ಕೆಲವು ವರ್ಷಗಳ ಹಿಂದೆ ಒಂದು ದಿನ ನಾನು ಮತ್ತು ನನ್ನ ಜೀವನ ಸಂಗಾತಿ ರವಿಕುಮಾರ್, ಕೋರಮಂಗಲಕ್ಕೆ ಬ್ಯಾಂಕಿನ ಕೆಲಸಕ್ಕೆಂದು ಹೋಗಿದ್ದೆವು. ನಾನು ಕಾಲೇಜಿನಿಂದ ನೇರವಾಗಿ ಬ್ಯಾಂಕಿಗೆ ಹೋಗಿದ್ದರಿಂದ ಮತ್ತು ಅಲ್ಲೂ ಕೆಲಸದಲ್ಲಿ ತುಸು ವಿಳಂಬವಾದದ್ದರಿಂದ ಹೊಟ್ಟೆ ಹಸಿಯುತ್ತಿತ್ತು. ಸರಿ, ಕೆಲಸವಾದ ನಂತರ ಹತ್ತಿರದ ಹೋಟಲೊಂದಕ್ಕೆ ಹೋಗಿ ಏನಾದರೂ ತಿಂಡಿ ತಿನ್ನೋಣವೆಂದು ಕುಳಿತೆವು. ಮಾಣಿಯೊಬ್ಬ ಬಂದು “ಆಪ್ಕೋ ಕ್ಯಾ ಚಾಹಿಯೇ ಮೇಡಂ? ಇಡ್ಲಿ, ದೋಸಾ, ಖಾರಾಬಾತ್, ಬೋಂಡಾ ಸೂಪ್, ಚಾಟ್ಸ್ ಸಬ್ ಹೈ…” ಎಂದು ಮುಗುಳ್ನಗುತ್ತಾ ನಿಂತ. ಅವನ ಭಾಷೆ ಕೇಳಿ ಯಾರಾದರೂ ಉತ್ತರ ಭಾರತದವನಿರಬಹುದೇನೋ ಎಂದು ಅವನ ಮುಖ ನೋಡಿದೆ. ೨೪-೨೫ ವರ್ಷದ, ಮಧ್ಯಮ ಎತ್ತರದ, ನಮ್ಮ ಮಂಗಳೂರು, ಕುಂದಾಪುರದ ಕಡೆಯ ಜನರ ಹಾಗೆ ತೆಳ್ಳಗೆ ಬೆಳ್ಳಗಿದ್ದ, ಚಂದದ ಹುಡುಗ. ಹುಬ್ಬುಗಳ ಮಧ್ಯೆ ಇದ್ದ ಕುಂಕುಮ ನೋಡಿ `ಕನ್ನಡದವನಿರಬಹುದೇ ಎಂಬ ಅನುಮಾನ ಬಂತು. “ಕನ್ನಡ ಬರಲ್ವಾಪ್ಪಾ ನಿಮ್ಗೆ? ಯಾವ ಕಡೆಯವರು ನೀವು? ಎಂದು ಅವನನ್ನು ಕೇಳಿದೆ. “ಅಯ್ಯೋ, ಕನ್ನಡ ಬರದೆ ಏನು ಮೇಡಂ? ನಾನು ಶೃಂಗೇರಿಯವ್ನು. ಕನ್ನಡದವ್ನೇ ಅಂದ. ನನಗೆ ನಾವೇನಾದರೂ ಉತ್ತರ ಭಾರತೀಯರ ಹಾಗೆ ಕಾಣ್ತಿದ್ದೇವಾ ಎಂದು ಅನುಮಾನ ಬಂತು. ಕೇಳಿದೆ “ಸರಿ, ಯಾಕಪ್ಪಾ, ನೀವು ನಮ್ಮನ್ನು ಹಿಂದಿಯಲ್ಲಿ ಮಾತಾಡಿಸಿದ್ದು? ನಮ್ಮನ್ನು ನೋಡಿದರೆ ಕನ್ನಡದವರಲ್ಲ ಅನ್ನಿಸ್ತಾ? ಅಂದೆ. “ಹಾಗಲ್ಲ ಮೇಡಂ, ಇಲ್ಲಿಗೆ ಬರುವವರೆಲ್ಲ ಸಾಮಾನ್ಯವಾಗಿ ಕನ್ನಡ ಬರದೇ ಇರೋವ್ರೇನೇ. ಅದಕ್ಕೇ ಹಿಂದಿನಲ್ಲಿ ಮಾತಾಡಿಸ್ದೆ ಅಂದ.
