ಹೂ ಮಾರುವವರ ಜೊತೆಯಲ್ಲಿ ವ್ಯವಹರಿಸುವಾಗ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆಗುವಂತಹ ಅನುಭವಗಳು ತುಂಬ ಸ್ವಾರಸ್ಯಕರವಾಗಿರುತ್ತವೆ. ಇತ್ತೀಚೆಗೆ, ನಾನು ವಾಸ ಇರುವ ಬೆಂಗಳೂರಿನ ಹಂಪಿನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಹೂ ಮಾರುತ್ತಿದ್ದ ಒಬ್ಬ ವ್ಯಾಪಾರಿಯ ಬಳಿ ಹೂ ಕೊಳ್ಳಲು ಹೋಗಿದ್ದೆ. ಅಲ್ಲಿ ಮೊಲ್ಲೆ ಹೂವು ಮತ್ತು ಮಲ್ಲಿಗೆ ಹೂವು ಪಕ್ಕ ಪಕ್ಕ ಇದ್ದವು. ನಾನು ಮೊಲ್ಲೆ ಹೂವನ್ನು ತೋರಿಸಿ ”ಎಷ್ಟು ಇದಕ್ಕೆ?” ಅಂತ ಕೇಳಿದೆ. “ಮೂವತ್ತು ರೂಪಾಯಿ ಮೊಳ” ಅಂದ ಆ ವ್ಯಾಪಾರಿ. ಪಕ್ಕದಲ್ಲಿದ್ದ ಮಲ್ಲಿ
ಗೆಯನ್ನು ತೋರಿಸಿ ” ಇದು” ಅಂದೆ. ಅವನು ‘ಅದು ಮಲ್ಲಿಗೆ, ಜಾಸ್ಮಿನ್ ಮೇಡಂ. ಫೋರ್ಟಿ ರುಪೀಸ್” ಅಂದ. ಕನ್ನಡದಲ್ಲಿ ಹೇಳಿದರೆ ನನಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದನೋ ಏನೋ ಅವನು. ಇದರ ಅರ್ಥವೇನೆಂದರೆ ಬಹುಶಃ ಆ ವ್ಯಾಪಾರಿಯ ಬಳಿ ಹೂ ಕೊಳ್ಳುವವರಲ್ಲಿ ಅನೇಕರು ಕನ್ನಡ ಬಾರದವರಿರಬೇಕು, ಅದಕ್ಕೇ ಅವನು ತಕ್ಷಣ ತಾನು ಹೇಳಿದ್ದನ್ನು ಇಂಗ್ಲಿಷ್ ಗೆ ಅನುವಾದಿಸುತ್ತಿದ್ದ ಅನ್ನಿಸುತ್ತದೆ. ತನ್ನ ಗ್ರಾಹಕರಿಗೆ ಅದರಲ್ಲೂ ತುಸು ವಿದ್ಯಾವಂತರಂತೆ ಕಾಣುವವರಿಗೆ ಕನ್ನಡ ಬರುವುದಿಲ್ಲ ಎಂದು ಊಹಿಸಿಕೊಂಡುಬಿಡುತ್ತಿದ್ದ! ಬದಲಾಗುತ್ತಿರುವ ಕನ್ನಡನಾಡಿನ ನಗರಗಳ ಜನಸಂಖ್ಯಾವಿವರಗಳಿಗೆ ಈ ಪ್ರಸಂಗ ಸಾಕ್ಷಿಯಲ್ಲವೇ!?