ನಮ್ಮ ತಂದೆಯವರು ನಮ್ಮ ಬಾಲ್ಯ ಕಾಲದಲ್ಲಿ ‘ತನ್ನ ತಂದೆ( ಅಂದರೆ ನಮ್ಮ ತಾತ) ಹೇಳುತ್ತಿದ್ರು’ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ ಮಾತಿದು ; “ಕಸುಬು ಕಲೀಬೇಕು ಕಣ್ರಪ್ಪಾ, ಕಸುಬು ಕಲೀರೋ..”. ಬಹುಶಃ ಕನ್ನಡಿಗರು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಬಳುವಳಿಯಾಗಿ ಕೊಟ್ಟ ಜೀವನವಿವೇಕದ ಒಂದು ಮುಖ್ಯ ತುಣುಕು ಈ ಮಾತು ಎಂದು ನನ್ನ ಅನಿಸಿಕೆ. ನನ್ನ ಈ ಅನಿಸಿಕೆಗೆ ಕಾರಣ ಹೇಳುತ್ತೇನೆ.
ಕಸುಬು( ಕಸಬು ಎಂದು ಕೂಡ ಬರೆಯುತ್ತಾರೆ) ಎಂಬ ಪದಕ್ಕೆ ಇರುವ ಮುಖ್ಯ ಅರ್ಥ ಎಂದರೆ ಉದ್ಯೋಗ, ಕೆಲಸ ಎಂದರ್ಥ. ಮನುಷ್ಯ ಯಾವುದಾದರೊಂದು ಉದ್ಯೋಗ ಅಥವಾ ಕೆಲಸವನ್ನು ಚೆನ್ನಾಗಿ ಕಲಿಯಬೇಕು, ಅದರಿಂದಾಗಿ ಜನರಿಗೆ ಉಪಯೋಗವಾಗುವಂತಹ ವ್ಯಕ್ತಿ ಆಗಬೇಕು, ಮತ್ತು ಆ ಕೌಶಲ್ಯದಿಂದಾಗಿ ತಾನು ಸಹ ತನ್ನ ಜೀವನೋಪಾಯವನ್ನು ಮಾಡಿಕೊಳ್ಳಲು ಸಮರ್ಥನಾಗಬೇಕು ಎಂಬುದು ಈ ಮಾತುಗಳ ಉದ್ದೇಶ.
ಉದಾಹರಣೆಗೆ, ಒಳ್ಳೆಯ ಮಡಕೆ ಮಾಡುವ ಕುಂಬಾರನಾಗುವುದು, ಚೆನ್ನಾಗಿ ಬೆಳೆ ಬೆಳೆಯುವ ರೈತನಾಗುವುದು, ಒಳ್ಳೆಯ ಬಡಗಿಯಾಗುವುದು, ಒಳ್ಳೆಯ ಅಡಿಗೆಭಟ್ಟನಾಗುವುದು, ಅತ್ಯುತ್ತಮ ದರ್ಜಿಯಾಗುವುದು, ವಿದ್ಯಾರ್ಥಿಗಳು ಮೆಚ್ಚುವ ಅಧ್ಯಾಪಕನಾಗುವುದು….
ಹೀಗೆ. ಎಷ್ಟೇ ವಿದ್ಯೆ ಕಲಿತರೂ, ಎಷ್ಟೆಷ್ಟೇ ಅಂಕಪಟ್ಟಿ- ಪ್ರಮಾಣಪತ್ರ ಪಡೆದರೂ ಜೀವನಕ್ಕೆ ಬೇಕಾಗುವ ಒಂದು ಕೌಶಲ್ಯವನ್ನೂ ಕಲಿಯದೆ ಹೋದರೆ ಅಂದರೆ ಹಿರಿಯರು ಹೇಳುವಂತೆ ‘ಕಸುಬುದಾರ’ನಾಗದೆ ಹೋದರೆ ಮನುಷ್ಯ ಇದ್ದೂ ಇಲ್ಲದಂತೆ.
ಇಂದಿನ ನಿರ್ವಹಣಾ ಪರಿಭಾಷೆಯಲ್ಲಿ ‘ಬಿ ಗುಡ್ ಎಟ್ ಸಂಥಿಂಗ್’ (ಯಾವುದಾದರೂ ಒಂದರಲ್ಲಿ ನಿಪುಣರಾಗಿರಿ) ಅನ್ನುತ್ತಾರಲ್ಲ, ಅದು ಸಹ ‘ಕಸುಬು ಕಲೀಬೇಕು ಕಣ್ರಪ್ಪಾ, ಕಸುಬು ಕಲೀರೋ’ ಎಂದಂತೆಯೇ ಕೇಳಿಸುತ್ತದೆ ನನಗೆ. ಉದ್ಯೋಗ ನಿಮಿತ್ತ ಸಂದರ್ಶನಗಳಲ್ಲಿ ಸಹ ‘ವ್ಹಾಟ್ ಯು ಆರ್ ಗುಡ್ ಅಟ್?’ ( ನೀವು ಯಾವ ಕೆಲಸವನ್ನು ತುಂಬ ಚೆನ್ನಾಗಿ ಮಾಡಬಲ್ಲಿರಿ?) ಎಂಬ ಪ್ರಶ್ನೆಯನ್ನು ಕೇಳುತ್ತಾರಂತೆ.
ಅಂದರೆ, ಇಂತಹ ಜೀವನ ವಿವೇಕದ ಪಾಠಗಳು ಎಂದೂ ಬದಲಾಗಲ್ಲ ಅನ್ನಿಸುತ್ತೆ. ಅವುಗಳನ್ನು ಹೇಳುವ ರೀತಿ ಮತ್ತ ಭಾಷೆ ಬದಲಾಗಬಹುದು, ಅಷ್ಟೆ.