ಕನ್ನಡ ಗಾದೆಮಾತುಗಳ ರಾಶಿಯನ್ನು ಗಮನಿಸಿದಾಗ ಕಂಡುಬರುವ ಒಂದು ಅಪರೂಪದಸ್ತ್ರೀಪರ ಗಾದೆ ಮಾತಿದು. ಪುರುಷಪ್ರಧಾನ ವ್ಯವಸ್ಥೆಯಿರುವ ಸಮಾಜಗಳಲ್ಲಿನ ಭಾಷೆ ಹಾಗೂ ಗಾದೆಮಾತುಗಳು ಕೂಡ ಸ್ತ್ರೀವಿರೋಧಿಯಾಗಿರುವುದನ್ನು ಗಮನಿಸುವಾಗ ಈ ಗಾದೆಮಾತು ಹೆಣ್ಣಿನ ಬಗ್ಗೆ ಒಳ್ಳೆಯ ಭಾವನೆ ಪ್ರಕಟಿಸಿರುವುದು ಸಮಾಧಾನದ ವಿಷಯವಾಗಿದೆ. ಮನೆಯಲ್ಲಿ ಅಜ್ಜಿ, ತಾಯಿ, ಅಕ್ಕ, ತಂಗಿ, ಅತ್ತೆ, ಸೊಸೆ, ದೊಡ್ಡಮ್ಮ, ಚಿಕ್ಕಮ್ಮ, ಅತ್ತಿಗೆ, ನಾದಿನಿ, ಮಗಳು, ಮೊಮ್ಮಗಳು ……… ಹೀಗೆ ನಾನಾ ಪಾತ್ರಗಳನ್ನು ನಿಭಾಯಿಸುವ ಹೆಣ್ಣುಜೀವವು ಜನ್ಮ ಕೊಡುವುದಷ್ಟೇ ಅಲ್ಲ, ಜೀವಗಳನ್ನು, ಜೀವನವನ್ನು ಜತನದಿಂದ ಕಾಪಾಡುವ ಕೆಲಸವನ್ನೂ ಮಾಡುತ್ತದೆ. ಕಾಳಜಿ, ಪ್ರೀತಿಗಳ ಅಂಟಿನಿಂದ ಮನೆಯವರನ್ನೆಲ್ಲ ಬೆಸೆಯುವ ಸಾಮರ್ಥ್ಯವು ಹೆಣ್ಣುಮಗಳಿಗಿರುತ್ತದೆ. ಅಡಿಗೆ ಮನೆಯ ಒಪ್ಪ ಓರಣ, ಶುಚಿತ್ವ, ಅಲಂಕಾರ, ಕೈತೋಟ ಮಾಡುವಿಕೆ, ಹಾಡು-ಹಸೆ, ಪೂಜೆ-ಪುನಸ್ಕಾರ, ಸಹಕಾರ, ಸತ್ಕಾರಗಳಿಂದ ಹೆಣ್ಣು ಮನೆಗೆ ತರುವ ಕಳೆ, ಕಾಂತಿ ವಿಶಿಷ್ಟವಾದುದು. ಜೊತೆಗೆ ಉದ್ಯೋಗಸ್ಥ ಮಹಿಳೆಯಾಗಿ ಅವಳು ಕೊಡುವ ಆರ್ಥಿಕ ಕೊಡುಗೆ ಸಹ ಗಮನೀಯವಾದುದು. ಹಣ್ಣಿರುವ ಮರವು ಎಷ್ಟು ಸಮೃದ್ಧವಾಗಿ, ವರ್ಣಮಯವಾಗಿ ಕಣ್ಣಿಗೆ, ಮನಸ್ಸಿಗೆ, ಹಸಿದ ಹೊಟ್ಟೆಗೆ ಆನಂದ ಕೊಡುತ್ತದೆಯೋ ಹಾಗೆಯೇ ಮನೆಯಲ್ಲಿನ ಹೆಣ್ಣು ಸಹ ಮನಸ್ಸಿಗೆ ಶಾಂತಿ, ನೆಮ್ಮದಿಗಳನ್ನು ಕೊಡುತ್ತಾಳೆ.

Kannada proverb: Hennillada mane, hannillada mara (A home without a woman, a tree without fruits).

In patriarchal societies there are many misogynistic sayings and proverbs. Therefore it is a rare feeling and a good experience to see something positive being said about women. This proverb means that a home without a woman is barren and empty like fruitless tree. We know that a woman plays multiple roles in a family as a mother and in many forms of a mother figure. And a baby girl at home is always a bundle of joy. The warmth and love a woman brings lights up a home. And to give woman her due credit on International Working Women’s day (i.e. 8th March) should be a loving duty of every individual, because everyone is indebted to at least one woman in their lives. Therefore this proverb does well to remind us the importance of women in our lives.