ಅಚ್ಚಗನ್ನಡದ ಗ್ರಾಮೀಣ ಪದವೊಂದು ನನಗೆ ಪರಿಚಯವಾದದ್ದರ ಕುರಿತಾಗಿದೆ ಈ ವಾರದ ಕನ್ನಡ ಪ್ರಸಂಗ.

ನನಗೆ ಮಲ್ಲಿಗೆ, ಸಂಪಿಗೆ, ಜಾಜಿಯಂತಹ ಪರಿಮಳಭರಿತ ಹೂಗಳೆಂದರೆ ಬಹಳ ಇಷ್ಟ.  ಬೇರೆಯವರು ಮುಡಿದದ್ದನ್ನು ನೋಡಿ ಸಂತೋಷ ಪಡುವುದು, ಹೂವಿನ ಮಾರುಕಟ್ಟೆಯಲ್ಲಿ ಈ ಹೂಗಳನ್ನು/ಹೂ ಮಾಲೆಗಳನ್ನು ಓರಣವಾಗಿ ಜೋಡಿಸಿರುವುದನ್ನು ನೋಡಿ ಆನಂದಿಸುವುದು , ನಾನು ಕೂಡ ಅವುಗಳನ್ನು ಹೆರಳಲ್ಲಿ ಮುಡಿದು ಸಂಭ್ರಮಿಸುವುದು ಇವನ್ನೆಲ್ಲ ಮಾಡುತ್ತಿರುತ್ತೇನೆ.

ಬೆಂಗಳೂರಿನಲ್ಲಿ ಈಗ ಚಳಿಗಾಲ ಅಲ್ಲವೆ? ಹೀಗಾಗಿ ಮಲ್ಲಿಗೆ ಹೂವು ಹೆಚ್ಚಾಗಿ ಮಾರುಕಟ್ಟೆಗೆ ಬಾರದೆ ಇರುವುದರಿಂದಾಗಿ ಅದರ ಬೆಲೆ ಜಾಸ್ತಿ. ಮೊನ್ನೆ ಬಸವನಗುಡಿಯ ಗಾಂಧಿಬಝಾರ್ ಹೋಗಿದ್ದ ನಾನು ಆಸೆಯಾಯಿತೆಂದು ಒಂದು ಮೊಳಕ್ಕೆ ಎಪ್ಪತ್ತು ರೂಪಾಯಿ(!) ಕೊಟ್ಟು ಮಲ್ಲಿಗ ಹೂ ತಂದೆ. ಆ ಮಾಲೆಯ  ಮೊಗ್ಗುಗಳು ತುಂಬ ಚಿಕ್ಕ ಗಾತ್ರದಲ್ಲಿದ್ದವು. ನಮ್ಮ ಮನೆವಾಳ್ತೆ ಸಹಾಯಕಿ ಯಲ್ಲಮ್ಮರಿಗೆ ಹೇಳಿದೆ “ನೋಡಿ ಯಲ್ಲಮ್ಮ, ಎಷ್ಟು ಚಿಕ್ಕದಾಗಿವೆ ಈ ಮೊಗ್ಗುಗಳು!” ಎಂದು‌. ಅವರೆಂದರು “ಕೊರೆಮೊಗ್ಗು ಅಲ್ವಾಮ್ಮ, ಅದಕ್ಕೆ”. ಅರೆ! ಕೊರೆಮೊಗ್ಗು ಎಂಬ ಪದ ಎಷ್ಟು ಚೆನ್ನಾಗಿದೆ, ಅರ್ಥಪೂರ್ಣವಾಗಿದೆಯಲ್ಲ ಅನ್ನಿಸಿತು. ಈ ಪದವನ್ನು ಆಕೆ ಒಬ್ಬ ಹೂ ಮಾರುವವರು ಬಳಸಿದಾಗ ಕೇಳಿದ್ದಂತೆ.‌ ಕೊರೆಯುವ ಚಳಿಗಾಲದಲ್ಲಿ ಬಿಡುವ ಮೊಗ್ಗು ಆದ್ದರಿಂದ ಈ ಪದಬಳಕೆ! ನಮ್ಮ ಹಳ್ಳಿಗಳ ಜನರ ಕನ್ನಡ ಎಷ್ಟು ಸರಳ ಹಾಗೂ ಅರ್ಥ ಶ್ರೀಮಂತ, ಅಲ್ಲವೆ? ಅಂದ ಹಾಗೆ ‘ಕೊರೆಮೊಗ್ಗು’ ಅನ್ನುವ ಪದಕ್ಕೆ ಸಂವಾದಿಯಾಗಿ ‘ಕಾಯಿಮೊಗ್ಗು’ ಅನ್ನುವ ಪದವನ್ನು ಸಹ ಬಳಸ್ತಾರೆ.

ಅಂತೂ ಚಳಿಗಾಲದಲ್ಲಿ ಮಲ್ಲಿಗೆ ಕೊಂಡದ್ದರಿಂದ ಒಂದು ಹೊಸ ಪದದ ಪರಿಚಯವಾಗಿ ಖುಷಿಯಾಯಿತು.