ದಿನಸಿ ಅಂಗಡಿಗೆ ಹೋದಾಗಲೆಲ್ಲ  ತೊಗರಿಬೇಳೆಗಿಂತ ಚಿಕ್ಕದಾದ, ತನ್ನ ಕೇಸರಿ-ನಸುಗೆಂಪು ಬಣ್ಣದಿಂದ ಕಣ್ಸೆಳೆಯುತ್ತಿದ್ದ  ಬೇಳೆಯೊಂದನ್ನು ನಾನು ನೋಡುತ್ತಿದ್ದೆ‌. ನಮ್ಮ ಮನೆಯಲ್ಲಿ ಅದನ್ನು ಯಾವತ್ರೂ ತಂದ ನೆನಪಿಲ್ಲ ನನಗೆ. ಅಂಗಡಿಯವನನ್ನು ಒಮ್ಮೆ ಕೇಳಿದಾಗ ‘ಅದರ ಹೆಸರು ಮಸೂರ್ ದಾಲ್ ಮೇಡಂ’ ಅಂತ ಹೇಳಿದ್ದ. ಆ ನಂತರವೂ ಒಮ್ಮೊಮ್ಮೆ ಅದು ಕಣ್ಣಿಗೆ ಬೀಳುತ್ತಿದ್ದಾಗ ಅದರ ಹೆಸರು ಮನಸ್ಸಿಗೆ ಬರುತ್ತಿತ್ತಾದರೂ ಅಷ್ಟೇನೂ ಅದು ನನ್ನ ಕಾಡಿರಲಿಲ್ಲ. 

ಆದರೆ, ಈಚೆಗೆ ನನ್ನ ಸಹೋದ್ಯೋಗಿಯೊಬ್ಬರು “ನಮ್ಮನೆಯಲ್ಲಿ ಇವತ್ತು ಮಸೂರ್ ದಾಲ್’ ಮಾಡಿದ್ದೆ.‌ ಅದು ತುಂಬಾ ಚೆನ್ನಾಗಿ ಕಟ್ಟು ಬಿಡುತ್ತೆ. ಅದಕ್ಕೆ ನಂಗೆ ಅದು ಇಷ್ಟ”  ಅಂದರು. ಓಹ್, ಮತ್ತೆ ತೆರೆದುಕೊಂಡಿತು ನೋಡಿ ನನ್ನ ಮನಸ್ಸಿನ ಲೋಕದಲ್ಲಿ ಈ ಬೇಳೆಯ ಬಗೆಗಿನ ಚಿಂತನಾ ಸರಣಿ! “ಹೌದೂ…ಯಾಕೆ ಇದನ್ನು ನಮ್ಮ ಮನೆಗಳಲ್ಲಿ ಬಳಸಲ್ಲ…?” ಎಂಬ ಪ್ರಶ್ನೆ ಮತ್ತೆ ಕಾಡಲಾರಂಭಿಸಿತು. ನಮ್ಮ ಮನೆವಾಳ್ತೆ ಸಹಾಯಕಿ ಯಲ್ಲಮ್ಮನನ್ನು ಈ ಬಗ್ಗೆ ಕೇಳಿದಾಗ “ಹೌದಮ್ಮ, ಅದನ್ನ ಮೈಸೂರು ಬೇಳೆ ಅಂತೀವಿ, ಆದ್ರೆ ಅದನ್ನ ಬಳಸಲ್ಲ ನಾವು” ಅಂದರು!” .

ನನಗೂ ಸಹ ಅನೇಕರು ಬಳಸದಿರುವ ಈ ಮುದ್ದಾದ ಬೇಳೆಯ ಬಗ್ಗೆ  ತುಂಬ ಕುತೂಹಲ ಉಂಟಾಯ್ತು.‌ ಸರಿ. ನಮ್ಮ‌ ತಕ್ಷಣಲಭ್ಯ ಗುರುಗಳಾದ ಗೂಗಲಮ್ಮನನ್ನು ಕೇಳೋಣವೆಂದು ಹೊರಟರೆ ಅವರಿಂದ ಸಿಕ್ಕಿದ ಮಾಹಿತಿ ನನಗೆ ಇನ್ನಷ್ಟು ಆಶ್ಚರ್ಯ ಉಂಟು ಮಾಡಿತು. ಪಶ್ಚಿಮ ಬಂಗಾಳದಲ್ಲಿನ ಬ್ರಾಹ್ಮಣರು ಮತ್ತು ಇನ್ನೂ ಕೆಲವರು ಈ ಬೇಳೆಯನ್ನು ಮಾಂಸಾಹಾರಿ ಎಂದು ಪರಿಗಣಿಸ್ತಾರಂತೆ! ಕಾರಣ ಏನು ಗೊತ್ತೇ? ಸ್ವರ್ಗಲೋಕದ ಹಸುವಾದ ಕಾಮಧೇನುವನ್ನು ಖೂಳರು ಎಳೆದುಕೊಂಡು ಹೋಗಲು ಪ್ರಯತ್ನಿಸಿದಾಗ ಅದರ ಮೈಯಿಂದ ಬಿದ್ದ ರಕ್ತವು ಈ ಕೇಸರಿ-ಕೆಂಪು ಬಣ್ಣದ ‘ಮಸೂರ್ ದಾಲ್’ ಆಯಿತಂತೆ! ಅದಕ್ಕಾಗಿಯೇ ಇದನ್ನು ಮಾಂಸಾಹಾರ ಎಂದು ಪರಿಗಣಿಸುವುದಂತೆ! ಅಯ್ಯೋ, ಬಹಳ ಸುಲಭವಾಗಿ ಬೇಯುವ ರುಚಿಕಟ್ಟಾದ ತೊವ್ವೆ, ಖಿಚಡಿಗಳಿಗೆ  ಮೂಲವಸ್ತು ಆಗುವ ಈ ಮೃದುಸುಂದರ ಬೇಳೆಗೆ ಈ ವಿಧಿಯೇ!? ಛೆ… ಅನ್ನಿಸಿತು. 

ಅಂದ ಹಾಗೆ ಇಂಗ್ಲಿಷ್ ನಲ್ಲಿ lens ಅನ್ನುವ ಪದ ಕೇಳಿದ್ದೇವಲ್ಲ, ಕನ್ನಡದಲ್ಲಿ ಮತ್ತು ಹಿಂದಿಯಲ್ಲಿ ಅದಕ್ಕೆ ಮಸೂರ ಅಂತಾರೆ. ಈ ಬೇಳೆಯನ್ನು ಮಸೂರ್ ದಾಲ್ ಎಂದು ಕರೆಯಲು ಅದರ ಮಸೂರದ ಆಕಾರವೇ ಕಾರಣವಾ?…ಈ ಕುತೂಹಲವೂ ನನ್ನಲ್ಲಿ ಉಂಟಾಗಿದೆ. ಒಟ್ಟಿನಲ್ಲಿ, ಕನ್ನಡಿಗರು ತಮಗೆ ಮೈಸೂರು ಎಂಬ ಪದ ಪರಿಚಿತ ಎಂಬ ಕಾರಣಕ್ಕಾಗಿ ‘ಮಸೂರ್ ದಾಲ್’ ಅನ್ನು ‘ಮೈಸೂರು ಬೇಳೆ’ ಅನ್ನುತ್ತಿರಬೇಕು‌.‌ ಅಲ್ಲವೆ? ಆದರೆ ಅದು ‘ಮೈಸೂರು ಬೇಳೆ’  ಅಲ್ಲ ನೋಡಿ, ಮಸೂರ್ ದಾಲೇ.