ಮಹಾರಾಣಿ ಕಾಲೇಜಿನಲ್ಲಿ ನಡೆಯುವ ತರಗತಿ ಚುನಾವಣೆಗಳ ಬಗ್ಗೆ ಹಿಂದಿನ ವಾರದ ಕನ್ನಡ ಪ್ರಸಂಗದಲ್ಲಿ ಹೇಳಿದ್ದೆ. ಈ ಕುರಿತ ಇನ್ನೊಂದು ಅನುಭವವನ್ನು ಈಗ ಹೇಳುತ್ತೇನೆ.
ತರಗತಿಗಳಲ್ಲಿ ಪ್ರತಿನಿಧಿಗಳ ಚುನಾವಣೆಗಳನ್ನು ನಡೆಸಲು ಸಾಮಾನ್ಯವಾಗಿ ಒಂದಷ್ಟು ಅಧ್ಯಾಪಕ ತಂಡಗಳನ್ನು ಮಾಡಿರುತ್ತಾರೆ. ಒಂದು ಸಲ, ಎರಡನೇ ಬಿ.ಎಸ್ಸಿ.ಯ ತರಗತಿಯೊಂದರಲ್ಲಿ ಈ ಚುನಾವಣೆ ನಡೆಸಬೇಕಾಗಿದ್ದ ಅಧ್ಯಾಪಕ ತಂಡದಲ್ಲಿ ನಾನು ಕೂಡ ಇದ್ದೆ. ನಮ್ಮ ತಂಡದಲ್ಲಿ ವಿಜ್ಞಾನ ವಿಭಾಗದ ಒಬ್ಬ ಅಧ್ಯಾಪಕಿ ಮತ್ತು ಒಬ್ಬ ಅಧ್ಯಾಪಕರು ಇದ್ದರು. ಅಂದರೆ ನಾವು ಒಟ್ಟು ಮೂರು ಜನ ಇದ್ದೆವು. ಸರಿ, ಒಂದು ಮಧ್ಯಾಹ್ನದ `ತರಗತಿ-ಗಂಟೆ(ಪೀರಿಯೆಡ್)ಯೊಂದರಲ್ಲಿ ಈ ಚುನಾವಣೆ ನಡೆಸಲು ನಾವು ಹೋದೆವು.
ಸುಮಾರು ೮೦-೮೫ ವಿದ್ಯಾರ್ಥಿನಿಯರಿದ್ದ ತರಗತಿ ಅದು. ಅಲ್ಲಿನ ಪ್ರತಿನಿಧಿ, ಉಪಪ್ರತಿನಿಧಿ, ಹಾಗೂ ಕ್ರೀಡಾ ಪ್ರತಿನಿಧಿ _ ಈ ಮೂವರ ಚುನಾವಣೆ ಮುಗಿದ ನಂತರ, ಕನ್ನಡ ಪ್ರತಿನಿಧಿ(ಕನ್ನಡತಿ)ಯನ್ನು ಚುನಾಯಿಸುವ ಹೊತ್ತು ಬಂತು. ಆಗ ನಾಲ್ಕೈದು ಜನ ಉಮೇದುವಾರ ವಿದ್ಯಾರ್ಥಿನಿಯರು ವೇದಿಕೆಗೆ ಬಂದು ತಮ್ಮ ಪುಟ್ಟ ಪುಟ್ಟ, ಕನ್ನಡಾಭಿಮಾನಯುತ ಭಾಷಣಗಳನ್ನು ಮಾಡಿದರು. ಅವರಲ್ಲಿ ಒಬ್ಬ ವಿದ್ಯಾರ್ಥಿನಿಯು, ನೋಡಲು ತುಂಬ ಸೌಮ್ಯವಾಗಿದ್ದವಳು, ವೇದಿಕೆಗೆ ಬಂದಾಗ ಕನ್ನಡವನ್ನು ಉಳಿಸುವ ಹಾಗೂ ಬೆಳೆಸುವ ಬಗ್ಗೆ ಸಾಕಷ್ಟು ಧೈರ್ಯ, ದಾಷ್ಟಿಕಗಳಿಂದ ಮಾತಾಡಿದಳು. ಕೊನೆಯಲ್ಲಿ ಅವಳಿಗೆ ಅದೇನು ಹುರುಪು ಬಂತೋ, ಅಥವಾ ಅವಳ ಸ್ವಭಾವದಲ್ಲೇ ನಿಷ್ಠುರವಾಗಿ ಮಾತಾಡುವ ಗುಣವಿತ್ತೋ ಏನೋ ಅರಿಯೆ, ಕನ್ನಡಿಗರ ಅಭಿಮಾನ ಶೂನ್ಯತೆಯ ಬಗ್ಗೆ ತನ್ನ ಭಾಷಣದ ಬಿಸಿ ಏರಿಸುತ್ತಾ ಏರಿಸುತ್ತಾ ಹೋದ ಅವಳು, `ಗಾಂಚಾಲಿ ಬಿಡಿ, ಕನ್ನಡ ಮಾತಾಡಿ ಎಂಬ ಬ್ರಹ್ಮಾಸ್ತ್ರ (ಪಂಚ್ ಲೈನ್!?) ಬಳಸಿ ತನ್ನ ಮಾತನ್ನು ಮುಗಿಸಿದಳು!! ಹುಡುಗಿಯರೆಲ್ಲ ತುಂಬ ಹುರುಪಿನಿಂದ ಜೋರಾಗಿ ಚಪ್ಪಾಳೆ ತಟ್ಟಿದರು. `ಈ ವಿದ್ಯಾರ್ಥಿನಿಯು `ಗಾಂಚಾಲಿ ಪದವನ್ನು ತರಗತಿ ಚುನಾವಣೆಯ ಔಪಚಾರಿಕ ಸಂದರ್ಭದಲ್ಲಿ ಉಪಯೋಗಿಸಿದ್ದು ತುಸು ಅನುಚಿತವಾಯಿತೇನು? ಎಂದು ನನ್ನ `ಅಧ್ಯಾಪಕ ಶಿಷ್ಟಬುದ್ಧಿ ಆಲೋಚಿಸಿತು. ಆದರೆ ಇದು ಕನ್ನಡದಲ್ಲಿ ಅನೌಪಚಾರಿಕವಾಗಿ ಆಗೀಗ ಬಳಕೆಯಾಗುವ ಸಾಮಾನ್ಯ ಬಯ್ಗುಳದ ಮಾತು ಎಂಬುದು ನನ್ನ ಭಾವನೆ. ಹೀಗಾಗಿ ಹದಿಹರೆಯದ ವಿದ್ಯಾರ್ಥಿನಿಯೊಬ್ಬಳು ಹೆಚ್ಚು ಯೋಚಿಸದೆ ಬಳಸಿದ ಪದವಿದು ಎಂದು ಭಾವಿಸಿ ನಾನು ಸುಮ್ಮನಾದೆ.
ನಾನೇನೋ ಸುಮ್ಮನಾದೆ. ಆದರೆ, ಈ ಹುಡುಗಿ ಮಾತಾಡಿ ಮುಗಿಸಿದ ತಕ್ಷಣ, ನಮ್ಮ ತಂಡದಲ್ಲಿದ್ದ ನನ್ನ ಮಹಿಳಾ ಸಹೋದ್ಯೋಗಿಯ ಮುಖವು ತೀರಾ ಅಸಾಮಾಧಾನದಿಂದ ವಿವರ್ಣವಾಗಿದ್ದನ್ನು ನಾನು ಗಮನಿಸಿದೆ. ತುಸು ಚಡಪಡಿಸಿದಂತೆ ಕಂಡ ಆಕೆ ಆ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಗೆ ಕರೆದುಕೊಂಡು ಹೋಗಿ ಒಂದೆರಡು ನಿಮಿಷ ಮಾತಾಡಿ ಮತ್ತೆ ಒಳಗೆ ಕರೆತಂದರು.
