ಇಂದು ಫೆಬ್ರವರಿ 18. ಕವಿ ಅಡಿಗರ ಜನ್ಮ ದಿನ( ಜನನ – 18-02-2018).

ಅಡಿಗರು ಅಂದರೆ ನಮ್ಮ ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಮುಖ್ಯರಾದ ಮೊಗೇರಿ ಗೋಪಾಲಕೃಷ್ಣ ಅಡಿಗರು. ಇವರು ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳನ್ನು ಕರಗತ ಮಾಡಿಕೊಂಡಿದ್ದವರು‌. ಅವರ ಕವಿತೆಗಳೆಂದರೆ ಅಪರೂಪದ ಶಬ್ಧಗಳ ಖಜಾನೆಯೇ ಸರಿ. ಒಂದು ಉದಾಹರಣೆ ಕೊಡುವುದಾದರೆ, ಅವರ ಕವಿತೆಯೊಂದರಲ್ಲಿ ‘ಷಾಪಸಂದ್’ ಎಂಬ ಪದ ಬರುತ್ತದೆ. ಹಿಂದೊಮ್ಮೆ ಜ್ಞಾನಭಾರತಿಯಲ್ಲಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ನಾನು ಆ ಕವಿತೆಯನ್ನು ಪಾಠ ಮಾಡಬೇಕಾಗಿದ್ದುದರಿಂದ,  ‘ಷಾಪಸಂದ್’ ಪದದ ಅರ್ಥ ಹುಡುಕಲು ತುಂಬ ಕಷ್ಟ ಪಟ್ಟೆ. ಸಮಾನ್ಯ ನಿಘಂಟುಗಳಲ್ಲಿ ಷಹ( ರಾಜ)  ಅನ್ನುವ ಪದ ಸಿಗುತ್ತಿತ್ತೇ ಹೊರತು ಷಾಪಸಂದ್/ಷಾಪಸಂದು ಸಿಗುತ್ತಿರಲಿಲ್ಲ. ನಂತರ, ಛಲ ಬಿಡದ ತ್ರಿವಿಕ್ರಮನಂತೆ, ಪಾವೆಂ ಆಚಾರ್ಯ ಅವರ ‘ಪದಾರ್ಥ ಚಿಂತಾಮಣಿ’, ಜಿ.ವಿ.ವೆಂಕಟಸುಬ್ಬಯ್ಯ ಅವರ ‘ಇಗೋ ಕನ್ನಡ’, ‘ಎರವಲು ಪದಕೋಶ’ ಇಂತಹ ವಿಶೇಷ ನಿಘಂಟುಗಳಲ್ಲಿ ಹುಡುಕಿದ್ದಾಯಿತು. ಅಂತೂ ಕೊನೆಗೆ ಇದರ ಅರ್ಥ ಸಿಕ್ಕಿತು ನೋಡಿ, ‘ಎರವಲು ಪದಕೋಶ’ದಲ್ಲಿ! ಷಾಹ್ ಅಂದರೆ ರಾಜ, ಪಸಂದು ಎಂದರೆ ಇಷ್ಟವಾದದ್ದು ಹಾಗೂ ಇಲ್ಲಿ ಷಾಪಸಂದು ಅನ್ನುವ ಪದವನ್ನು ಬಳಸುತ್ತಿದ್ದದ್ದು – ರಾಜನಿಗೆ ಇಷ್ಟವಾದ ಕುದುರೆಗಾಡಿಗೆ! ಈ ಪದವನ್ನು ಅಡಿಗರು ತಮ್ಮ ಕವಿತೆಯಲ್ಲಿ ಬಳಸಿದ್ದಾರಲ್ಲ! ಎಲ್ಲಿಯ ಮೊಗೇರಿ, ಎಲ್ಲಿಯ ಮೈಸೂರು, ಎಲ್ಲಿಯ ಷಹ ಮತ್ತು ಅವನ ಪಸಂದು! ಅಬ್ಬ! ಅನ್ನಿಸಿತು ನನಗೆ. ಇದು ಒಂದು‌ ಉದಾಹರಣೆ ಅಷ್ಟೆ. ‌ಇಂತಹ ಅನೇಕ ಅಪರೂಪದ ಪದಗಳು ಅಡಿಗರ ಕವಿತೆಗಳಲ್ಲಿ ಸಿಗುತ್ತವೆ.

ಹೊಸ ಶಬ್ದಗಳನ್ನು ಕಲಿಯುವ ಆಸೆ ಅಡಿಗರಲ್ಲಿ ಎಷ್ಟಿತ್ತಂತೆ ಅಂದರೆ ಪ್ರತಿ ದಿನ ನಿಘಂಟಿನಿಂದ ಅವರು ಒಂದು ಹೊಸ ಪದವನ್ನು ಕಲಿಯುತ್ತಿದ್ದರಂತೆ! ಇದಕ್ಕಾಗಿಯೇ ನೋಡಿ, ಇವರ ಕವಿತೆಗಳಲ್ಲಿ ಅನೇಕ ವಿಶೇಷ ಹಾಗೂ ಅಪರೂಪದ ಪದಗಳು ಮತ್ತು ಶ್ಲೇಷಾಲಂಕಾರಗಳು (ಒಂದೇ ಪದವನ್ನು ಅನೇಕ ಅರ್ಥಗಳಲ್ಲಿ ಬಳಸುವುದು) ಸಿಗುತ್ತವೆ. ಸಂಸ್ಕೃತ ವಿದ್ವಾಂಸ ಡಾ.ಶ್ರೀರಾಮ ಭಟ್ಟರು ಅಡಿಗರು ಬಳಸಿದ ಶಬ್ದಗಳ ಬಗ್ಗೆಯೇ ಒಂದು ಪುಸ್ತಕ ಬರೆದಿದ್ದಾರೆ( ಶಬ್ದತೀರ). 

ಅಡಿಗರ ಈ ಶಬ್ದಪ್ರೀತಿ ಅನುಕರಣೀಯ‌‌. ವಿದ್ಯಾರ್ಥಿಗಳಿಗೆ, ಭಾಷಾ ಅಧ್ಯಾಪಕರಿಗೆ ಮತ್ತು ಭಾಷಾಪ್ರೇಮಿಗಳಿಗೆ ತುಂಬ ಉಪಯೋಗಕ್ಕೆ ಬರುವ ಅಭ್ಯಾಸ ಇದು. ಅಡಿಗರ ನೆನಪಿಗೊಂದು ನಮಸ್ಕಾರ ಸಲ್ಲಿಸೋಣ.