ಹೀಗೇ ತತ್ರಾಪಿ ( casually) ಮಾತಾಡುತ್ತಿದ್ದಾಗ ನನ್ನ ಸಾಹಿತಿ-ಕಲಾವಿದ ಮಿತ್ರರೊಬ್ಬರು ಈಚೆಗೆ ತಮಗೆ ಆದ ಒಂದು ಪೇಚಿನ ಪ್ರಸಂಗವೊಂದನ್ನು ಹೇಳಿದರು. ಪದಗಳನ್ನು ಬಳಸುವಾಗ ಜಾಗ್ರತೆ ವಹಿಸದಿದ್ದರೆ ಏನಾಗಬಹುದು ಎಂಬುದಕ್ಕೆ ಈ ಪ್ರಸಂಗ ಉದಾಹರಣೆಯಾಗುತ್ತದೆ ಅನ್ನಿಸಿತು ನನಗೆ. ಅದಕ್ಕಾಗಿ ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಕೆಲವು ದಿನಗಳ ಹಿಂದೆ, ಬೆಂಗಳೂರಿನಿಂದ ಸುಮಾರು ಇನ್ನೂರು ಕಿ.ಮೀ. ದೂರ ಇರುವ ಊರಿನ ಸಾಹಿತ್ಯಕ ಸಂಘದವರೊಬ್ಬರು ಇವರಿಗೆ ದೂರವಾಣಿ ಕರೆ ಮಾಡಿ, ಮುಂದಿನ ವಾರ ಇಂತಹ ದಿನ ‘ಒಂದು ಸನ್ಮಾನ ಇಟ್ಕೊಂಡಿದೀವಿ, ದಯಮಾಡಿ ಬರಬೇಕು ನೀವು’ ಅಂತ ಆಹ್ವಾನಿಸಿದರು. ಇವರು ಆ ತಾರೀಖಿನಂದು ಬಿಡುವಾಗಿದ್ದುದರಿಂದ ‘ಆಗಲಿ, ಬರುತ್ತೇನೆ’ ಎಂದು ಒಪ್ಪಿಕೊಂಡರು. ಸರಿ, ಮುಂದಿನ ಎರಡು ಮೂರು ದಿನಗಳಲ್ಲಿ ಆಹ್ವಾನ ಪತ್ರಿಕೆ ಬಂತು. ಅದರಲ್ಲಿ ಇವರ ಹೆಸರಿನ ಹಿಂದೆ ‘ಅಭಿನಂದಿತರು’ ಎಂಬ ಪದ ಇತ್ತು. ಅಂದರೆ ‘ತನಗೆ ಸನ್ಮಾನ ಮಾಡಿ ಅಭಿನಂದಿಸುತ್ತಾರೆ, ಹೀಗಾಗಿ ಅಭಿನಂದಿತರು ಎಂಬ ಪದ ಬಳಸಿದ್ದಾರೆ’ ಎಂದು ಇವರು ಸಹಜವಾಗಿಯೇ ಭಾವಿಸಿದರು. ಆ ಆಹ್ವಾನ ಪತ್ರಿಕೆಯಲ್ಲಿ ಬೇರೆ ಕೆಲವು ಸನ್ಮಾನಿತರ ಹೆಸರು ಸಹ ಇತ್ತು.
ಸರಿ. ಸಮಾರಂಭದ ದಿನ ಇವರು ಸರಿಯಾದ ಸಮಯಕ್ಕೆ ಹೊರಟು ಸ್ಥಳ ತಲುಪಿದರು. ಸಂಜೆ 6.00 ಗಂಟೆಗೆ ಪ್ರಾರಂಭ ಆಗಬೇಕಾದ ಸಮಾರಂಭವು ‘ಅವರು ಬರಬೇಕು, ಇವರು ಬರಬೇಕು, ಇನ್ನೇನು ಬಂದುಬಿಡ್ತಾರೆ, ಬಂದೇಬಿಟ್ರು’ ಎಂದು ಹೇಳಹೇಳುತ್ತ ರಾತ್ರಿ 8.00 ಗಂಟೆಗೆ ಪ್ರಾರಂಭ ಆಯಿತು!! ನನ್ನ ಸ್ನೇಹಿತರಿಗೆ ‘ಛೆ, ಇಷ್ಟು ತಡ ಆಯಿತಲ್ಲ, ಇನ್ನು ನಿದ್ದೆಗೆಟ್ಟು ಪ್ರಯಾಣ ಮಾಡಬೇಕಲ್ಲ, ಅಯ್ಯೋ…’ ಎಂದು ಬೇಸರವಾಗಲು ಮೊದಲಾಯಿತು.