ಆ ತರಗತಿಯ ಚುನಾವಣೆ ಮುಗಿದು ನಾವು ಹೊರಬಂದ ನಂತರ ನನ್ನ ಮಹಿಳಾ ಸಹೋದ್ಯೋಗಿಯು ನನ್ನನ್ನು ಕುರಿತು, “ಮೇಡಂ, ಡಿಡ್ ಯು ಒಬ್ಸರ್ವ್? ದೆಟ್ ಗರ್ಲ್ ಯೂಸ್ಡ್ ಎ ವೆರಿ ಬ್ಯಾಡ್ ವರ್ಡಂದರು. ಬಹುಶಃ ಇವರು ಗಾಂಚಾಲಿ ಪದದ ಬಗ್ಗೆಯೇ ಅಸಾಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ ಅನ್ನಿಸಿತು. ನಾನು “ಮೇಡಂ, ಈ ಪದವನ್ನು ನಮ್ಮಲ್ಲಿ `ತಲೆಹರಟೆ, ಅಧಿಕ ಪ್ರಸಂಗ, ಅಹಂಕಾರ ಎನ್ನುವ ಅರ್ಥದಲ್ಲಿ ಬಳಸುತ್ತಾರೆ, ಆದರೆ ಔಪಚಾರಿಕ ಸಂದರ್ಭಗಳಲ್ಲಿ ಅದನ್ನು ಬಳಸಲ್ಲ, ಹೀಗೇ ಸುಮ್ಮನೆ ಅನೌಪಚಾರಿಕವಾಗಿ, ಆರಾಮಾಗಿ ಮಾತಾಡುವಾಗ ಬಳಸ್ತಾರೆ, ಬಹುಶಃ ತರಗತಿಯಲ್ಲಿ ಆ ಹುಡುಗಿ ಈ ಪದ ಬಳಸಬಾರದಿತ್ತು ಅನ್ಸುತ್ತೆ ಅಂದೆ. ನನ್ನ ಮಾತಿಂದ ಆಕೆಗೆ ಸಮಾಧಾನ ಆದ ಹಾಗೆ ಕಾಣಿಸಲಿಲ್ಲ. “ನೋನೋನೋನೋ!! ದಿಸ್ ವರ್ಡ್ ಈಸ್ ವೆರಿ ಬ್ಯಾಡ್ ಮೇಡಂ!!!!!! ಎಂದು ಬೇಸತ್ತ ಭಾವದಲ್ಲಿ ತಲೆ ಅಲ್ಲಾಡಿಸುತ್ತಾ ಆಕೆ ಮೆಟ್ಟಲಿಳಿದು ಹೊರಟರು. ನಂತರ ನಾವೆಲ್ಲರೂ ಆ ದಿನದ ನಮ್ಮ ಮುಂದಿನ ಕೆಲಸಗಳಲ್ಲಿ ತೊಡಗಿಕೊಂಡೆವು.
ಈ ಘಟನೆಯ ತರುವಾಯ, ಅಂದು ನಾನು ಕೆಲಸವನ್ನೇನೂ ಮಾಡುತ್ತಿದ್ದೆನಾದರೂ ನನ್ನ ಸಹೋದ್ಯೋಗಿಯ “`ನೋನೋನೋನೋ!! ದಿಸ್ ವರ್ಡ್ ಈಸ್ ವೆರಿ ಬ್ಯಾಡ್ ಮೇಡಂ!!!!!! ಎಂಬ ಮಾತು ಮನದೊಳಗೆ ಕಾಡುತ್ತಲೇ ಇತ್ತು. ಆ ಮಹಿಳೆಯು ಕನ್ನಡ ಮನೆಮಾತಿನವರಲ್ಲ, ಮುಸ್ಲಿಂ ಧರ್ಮಕ್ಕೆ ಸೇರಿದವರು. ಮನೆಯಲ್ಲಿ ಉರ್ದು, ಮತ್ತು ಕಾಲೇಜಿನಲ್ಲಿ ಬಹುಮಟ್ಟಿಗೆ ಇಂಗ್ಲಿಷ್ ಮಾತಾಡುವ ವ್ಯಕ್ತಿ ಆಕೆ. ನನ್ನೊಂದಿಗೆ ಸ್ವಲ್ಪ ಇಂಗ್ಲಿಷ್ ಮತ್ತು ಸ್ವಲ್ಪ ಕನ್ನಡ ಎರಡರಲ್ಲೂ ಮಾತಾಡುತ್ತಿದ್ದರು. ನಮ್ಮ ನಡುವೆ ಹೆಚ್ಚು ಒಡನಾಟವೇನೂ ಇರಲಿಲ್ಲ. ಆ ದಿನದ ಚುನಾವಣೆಯಂತೆ ಯಾವುದಾದರೂ ಸಮಿತಿಯಲ್ಲಿ ಒಟ್ಟಿಗೆ ಕೆಲಸ ಮಾಡುವ ಸಂದರ್ಭ ಬಂದಾಗ ನಾವು ಒಂದಿಷ್ಟು ಮಾತಾಡುತ್ತಿದ್ದೆವು. ಸುಮಾರು ಐವತ್ತು ವಯಸ್ಸಿನ, ಶಾಂತ ಸ್ವಭಾವದ, ಸಜ್ಜನಿಕೆಯ ವ್ಯಕ್ತಿ ಅವರು. ಕಾಲೇಜಿಗೆ ಬರುವಾಗ ಹೋಗುವಾಗ ಬುರ್ಖಾ ಧರಿಸುತ್ತಿದ್ದ ಅವರು ಕೆಲಸದ ವೇಳೆಯಲ್ಲಿ, ತಲೆಗೆ ಯಾವಾಗಲೂ ಹಿಜಾಬು ಕಟ್ಟಿಕೊಂಡಿರುತ್ತಿದ್ದರು. ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದ ಮೃದು ಮನಸ್ಸಿನ ಇವರ ಮುಖ ಸಪ್ಪೆಯಾಗಿದ್ದು ನೋಡಿ ನನಗೆ ಬೇಸರವಾಯಿತು. ಆದರೆ, ಅವರು ವಿದ್ಯಾರ್ಥಿನಿಯೊಬ್ಬಳು ಭಾಷಣದಲ್ಲಿ ಬಳಸಿದ ಒಂದು ಸಾಧಾರಣ ಬಯ್ಗುಳದಂತಹ ಪದದ ಗ್ಗೆ ಇಷ್ಟು ಬೇಸರ ಯಾಕೆ ಮಾಡಿಕೊಂಡರು ಎಂಬುದೇ ನನಗೆ ಅರ್ಥವಾಗಲಿಲ್ಲ, ಎಷ್ಟು ಯೋಚಿಸಿದರೂ ಬಗೆಹರಿಯಲಿಲ್ಲ.
ಆ ಸಂಜೆ ಮನೆಗೆ ಬಂದು ಕನ್ನಡ ಸಾಹಿತ್ಯ ಪರಿಷತ್ತಿನ `ಸಂಕ್ಷಿಪ್ತ ಕನ್ನಡ ನಿಘಂಟಿನಲ್ಲಿ `ಗಾಂಚಾಲಿ ಪದ ಹುಡುಕಿದೆ, ಆ ಪದ ನನಗೆ ಸಿಗಲಿಲ್ಲ. `ಗಾಂಚಾಲಿ ಮಾಡ್ಬೇಡ ನೋಡು, `ಅವನ್ ಗಾಂಚಾಲಿ ಜಾಸ್ತಿಯಾಯ್ತು, ಇಂತಹ ವಾಕ್ಯಗಳು ಆಗೀಗ ನನ್ನ ಕಿವಿ ಮೇಲೆ ಬಿದ್ದದ್ದು ನೆನಪಾಯ್ತು. ಮಾರುಕಟ್ಟೆಗಳಲ್ಲಿ, ಆಟೋ ಚಾಲಕರ ಬಾಯಲ್ಲಿ, ತರಕಾರಿ ಮಾರುವವರು, ಮತ್ತು ತಮ್ಮ ಭಾವನೆಗಳನ್ನು ನಿಸ್ಸಂಕೋಚವಾಗಿ ವ್ಯಕ್ತಪಡಿಸುವ ಕೆಲವು ವಿದ್ಯಾವಂತರ ಬಾಯಲ್ಲೂ ಈ ಪದ ಕೇಳಿದ್ದೆ. ಏನಿದರ ನಿಜವಾದ ಅರ್ಥ? ನನ್ನ ಸಹೋದ್ಯೋಗಿಗೆ ಈ ಪದ ಇಷ್ಟು ಬೇಸರ ಉಂಟುಮಾಡಿದ್ದು ಯಾಕೆ?
ಮಾರನೆಯ ದಿನ ಆ ಪದವನ್ನು ಬಳಸಿದ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದಾಗ ಆ ಪದಬಳಕೆಯ ಬಗ್ಗೆ ವಿಚಾರಿಸಿದೆ, `ಅದು ಯೂಟ್ಯೂಬ್ನಲ್ಲಿದೆ ಮ್ಯಾಮ್. `ಗಾಂಚಾಲಿ ಬಿಡಿ, ಕನ್ನಡ ಮಾತಾಡಿ ಅನ್ನೋದು ಕೇಳಿ ನಂಗೆ ಇಷ್ಟ ಆಯ್ತು, ಅದಕ್ಕೇ ಬಳಸ್ದೆ ಅಂದಳು. ಓಹ್, ಹೌದಾ ಅನ್ನಿಸಿತು. ನಂತರ ನಾನು ಸಹ ಯೂಟ್ಯೂಬಿನಲ್ಲಿ ಹುಡುಕಿದಾಗ `ಗಾಂಚಾಲಿ ಬಿಡಿ, ಕನ್ನಡ ಮಾತಾಡಿ ಎಂಬ ಕನ್ನಡ ಹಾಡು ಸಿಕ್ಕಿತು! ರಚನೆ ಡಾ.ಕ.ವೆಂ.ಶ್ರೀನಿವಾಸಮೂರ್ತಿ, ಸಂಗೀತ ಮತ್ತು ಗಾಯನ ಕಿಕ್ಕೇರಿ ಕೃಷ್ಣಮೂರ್ತಿ. ಕರ್ನಾಟಕದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿದ್ದರೂ ಕನ್ನಡ ಭಾಷೆಯನ್ನು ಬಳಸದ ಕನ್ನಡೇತರರನ್ನು `ಕನ್ನಡ ಬಳಸಿ, ಯಾಕೆ ನೀವು ಕನ್ನಡ ಭಾಷೆಯನ್ನು ಬಳಸುವುದಿಲ್ಲ? ಎಂದು ತುಸು ಆಗ್ರಹದ ದನಿಯಲ್ಲಿ ಪ್ರೇರೇಪಿಸುವ ಹಾಡು ಅದು.
