ಈ ಸಲ ತಾಪದ ಅಲೆಗಳೊಡನೆ ಬೆಂಗಳೂರನ್ನು ಕಾಡಿದ ಬೇಸಗೆಯ ಶಾಖಕ್ಕೆ ಹೆದರಿ, ಮನೆಯಲ್ಲಿ ಧರಿಸಲು ಒಂದೆರಡು ಹತ್ತಿ ಬಟ್ಟೆಗಳ ಖರೀದಿಗೆಂದು ರಾಜಾಜಿನಗರದ ಬಟ್ಟೆಯಂಗಡಿಯೊಂದಕ್ಕೆ ಹೋಗಿದ್ದೆ. ಇಪ್ಪತ್ತು- ಇಪ್ಪತ್ತೈದು ವಯಸ್ಸಿನ ಮೂವರು ಯುವತಿಯರು ನಿರ್ವಹಿಸುತ್ತಿದ್ದ ಸಣ್ಣ ಬಟ್ಟೆ ಅಂಗಡಿ ಅದು.
ಸರಿ. ಉಡುಪುಗಳನ್ನು ನಾನು ಆಯ್ಕೆ ಮಾಡಲು ತೊಡಗಿದ್ದಾಗ ನನಗೆ ಸಹಾಯ ಮಾಡುವ ಉದ್ದೇಶದಿಂದ ಅವರಲ್ಲಿ ಒಬ್ಬ ಹುಡುಗಿ ನನ್ನ ಬಳಿ ಬಂದು, ಅಲ್ಲಿನ ಗೂಟಗಳಲ್ಲಿ ನೇತು ಹಾಕಿದ್ದ ಉಡುಪೊಂದನ್ನು ತೆಗೆದು “ಅಲ್ಯಾ ಕಟ್ ತಗೊಳ್ಳಿ ಮೇಡಂ, ತುಂಬ ಚೆನ್ನಾಗಿರುತ್ತೆ” ಅಂದಳು. ತನ್ನ ಮುಂಭಾಗದಲ್ಲಿ, ಮೇಲಿಂದ ಅಂದರೆ ಕುತ್ತಿಗೆಯ ಭಾಗದಿಂದ ನೇರವಾಗಿ ಇಳಿಯುತ್ತಿರುವ ಚಿತ್ತಾರದ ಒಂದು ಗೆರೆಯನ್ನು, ಕೆಳಗಿಂದ ಎರಡು ಚಿತ್ತಾರದ ಗೆರೆಗಳು, ಸೊಂಟದ ಭಾಗದಿಂದ ತಿರುವು ಪಡೆದು ಏರುತ್ತಾ, ಎದೆ ಮಧ್ಯದ ಒಂದು ಬಿಂದುವಿನಲ್ಲಿ ಸಂಧಿಸುವ ವಿನ್ಯಾಸ ಅದು. ಹೆಣ್ಣುಮಕ್ಕಳು, ಹೆಂಗಸರು ಇಂತಹ ವಿನ್ಯಾಸದ ಬಟ್ಟೆ ಧರಿಸುವುದನ್ನು ನಾ ನೋಡಿದ್ದೆನಾದರೂ ನನಗೆ ಅದರ ವಿವರಗಳು ಗೊತ್ತಿರಲಿಲ್ಲ. ಹೀಗಾಗಿ ಆ ಮಾರಾಟಗಾರ್ತಿ ‘ಅಲ್ಯಾ ಕಟ್’ ಅಂದಾಗ ನನಗೆ ಅರ್ಥವಾಗಲಿಲ್ಲ. ರಾಮಾಯಣದ ಅಹಲ್ಯಾ ಪಾತ್ರ ನೆನಪಾಗಿ ” ‘ಅಹಲ್ಯ ಕಟ್’ ಅಂತಾನ ನೀವು ಹೇಳಿದ್ದು?” ಅಂತ ಕೇಳಿದೆ. ” ಅಲ್ಲ ಅಲ್ಲ ಮೇಡಂ, ಅಲ್ಯಾ ಕಟ್….ಆಲ್ಯಾ ಕಟ್” ಅಂದಳು. ಅವಳು ದೀರ್ಘಾಕ್ಷರ ಬಳಸಿ ಆಲ್ಯಾ ಅಂದಾಗ ತುಸು ಯೋಚಿಸಿದ ಮೇಲೆ ಅದು ಆಲಿಯಾ ಇರಬಹುದೇ ಅನ್ನಿಸಿತು (ಆಲಿಯಾ ಭಟ್ – ಹಿಂದಿ ಸಿನಿಮಾಗಳ ಸುಪ್ರಸಿದ್ಧ ನಟಿ). “ಆಲಿಯಾ ಕಟ್ಟಾ ? ಸರಿಯಾ ನಾ ಹೇಳಿದ್ದು? ಅದೇ ಆಲಿಯಾ ಭಟ್ ಅಂತ ಹಿಂದಿ ನಟಿ ಇದಾರಲ್ಲ ಅವರು ಹಾಕ್ಕೊಂಡಿದ್ದಾ?” ಅಂದೆ. ಅವಳಿಗೆ ಖುಷಿಯಾಗಿ “ಹೌದು, ಹೌದು ಮೇಡಂ, ಅದೇ ಅದೇ…ಆಲ್ಯಾ ಕಟ್” ಅಂದಳು! ಅಂತೂ ಹೃಸ್ವಾಕ್ಷರ, ದೀರ್ಘಾಕ್ಷರ, ಹಕಾರ, ಆಲಿಯಾ ಎಲ್ಲ ಸೇರಿ ಸ್ವಲ್ಪ ಕಾಲ ನನ್ನ ಕನ್ನಡ ಅಧ್ಯಾಪಕ ತಲೆಯಲ್ಲಿ ಭಾರೀ ಗೊಂದಲ ಆದದ್ದು ನಿಜ!!
ಪ್ರಪಂಚದಲ್ಲಿ ನಾವು ವ್ಯವಹರಿಸುವಾಗ ಹೊಸ ಪದಗಳು ತರುವ ಫಜೀತಿ ಇಂಥವೇ ಅಲ್ವೇ!?