ಎಂದಿನಂತೆ ಪ್ರಸ್ತಾವನೆ, ಸ್ವಾಗತ, ದೀಪ ಬೆಳಗುವಿಕೆ ಇವೆಲ್ಲ ನಡೆದವು. ಇವಾಗುತ್ತಿದ್ದಂತೆಯೇ, ಕಾರ್ಯಕ್ರಮದ ನಿರೂಪಕರು ಇದ್ದಕ್ಕಿದ್ದಂತೆ ನನ್ನ ಸ್ನೇಹಿತರನ್ನು ‘ಸಭೆಯನ್ನುದ್ದೇಶಿಸಿ ಭಾಷಣ ಮಾಡಲು’ ಕರೆದುಬಿಟ್ಟರು. ‘ಇದೇನಿದು!ಸನ್ಮಾನಕ್ಕೆ ಮುಂಚೆಯೇ ಭಾಷಣಕ್ಕೆ ಕರೆಯುತ್ತಿದ್ದಾರಲ್ಲ!’ ಎಂದು ಅಚ್ಚರಿಯಾದರೂ ಸಭೆ ಸಮಾರಂಭಗಳಲ್ಲಿ ನಿಯಮಿತವಾಗಿ ಭಾಗವಹಿಸಿ, ಭಾಷಣ ಮಾಡಿ ಅಭ್ಯಾಸ ಇದ್ದುದರಿಂದ, ನನ್ನ ಸ್ನೇಹಿತರು ಸಂದರ್ಭೋಚಿತವಾದ ಕೆಲವು ಮಾತುಗಳನ್ನು ಆಡಿ ವೇದಿಕೆಯ ತಮ್ಮ ಜಾಗದಲ್ಲಿ ಕುಳಿತುಕೊಂಡರು.
ನಂತರ ನಡೆದ ಸಂಗತಿ ಇವರಿಗೆ ಬಹಳ ಆಶ್ಚರ್ಯ ಮತ್ತು ಕಸಿವಿಸಿ ಉಂಟುಮಾಡಿದವು. ಆಯೋಜಕರು ವೇದಿಕೆಯ ಮೇಲಿದ್ದ ಬೇರೆ ಐದಾರು ಮಂದಿಗೆ ಸನ್ಮಾನ ಮಾಡಿದರೇ ಹೊರತು ಇವರಿಗೆ ಮಾಡಲಿಲ್ಲ! ಆಗ ನನ್ನ ಸ್ನೇಹಿತರಿಗೆ ಛಕ್ಕನೆ ಹೊಳೆಯಿತು ಓಹ್, ಇವರು ನನ್ನನ್ನು ಕರೆದದ್ದು ಸನ್ಮಾನ ಮಾಡಲಿಕ್ಕಲ್ಲ, ಅಭಿನಂದನಾ ಭಾಷಣ ಮಾಡಲು! ಆದರೆ ಆಹ್ವಾನ ಪತ್ರಿಕೆಯಲ್ಲಿ ‘ಅಭಿನಂದಿಸುವವರು’ ಎಂಬ ಪದ ಬಳಸುವ ಬದಲು ‘ಅಭಿನಂದಿತರು’ ಎಂಬ ಪದ ಬಳಸಿದ್ದಾರೆ!!
ನೋಡಿ, ಪದಗಳ ಬಗೆಗಿನ ನಿರ್ಲಕ್ಷ್ಯ ಎಂತೆಂತಹ ಗೊಂದಲ, ಗಲಿಬಿಲಿಗಳನ್ನು ಸೃಷ್ಟಿ ಮಾಡುತ್ತದೆ! ‘ಪದಗಳನ್ನು ಬಳಸುವಾಗ ಜಾಗ್ರತೆ ವಹಿಸಿ, ಜಾಗ್ರತೆ ವಹಿಸಿರೋ’ ಎಂದು ನಮ್ಮ ಗುರುಹಿರಿಯರು ಎಚ್ಚರಿಸುವುದು ಇದಕ್ಕಾಗಿಯೇ ತಾನೆ?.
								
 Like us!
 Follow us!