ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ,  ಯಾವುದಾದರೂ ವಿಭಾಗದ ಹಿರಿಯ ವಿದ್ಯಾರ್ಥಿಗಳಿಗೆ ಅದೇ ವಿಭಾಗದ ಕಿರಿಯ ವಿದ್ಯಾರ್ಥಿಗಳು ಬೀಳ್ಕೊಡುಗೆ ಕೊಡುವುದು ವಾಡಿಕೆ.‌ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಆ ವಿಭಾಗದ ಹಿರಿಯ ವಿದ್ಯಾರ್ಥಿಗಳು ಸ್ವಾಗತ ಸಮಾರಂಭ ಏರ್ಪಡಿಸುವುದೂ ಸಾಮಾನ್ಯ ಅನ್ನಿ.‌ 

ನಮ್ಮ ಕಾಲೇಜಿನ ಸಭಾಂಗಣವು ಕನ್ನಡ ವಿಭಾಗದ ಪಕ್ಕವೇ ಇದೆ.‌ ಹೀಗಾಗಿ ನಮಗೆ ಈ ಸ್ವಾಗತ ಸಮಾರಂಭ, ಬೀಳ್ಕೊಡುಗೆಗಳಾಗುವಾಗ ಚಂದಚಂದದ ಬಟ್ಟೆ ತೊಟ್ಟ ವಿದ್ಯಾರ್ಥಿನಿಯರ ಸರಬರ ಓಡಾಟ, ಅವರ ಖುಷಿಖುಷಿ ಹಾಡು, ನೃತ್ಯ, ಅಧ್ಯಾಪಕರ ಹಾರೈಕೆಯ ನುಡಿ…ಇತ್ಯಾದಿಗಳಿಗೆ ನಾವು ಕನ್ನಡ ಅಧ್ಯಾಪಕರು ಸಾಕ್ಷಿಯಾಗುತ್ತೇವೆ. 

ಹೀಗಯೇ ಮೊನ್ನೆ ಒಂದು ವಿಭಾಗದ ವಿದ್ಯಾರ್ಥಿನಿಯರು ಒಂದು ಸಮಾರಂಭಕ್ಕೆ ತಯಾರಾಗುತ್ತಿದ್ದರು. ಇದು ಶೈಕ್ಷಣಿಕ ವರ್ಷ ಮುಗಿಯುವ ಸಂದರ್ಭವಾದದ್ದರಿಂದ  ನಾನು ಸಹಜವಾಗಿ “ಏನಮ್ಮಾ? ಬೀಳ್ಕೊಡುಗೆ ಸಮಾರಂಭಾನ?” ಅಂತ ಕೇಳಿದೆ. ಆ ಹುಡುಗಿ ಯಾಕೋ ತಬ್ಬಿಬ್ಬಾಗಿ ” ಅಲ್ಲ ಅಲ್ಲ ಮೇಡಂ, ಫೇರ್ವೆಲ್ ಫಂಕ್ಷನ್ನು” ಅಂದಳು!!  ನಾನು ಕೇಳಿದ್ದನ್ನೇ ತಾನು ಇಂಗ್ಲಿಷ್ ನಲ್ಲಿ ಹೇಳುತ್ತಿದ್ದೇನೆ ಎಂಬುದು ಪಾಪ ಅವಳಿಗೆ ಅರಿವಾಗಲೇ ಇಲ್ಲ!  “ಅದೇ ಕಣಮ್ಮಾ.‌ ಫೇರ್ವೆಲ್ ಗೆ ಕನ್ನಡದಲ್ಲಿ ಬೀಳ್ಕೊಡುಗೆ ಸಮಾರಂಭ ಅನ್ನೋದು” ಅಂದೆ.‌ ಆಗ ಆ ಹುಡುಗಿ ನಕ್ಕ ನಗೆ ಮುಗ್ಧತೆ, ಗಲಿಬಿಲಿ, ಆಭಾರಿ ಭಾವಗಳ ಸಂಮಿಶ್ರಣವಾಗಿತ್ತು.‌ 

ಬಹುಶಃ ಆಂಗ್ಲ ಭಾಷಾ ಮಾಧ್ಯಮದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ಪದಗಳನ್ನು ಕಳಕೊಳ್ಳುತ್ತಾ ಹೋಗುವುದಕ್ಕೆ ಇಂಥದ್ದು ಉದಾಹರಣೆಯಾ ಎಂದನ್ನಿಸಿದಾಗ ತುಸು ಬೇಸರವಾಗುತ್ತದೆ.