ಮೊನ್ನೆ ಒಂದು ವಿದ್ಯಾಸಂಸ್ಥೆಯ ಸಮಾರಂಭಕ್ಕೆ ಹೋಗಿದ್ದೆ. ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಅದು. ಅಲ್ಲಿನ ಸಾಧಕ ಕಿಶೋರ – ಕಿಶೋರಿಯರ ಮತ್ತು ಬೆಂಬಲಿಸಿದ ಅವರ ಅಪ್ಪ-ಅಮ್ಮ, ಅಜ್ಜಿ-ತಾತಂದಿರ ಸಂತೋಷ, ಸಂಭ್ರಮಗಳು ನನ್ನ ಅಧ್ಯಾಪಕ ಮನಸ್ಸಿಗೆ ಬಹು ಮುದ ತಂದವು.
ಮಕ್ಕಳ ಹೆಸರು ಕರೆಯುತ್ತಿದ್ದಂತೆ ಅವರು ವೇದಿಕೆಗೆ ಬಂದು ಪುರಸ್ಕಾರವನ್ನು ಸ್ವೀಕರಿಸಿ ತೆರಳುತ್ತಿದ್ದರು. ಈ ಹಿಗ್ಗಿನ ತೇರು ಸಾಗುತ್ತಿದ್ದಂತೆ ಒಂದು ಹೆಸರನ್ನು ಕರೆಯಲಾಯಿತು. ‘ಕ್ಷಣಿಕ’ ಎಂಬ ಹೆಸರು ಅದು. ಹೆಣ್ಣುಮಗಳೊಬ್ಬಳು ಬಂದು ಅದನ್ನು ಸ್ವೀಕರಿಸಿದಳು. ಕ್ಷಣಿಕ ಅಂದರೆ ಕ್ಷಣಕಾಲ ಮಾತ್ರ ಇರುವ, ಆಶಾಶ್ವತವಾದ ಎಂದು ಅರ್ಥ. ಈ ಹೆಸರನ್ನು ಇಡುವಾಗ ಹಿರಿಯರು ಅದರ ಅರ್ಥದ ಬಗ್ಗೆ ಆಲೋಚಿಸಲಿಲ್ಲವೆ? ಜಾತಕ ನೋಡಿದವರು ” ‘ಕ’/ಕ್ಷ ಎಂಬ ಅಕ್ಷರದಿಂದ ಹೆಸರಿಡಿ” ಎಂದು ಹೇಳಿದ್ದರಿಂದ ಹೀಗೆ ಮಾಡಿದರೋ, ಇಲ್ಲವೆ ಅಂತರ್ಜಾಲ ನೋಡಿಯೋ, ಅಥವಾ ಯಾರೋ ಹೇಳಿದರೆಂದೋ ಈ ಹೆಸರಿಟ್ಟರೊ? ನಿಜಕ್ಕೂ ಪ್ರಶ್ನೆಗಳ ಗೂಡಾಯಿತು ನನ್ನ ಮನಸ್ಸು!