ಇದೇನೋ ಸರಿ. ವಿದ್ಯಾರ್ಥಿನಿಯು ಗಾಂಚಾಲಿ ಎಂಬ ಪದವಿದ್ದ ಘೋಷಣಾ ವಾಕ್ಯದಂತಹ ಸಾಲನ್ನು ಬಳಸಿದ್ದಕ್ಕೇನೋ ನನಗೆ ಕಾರಣ ಸಿಕ್ಕಿತು. ಆದರೆ ಮೇಡಂ ಅವರ ತೀವ್ರ ಅಸಾಮಾಧಾನಕ್ಕೆ ಕಾರಣವೇನು ಎಂಬುದು ಮಾತ್ರ ನನಗೆ ಎಷ್ಟು ಯೋಚಿಸಿದರೂ ಅರ್ಥವಾಗಲಿಲ್ಲ. ಕೊನೆಗೆ ನನಗೆ ಪರಿಚಯವಿದ್ದ ಹಿರಿಯರಾದ ಒಬ್ಬ ಉರ್ದು ಅಧ್ಯಾಪಕರಿಗೆ ಕರೆ ಮಾಡಿ ಈ ಪದವನ್ನು ಕುರಿತ ಸiಸ್ಯೆಯನ್ನು ವಿವರಿಸಿದೆ. ಅವರು ಕೂಡ ಹೇಳಲು ತುಸು ಮುಜುಗರ ಪಟ್ಟು ಅನಂತರ `ಅದು ಗಂಡಸಿನ ದೇಹದ ಒಂದು ಅಂಗಕ್ಕೆ ಬಳಸುವ ಪದ ಮೇಡಂ ಎಂದರು. ಓಹ್, ಈಗ ನನಗೆ ಅರ್ಥವಾಯಿತು, ಮೇಡಂ ಅವರಿಗೆ ಯಾಕೆ ಅಸಾಮಾಧಾನವಾಯಿತು ಎಂದು!
ಬೇರೆ ಭಾಷೆಯಿಂದ ಕೆಲವು ಪದಗಳು ಕನ್ನಡಕ್ಕೆ ಬಂದಾಗ ಅವು ತಮ್ಮ ಮೂಲ ಅರ್ಥವನ್ನು ಬದಲಾಯಿಸಿಕೊಂಡಿರುವ ಸಂದರ್ಭಗಳು ಇರುತ್ತವೆ. ಗಾಂಚಾಲಿ ಪದವನ್ನು ಕನ್ನಡದಲ್ಲಿ ಅಹಂಕಾರ, ಧಿಮಾಕು ಎಂಬ ಅರ್ಥದಲ್ಲಿ, ಬಯ್ಯುವಾಗ ಬಳಸಲಾಗುತ್ತೆ. ಆದರೆ ಅದು ಬಂದಿರಬಹುದಾದ ಮೂಲ ಭಾಷೆ(ಬಹುಶಃ ಉರ್ದು)ಯಲ್ಲಿ ಅದಕ್ಕೆ ಬೇರೆಯೇ ಅರ್ಥವಿದೆ.
ಅಂತೂ ವಿದ್ಯಾರ್ಥಿನಿಯೊಬ್ಬಳು ಬಳಸಿದ ಒಂದು ಕನ್ನಡ ಪದ ಸಾಕಷ್ಟು ಕಾಡಿತು ನೋಡಿ!!