ವೃತ್ತಿಯಿಂದ ಕನ್ನಡ ಅಧ್ಯಾಪಕಿಯಾಗಿದ್ದು ಪ್ರವೃತ್ತಿಯಿಂದ ಲೇಖಕಿ, ಅನುವಾದಕಿ‌ ಆಗಿರುವ ನಾನು ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳನ್ನು ಹುಡುಕುವ ಕೆಲಸವನ್ನು ಮಾಡುತ್ತಲೇ ಇರುತ್ತೇನೆ. ಹುಡುಕುತ್ತಿರುವಾಗ ಆ ನಿರ್ದಿಷ್ಟ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ‌ ಒಂದು ಸರಿಯಾದ ಸಂವಾದಿ ಪದ ಸಿಕ್ಕಿಬಿಟ್ಟರೆ ಏನೋ ಖುಷಿ ನನಗೆ. ಅವತ್ತೆಲ್ಲ ಆ ಪದವನ್ನು ನೆನೆದು ನೆನೆದು ಸಂಭ್ರಮಿಸ್ತಾ ಇರ್ತೇನೆ‌‌.

ನನ್ನ ಈ ಪದಪ್ರಯಾಣದಲ್ಲಿ ಇತ್ತೀಚೆಗೆ ನನ್ನ ಗಮನ ಸೆಳೆದ ಪದ ಅಂದರೆ ಆಲ್ಬಂ( Album). ಈಗ ಐವತ್ತು ವರ್ಷ ದಾಟಿರುವ ನನ್ನ ಪೀಳಿಗೆಯವರಿಗೆ ನೆನಪಿರಬಹುದಾದಂತೆ, ನಾವು ಚಿಕ್ಕ ಮಕ್ಕಳಿದ್ದಾಗ ಆಲ್ಬಂ ಅನ್ನುವುದು ‘ಛಾಯಾಚಿತ್ರಗಳನ್ನು ಅಂಟಿಸಿ ಇಡುವ ದಾಖಲೆ ಪುಸ್ತಕ’ವಾಗಿರುತ್ತಿತ್ತು. ಆದರೆ ಈಗ ಇಪ್ಪತ್ತು ವರ್ಷಗಳಿಂದ ಈಚೆಗೆ,  ಸಂಗೀತಕ್ಕೆ ಸಂಬಂಧಿಸಿದ ತಂತ್ರಜ್ಞಾನವು ತುಂಬ ಅಭಿವೃದ್ಧಿಗೊಂಡು, ಹಾಡುಗಳನ್ನು ಅಡಕಮುದ್ರಿಕೆ( ಸಿಡಿ) ಯಲ್ಲಿ ಇಡುವ ರೀತಿಯು ಜಾರಿಗೊಂಡ ಮೇಲೆ ಆಲ್ಬಂ ಎಂಬುದು (ಖರೇ ಅಂದರೆ) ಯುವಪೀಳಿಗೆಗೆ ಹೊಳೆಯಿಸುವ ಅರ್ಥ ಬದಲಾಯಿತು! ಕಾಲದೊಂದಿಗೆ ಪದಗಳ ಪ್ರಯಾಣದ ರೀತಿಯು ಎಷ್ಟು ಆಶ್ಚರ್ಯ ಹುಟ್ಟಿಸುತ್ತದಲ್ಲ!

ಇರಲಿ‌. ಮೊನ್ನೆ ಹೀಗೇ ಏನೋ ಬರೆಯುತ್ತಿರುವ ಸಂದರ್ಭದಲ್ಲಿ ಆಲ್ಬಂ ಎಂಬ ಪದಕ್ಕೆ ಯಾವ ಕನ್ನಡ ಪದ ಬಳಸುತ್ತಾರೆ ಎಂಬ ಪ್ರಶ್ನೆ ಮನಸ್ಸಿಗೆ ಬಂತು. ಡಿ.ಕೆ.ಭಾರದ್ವಾಜ್ ಇಂಗ್ಲಿಷ್- ಇಂಗ್ಲಿಷ್- ಕನ್ನಡ  ನಿಘಂಟಿನಲ್ಲಿ ‘ಹಸ್ತಾಕ್ಷರ, ಅಂಚೆ ಚೀಟಿ, ಭಾವಚಿತ್ರ ಮುಂತಾದವುಗಳನ್ನು ಅಂಟಿಸಿ ಇಡಲು ಇರುವ ಖಾಲಿ ಪುಸ್ತಕ’ ಎಂಬ ಅರ್ಥವನ್ನು ಕೊಟ್ಟಿದ್ದಾರೆ. 

ಅಂದ ಹಾಗೆ album ಪದದ ಮೂಲ  albus. ಅದು ಲ್ಯಾಟಿನ್ ಭಾಷೆಯ ಪದವಾಗಿದ್ದು ಅದಕ್ಕೆ ಬಿಳಿ ಎಂಬ  ಅರ್ಥ ಇದೆಯಂತೆ! ಹಳೆಯ ಕಾಲದಲ್ಲಿ ಬಿಳಿಯ ಫಲಕದ ಮೇಲೆ ತೀರ್ಪು, ರಾಜಾಜ್ಞೆ ಇಂಥವನ್ನು ಕಪ್ಪು ಅಕ್ಷರಗಳಲ್ಲಿ ಬರೆಯುತ್ತಿದ್ದರಂತೆ. ಆಲ್ಬಂ ಪದದ ಮೂಲ ಅರ್ಥ ಇದೇ ಅಂತೆ!

ಸರಿ. ನಂತರ ನನ್ನ ಚಲನವಾಣಿಯಲ್ಲಿ ಇರುವ English Kannada Dictionary ಎಂಬ ಅನ್ವಯ (Application – App)ರಾಯರನ್ನು ಕೇಳಿದೆ! ಅವರು Album ಎಂಬ ಪದಕ್ಕೆ ಕೊಟ್ಟ  ಸಂವಾದಿ ಪದ ‘ಇಡುವಹಿ’. ಅಂದರೆ ದಾಖಲೆ, ಚಿತ್ರ ಇತ್ಯಾದಿಗಳನ್ನು ‘ಇಡುವ’ ಪುಸ್ತಕ(ವಹಿ ಅಂದರೆ ಪುಸ್ತಕ). ಚೆನ್ನಾಗಿದೆ ಅಲ್ಲ? ‘Album’ ನಷ್ಟೇ  ಸರಳವಾಗಿ, ಚಿಕ್ಕದಾಗಿ ಇದೆ –  ಈ ‘ಇಡುವಹಿ’. ಏನಂತೀರಿ ಕನ್ನಡ ಪ್ರಿಯರೇ?