‘ಕನ್ನಡದ ಕಾದಂಬರಿ ಸಾರ್ವಭೌಮ’ ಎಂಬ ಹೆಗ್ಗಳಿಕೆಯನ್ನು ಗಳಿಸಿದ ಶ್ರೀಯುತ ಅರಕಲಗೂಡು ನರಸಿಂಗರಾವ್ ಕೃಷ್ಣ ರಾವ್ (ಅನಕೃ : 1908 – 1971 ) ಅವರು ಅಪ್ಪಟ ಕನ್ನಡಾಭಿಮಾನಿ.‌ ಕರ್ನಾಟಕ    ಏಕೀಕರಣಕ್ಕಾಗಿ ದುಡಿದದ್ದು ಮಾತ್ರವಲ್ಲ, ವಿವಿಧ ಕಾರಣಗಳಿಂದ ಕನ್ನಡಕ್ಕೆ ನಮ್ಮ ನಾಡಿನ ಕೆಲವು ಪ್ರದೇಶಗಳಲ್ಲಿ ಮನ್ನಣೆ ಇರದಿದ್ದ ಸಂದರ್ಭದಲ್ಲಿ, ತಮ್ಮಂತೆಯೇ ಕನ್ನಡಪರರಾದ ಅಭಿಮಾನಿಗಳನ್ನು ಜೊತೆಗೆ ಕಟ್ಟಿಕೊಂಡು, ಕನ್ನಡ ನಾಡಿನ ಉದ್ದಗಲಕ್ಕೂ ಓಡಾಡಿ, ಕನ್ನಡದ ಜಯಘಂಟೆಯನ್ನು ಬಾರಿಸಿದವರು ಈ ಮಹನೀಯರು. ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿ ಅವರು ಕನ್ನಡಿಗರಿಗೆ ನಾಲ್ಕು ಮಂತ್ರಗಳನ್ನು ಕೊಟ್ಟರು. ಅವು ಹೀಗಿವೆ‌.

      1. ಕನ್ನಡದಲ್ಲಿ ಮಾತಾಡೋಣ.

       2. ಕನ್ನಡ ಪುಸ್ತಕಗಳನ್ನು ಓದೋಣ.

       3. ಕನ್ನಡ ಹಾಡುಗಳನ್ನು ಕೇಳೋಣ.

       4. ಕನ್ನಡ ಸಿನಿಮಾಗಳನ್ನು ನೋಡೋಣ.

 ಈಗ, ಕನ್ನಡದ ತಂತ್ರಾಂಶ ರೂಪ ದಿನೇದಿನೇ ಹೆಚ್ಚುತ್ತಿರುವ ಈ ದಿನಗಳಲ್ಲಿ ನಗರ ಪ್ರದೇಶಗಳ ಆಡುಮಾತಿನಲ್ಲಿ, ಮಾಧ್ಯಮಗಳ ಸುದ್ದಿ-ಜಾಹೀರಾತುಗಳಲ್ಲಿ, ಅಂಗಡಿಗಳ ಫಲಕ,  ಜೊತೆಸಾಲು ( ಟ್ಯಾಗ್ ಲೈನ್)ಗಳಲ್ಲಿ, ಹೋಟೆಲುಗಳ ಖಾದ್ಯ ಪಟ್ಟಿಯಲ್ಲಿ ಕನ್ನಡ ಪದಗಳನ್ನೇ ಬಳಸಬೇಕೆಂಬ ಹುಮ್ಮಸ್ಸು, ಹುರುಪು, ಆಸಕ್ತಿ ಅಷ್ಟಾಗಿ ಕಾಣಿಸುತ್ತಿಲ್ಲ. ಉದಾಹರಣೆಗೆ, “ಶ್ರೀ ರಾಘವೇಂದ್ರ ವೆಜ್, ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಚೈನೀಸ್,  ಜ್ಯೂಸ್ & ಚಾಟ್ಸ್’ ಇಂತಹ ನಾಮಫಲಕಗಳು ಬಹಳವಾಗಿ ಕಾಣುತ್ತವಲ್ಲವೆ? ಇದೇ ನಾಮಫಲಕವನ್ನು “ಶ್ರೀ ರಾಘವೇಂದ್ರ ಸಸ್ಯಾಹಾರಿ, ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಚೀನೀ, ಹಣ್ಣಿನ ರಸ ಹಾಗೂ ಚಾಟ್ ಗಳು” ಎಂದು ಬರೆಯಬಹುದಲ್ಲವೆ? 

ಇಂದು ಅನಕೃ ಬದುಕಿದ್ದಿದ್ದರೆ ಕನ್ನಡ ತಂತ್ರಾಂಶಗಳನ್ನು ಬಳಸೋಣ, ಗರಿಷ್ಠ ಕನ್ನಡದಲ್ಲಿ ಮಾತಾಡೋಣ, ನಾಮಫಲಕಗಳನ್ನು ಕನ್ನಡೀಕರಿಸೋಣ ಎಂಬ  ಮಂತ್ರಗಳನ್ನು ಕೂಡ ತಾವು ಕೊಟ್ಟ ನಾಲ್ಕು ಮಂತ್ರಗಳೊಂದಿಗೆ ಸೇರಿಸುತ್ತಿದ್ದರೇನೊ‌ ಅನ್ನಿಸುತ್ತೆ‌. 

 ಕನ್ನಡವನ್ನು ಉಳಿಸುವುದೆಂದರೆ ಅದನ್ನು ಬಳಸುವುದು. ಅನಕೃ ಅವರ ಚೈತನ್ಯ, ಕನ್ನಡಾಭಿಮಾನಗಳು‌ ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು.