಯ ಪ್ರಪಂಚದಲ್ಲಿ ಹುಟ್ಟಿದ ತಿಂಡಿ ತಯಾರಿಕೆಯ ವ್ಯವಸ್ಥೆ. ಪುರಾತನ ಗ್ರೀಸ್ ನಲ್ಲಿ ಕ್ರಿ.ಪೂ.168ರಲ್ಲೇ ಬೇಕರಿ ಅನ್ನುವುದನ್ನು ಸ್ಥಾಪಿಸಲಾಗಿತ್ತಂತೆ. ನಮಗೆ ಅಂದರೆ ಭಾರತ ಭೂಖಂಡದವರಿಗೆ ಇದು ನಮ್ಮನ್ನು ಆಳಿದ ಯುರೋಪಿನವರ ಪ್ರಭಾವದಿಂದಲೇ ಪರಿಚಯವಾದದ್ದು. ಭಾರತದ ಮೊಟ್ಟಮೊದಲ ಬೇಕರಿಯನ್ನು 1880ರಲ್ಲಿ ಕೇರಳದ ತಲಸ್ಸೇರಿಯಲ್ಲಿ ರೋಯಲ್ ಬಿಸ್ಕಿಟ್ ಫ್ಯಾಕ್ಟರಿ ಎಂಬ ಹೆಸರಿಟ್ಟು ಮಂಬಳ್ಳಿ ಬಾಪು ಎಂಬವರು ಸ್ಥಾಪಿಸಿದರಂತೆ. ಇವರು ಬೇಕರಿ ತಿನಿಸು ತಯಾರಿಕೆಯ ಕಲೆಯನ್ನು ಬರ್ಮಾದಲ್ಲಿ ಕಲಿತರಂತೆ.
ಇನ್ನು, ಕರ್ನಾಟಕದ ಮೊಟ್ಟಮೊದಲ ಬೇಕರಿಯನ್ನು ಸಹ 1880 ರಲ್ಲಿ ಕೆಜಿಎಫ್ ನಲ್ಲಿ ಸ್ಥಾಪಿಸಲಾಯಿತಂತೆ.1898ರಲ್ಲಿ ಚಿಕ್ಕಪೇಟೆಯಲ್ಲಿ ಬೆಂಗಳೂರಿನ ಮೊದಲ ಬೇಕರಿಯನ್ನು ಉದ್ಘಾಟಿಸಲಾಯಿತಂತೆ. ಅಯ್ಯಂಗಾರ್ ಬೇಕರಿಗಳಂತೂ ನಮ್ಮ ನಾಡಿನ ಆಹಾರ ಜಗತ್ತಿನ ಮುಖ್ಯ ಭಾಗಗಳಾಗಿಬಿಟ್ಟಿವೆ.
ಇರಲಿ. ಒಬ್ಬ ಕನ್ನಡಾಸಕ್ತಳಾಗಿ ನನ್ನಲ್ಲಿ ಎದ್ದ ಪ್ರಶ್ನೆ ಅಂದರೆ ನಾವು ಕನ್ನಡಿಗರು ಬೇಕರಿಗಾಗಲಿ ಅದರಲ್ಲಿ ಮಾಡುವಂತಹ ತಿಂಡಿ-ತಿನಿಸಿಗಳಿಗಾಗಲಿ ಕನ್ನಡ ಪದಗಳನ್ನು ಯಾಕೆ ಹುಡುಕಿಕೊಂಡಿಲ್ಲ!? ಬ್ರೆಡ್ ಅನ್ನು ಬ್ರೆಡ್ಡು ಅಂತಲೂ, ಕೇಕ್ ಅನ್ನು ಕೇಕು ಅಂತಲೂ, ಬನ್ ಅನ್ನು ಬನ್ನು ಅಂತಲೂ ( ಇಂಗ್ಲಿಷ್ ಪದಗಳಿಗೆ ಉಕಾರಾಂತ್ಯ ನೀಡಿ) ಕರೆದು ಸುಮ್ಮನಾಗಿಬಿಟ್ಟಿದ್ದೇವೆ. ಬಿಸ್ಕೆಟ್ ಅನ್ನುವುದನ್ನು ಮಾತ್ರ ಬಿಸ್ಕತ್ತು ಎಂದು ರೂಪ ಬದಲಿಸಿ ಬಳಸುತ್ತೇವೆ. ಮಂಗಳೂರು ಕಡೆ ‘ಬಿಸ್ಕುಟಾಂಬಡೆ’ ಎಂಬ ಒಂದು ತಿಂಡಿ ಇದೆ ; ‘ಬಿಸ್ಕುಟು ರೊಟ್ಟಿ’ ಅಂತಲೂ ಒಂದು ತಿಂಡಿ ಇದೆ.
ಹಿಂದಿ ಮಾತಾಡುವ ಜನರು ಬ್ರೆಡ್ ಗೆ ‘ಡಬ್ಬಲ್ ರೋಟಿ’ ಎಂಬ ಇಂಗ್ಲಿಷ್ + ಹಿಂದಿ ಬೆರೆತ ಹೆಸರಿಟ್ಟುಕೊಂಡಿದ್ದಾರೆ.
ಅಂತೂ ಬೇಕರಿಯಿಂದಾಗಿ ವಿದೇಶಿ ತಿಂಡಿಗಳು ಪರಿಚಯ ಆದದ್ದು ಮಾತ್ರ ಅಲ್ಲ, ಕನ್ನಡಕ್ಕೆ ಅನೇಕ ಇಂಗ್ಲಿಷ್ ಪದಗಳು ಹಾಗೇ ಉಂಡುಂಡೆಯಾಗಿ (ಉಕಾರಾಂತ್ಯ ಮಾತ್ರ ಸೇರಿಸಿಕೊಂಡು) ಬಂದುಬಿಟ್ಟಿವೆ, ಅಲ್ವಾ?