ಯಾಕೋ ನನಗೆ ಈ ಘಟನೆ ಮನಸ್ಸಿನಲ್ಲಿ ಉಳಿದುಬಿಟ್ಟಿತು. ಇದು ಹೊಟ್ಟೆಪಾಡಿಗಾಗಿ ದುಡಿಯುತ್ತಾ ಗಿರಾಕಿಗಳ ಮನಸ್ಸಂತೋಷ ಪಡಿಸಲು ಅವರ ಭಾಷೆಯಲ್ಲೇ ಮಾತಾಡುವ ಒಬ್ಬ ಪಾಪದ ಮಾಣಿಯ ಪ್ರಶ್ನೆಯೋ ಅಥವಾ ಕನ್ನಡದ ಚಿಂತಕರು, ಕವಿಗಳು ಆಗಾಗ ಪ್ರಸ್ತಾಪಿಸುವ ಕನ್ನಡಿಗರ `ಅಭಿಮಾನ ಶೂನ್ಯತೆಯ ಪ್ರಶ್ನೆಯೋ ಎಂದು ಯೋಚಿಸಲಾರಂಭಿಸಿದೆ. ವೈಯಕ್ತಿಕ ಹಂತದಲ್ಲಿ ನಾವೇನು ಮಾಡಬಹುದು ಈ ಬಗ್ಗೆ?
ಅಂದಿನಿಂದ ನಾನು ಈ ಮೂರು ಕೆಲಸಗಳನ್ನು ಮಾಡಲು ನಿರ್ಧರಿಸಿದೆ. (ನಾನೊಬ್ಬ ಕನ್ನಡ ಅಧ್ಯಾಪಕಿಯೂ ಆಗಿರುವುದರಿಂದ ಅನೇಕ ವಿದ್ಯಾರ್ಥಿಗಳೊಂದಿಗೆ ನನ್ನ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶವಿದೆ. ಅವರಿಗೂ ಈ ಬಗ್ಗೆ ಹೇಳಿದ್ದೇನೆ).
- ಕರ್ನಾಟಕದಲ್ಲಿ ನಾವು ಯಾರನ್ನು ಭೇಟಿ ಮಾಡಿದರೂ ಮೊದಲು ಕನ್ನಡದಲ್ಲೇ ಮಾತಾಡುವುದು.
- ದಿನಕ್ಕೆ ಒಂದು ಹೊಸ ಕನ್ನಡ ಪದ ಕಲಿಯುವುದು.
- ಪ್ರತಿ ವಿದ್ಯಾವಂತ ಕನ್ನಡಿಗನೂ ಕನಿಷ್ಠ ಐದು ಜನ ಕನ್ನಡೇತರರಿಗೆ ಅಥವಾ ಅವಿದ್ಯಾವಂತರಿಗೆ ಕನ್ನಡ ಕಲಿಸುವುದು.
ನನ್ನ ಬದುಕಿನಲ್ಲಿ, ಒಡನಾಟಗಳಲ್ಲಿ, ನಾನು ಬೋಧಿಸುವ ಕನ್ನಡ ತರಗತಿಗಳಲ್ಲಿ ಮೇಲ್ಕಂಡ ಮೂರು ಅಂಶಗಳ ವಿಷಯದಲ್ಲಿನ ನನ್ನ ಕೆಲಸ ಅಷ್ಟಿಷ್ಟು ನಡೆಯುತ್ತಿದೆ. ಕನ್ನಡ ಮಾಧ್ಯಮವು ಶಿಕ್ಷಣದ ಎಲ್ಲ ಹಂತಗಳಲ್ಲೂ ಕಡ್ಡಾಯವಾಗಿ ಜಾರಿ ಆಗುವ ತನಕ, ಆಡಳಿತ ಭಾಷೆಯಾಗಿ ಕನ್ನಡವು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವ ತನಕ, ಕನ್ನಡ ನಾಡಿನಲ್ಲಿರುವ ಪರಭಾಷಿಕರಿಗೆ ಸರಳವಾಗಿ, ಸುಲಭವಾಗಿ ಕನ್ನಡ ಕಲಿಸುವ ವ್ಯವಸ್ಥೆಯನ್ನು ಮಾಡುವ ತನಕ ನಿಜವಾದ ಕನ್ನಡೋದ್ಧಾರ ಸಾಧ್ಯ ಇಲ್ಲ ಎಂಬ ಅರಿವು ನನಗಿದೆ.