ಕಂಗ್ಲಿಷ್ ದ್ವಿರುಕ್ತಿಗಳು! ಹಾಂ, ಇವತ್ತಿನ ‘ಕನ್ನಡ ಪ್ರಸಂಗ’ದಲ್ಲಿ ನಾನು ಪ್ರಸ್ತಾಪಿಸಬೇಕೆಂದಿರುವುದು — ಕನ್ನಡ ಭಾಷೆಯಲ್ಲಿ, ಅದರಲ್ಲೂ ಬೆಂಗಳೂರಿನಂತಹ ನಗರ ಪ್ರದೇಶಗಳ ಕನ್ನಡದಲ್ಲಿ ಆಗಾಗ್ಗೆ ಬಳಕೆಯಾಗುವ ಕಂಗ್ಲಿಷ್ ದ್ವಿರುಕ್ತಿಗಳ ಬಗ್ಗೆ. (ಕಂಗ್ಲಿಷ್ ಅಂದ್ರೆ ಇಂಗ್ಲಿಷ್ ಭಾಷೆ ಧಾರಾಳವಾಗಿ ಬೆರೆತ ಕನ್ನಡ ಅಂತ ಎಲ್ಲರಿಗೂ ಗೊತ್ತಿರುತ್ತೆ.)
ಪ್ರಾಥಮಿಕ ಶಾಲಾ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ನಮ್ಮ ತಾಯಿಯವರು, ನಾವು ಚಿಕ್ಕವರಿದ್ದಾಗ ‘ಇಟ್ ಅದು ಬಟ್ ಆದ್ರೆ ವ್ಹಾಟ್ ಏನು? ‘ ಎಂದು ಹೇಳಿ ನಮ್ಮನ್ನು ನಗಿಸುತ್ತಿದ್ದರು. ಇಂಗ್ಲಿಷ್ ಪದ ಮತ್ತು ಅದರ ಸಂವಾದಿ ಕನ್ನಡ ಪದ ಒಟ್ಟೊಟ್ಟಿಗೆ ಇರುವ ಚತುರ ವಾಕ್ಯ ಅದು. ಆದರೆ ನಾವು ಸೂಕ್ಷ್ಮವಾಗಿ ಕೇಳಿಸಿಕೊಂಡರೆ ನಮ್ಮ ಸುತ್ತಮುತ್ತಲು ಇರುವ ಜನ ದಿನ ಬಳಕೆಯ ಮಾತಿನಲ್ಲಿ ಸಹ ಇಂತಹ ದ್ವಿರುಕ್ತಿಗಳನ್ನು ಬಳಸುತ್ತಾರೆ! ‘ಗೇಟ್ ಬಾಗಿಲು ಹಾಕಿದ್ಯಾ?’ , ‘ಬಟ್ಟಾದ್ರೆ ನನ್ ತಂಗಿ ಮಗು ನಾಮಕರಣ ಇದೆ, ನಾ ನಾಳೆ ಆಫೀಸಿಗೆ ಬರಕ್ಕಾಗಲ್ಲ’, ‘ಮೈನ್ ಇಂಪಾರ್ಟೆಂಟ್ ಅಂದ್ರೆ ಮೊದಲು ರೈಲಿಗೆ ರಿಸರ್ವೇಶನ್ ಮಾಡಿಸ್ಬೇಕು’…..ಇಂತಹ ವಾಕ್ಯಗಳು ನಮ್ಮ ಕಿವಿ ಮೇಲೆ ಬೀಳುತ್ತಿರುತ್ತವೆ. ಈ ನುಡಿಮಿಶ್ರಣವು ನಮ್ಮ ಕನ್ನಡ ಭಾಷೆಯು ಕಾಲಕಾಲಕ್ಕೆ ಬದಲಾಗುವ ರೀತಿಯ ಭಾಗವೇ ಇರಬಹುದು. ಏನಂತೀರಿ? ‘ಯೆಸ್, ಹೌದು ಅಂತೀರಾ?
Like us!
Follow us!