ಕೆಲವು ವರ್ಷಗಳ ಹಿಂದೆ, ನಮ್ಮ ಬೀದಿಯಲ್ಲಿ ಹೂವಾಡಗಿತ್ತಿಯೊಬ್ಬಳು ದಿನಾಲೂ “ಹೂ ಬೇಕೇ ಹೂವು….” ಎಂದು ಕೂಗುತ್ತಾ ಬರುತ್ತಿದ್ದಳು. ನಾನು ಒಮ್ಮೊಮ್ಮೆ ಅವಳ ಹತ್ತಿರ ಮಲ್ಲಿಗೆ, ಕನಕಾಂಬರ, ಮೊಲ್ಲೆ.. ಹೀಗೆ ಯಾವುದಾದರೂ ಪರಿಮಳಯುತ ಹೂವನ್ನು ಕೊಳ್ಳುತ್ತಿದ್ದೆ. ಪ್ರತಿ ಸಲ ನಾನು ಹೂ ಕೊಂಡಾಗಲೂ ಅವಳು “ಅಮ್ಮಾ…ವರ್ತ್ನೇಗ್ ಹಾಕ್ಸ್ಕೊಳೀ…” ಅನ್ನುತ್ತಿದ್ದಳು. ನಮ್ಮ ಅಕ್ಕಪಕ್ಕದವರು ಮತ್ತು ಈ ಹೂವಾಡಗಿತ್ತಿ ಆಗಾಗ ಈ ‘ವರ್ತ್ನೆ’ ಪದವನ್ನು ಬಳಸುವುದನ್ನು ಕೇಳಿಸಿಕೊಂಡಿದ್ದೆ ನಾನು.‌ ದಿನಾಲೂ ಒಬ್ಬರ ಹತ್ತಿರವೇ ಹೂ ಪಡೆದು ತಿಂಗಳ ಕೊನೆಯಲ್ಲಿ ಅದರ ಹಣದ ಲೆಕ್ಕ ಚುಕ್ತಾ ಮಾಡುವುದಕ್ಕೆ ಹೀಗೆ ‘ವರ್ತ್ನೇಗ್ ಹಾಕಿಸ್ಕೊಳ್ಳೋದು’ ಎನ್ನುತ್ತಾರೆ ಎಂದು ನನಗೆ ಗೊತ್ತಿತ್ತು. 

ನಾನು ಈ ಹೂವಾಡಗಿತ್ತಿಯ ಹತ್ತಿರ ‘ವರ್ತ್ನೇಗ್’ ಹಾಕಿಸ್ಕೊಳ್ಳೋದು ಬಿಡೋದು ಹಾಗಿರಲಿ, ಕನ್ನಡ ಭಾಷೆ, ಸಾಹಿತ್ಯದ ವಿದ್ಯಾರ್ಥಿಯಾಗಿ ನನಗೆ ಈ ‘ವರ್ತ್ನೆ’ ಅನ್ನುವ ಪದ ಬಹಳ ಕಾಟ ಕೊಡಲಾರಂಭಿಸಿತು. ‘ಯಾಕೆ ಈ ಪದವನ್ನು ಹೂಮಾರಾಟದಲ್ಲಿ ಬಳಸ್ತಾರೆ? ವರ್ತನೆ (behavior, ನಡವಳಿಕೆ) ಪದಕ್ಕೂ ಇದಕ್ಕೂ ಸಂಬಂಧ ಇರುವಂತೆ ಕಾಣಲ್ಲವಲ್ಲ. ಏನಿದು?!!’

ಮುಂದೊಂದು ದಿನ ನನ್ನ ಗೆಳತಿ ವಸು( ವಸುಂಧರ – ಈಗ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿ ಇವರು)  ಈ ಒಗಟನ್ನು ಬಿಡಿಸುವಲ್ಲಿ‌  ನನಗೆ ಸಹಾಯ ಮಾಡಿದರು. ‌”ಆವರ್ತನೆ (cycle- ನಿಯತ ಸಮಯದಲ್ಲಿ ಪುನರಾವರ್ತನೆಗೊಳ್ಳುವಂಥದ್ದು- ತಿರುಗುವಿಕೆ, ಸುತ್ತುವುದು)  ಎಂಬ ಪದ ಜನರ ಬಾಯಲ್ಲಿ ವರ್ತ್ನೇ ಆಗಿದೆ ಮೀರಾ” ಅಂದರು ಅವರು.‌ ಅರೇ ಹೌದಲ್ಲ…! ಆವರ್ತನೆ ಎಂಬ ಪದದ ಸುಲಭೀಕೃತ ರೂಪವೇ ವರ್ತ್ನೆ. ಭಾಷಾಶಾಸ್ತ್ರಜ್ಞರು ಹೇಳುವ ಸುಲಭೀಕರಣ ಸಿದ್ಧಾಂತ ನೆನಪಾಯಿತು. ಉಚ್ಚರಿಸಲು 

ಕಷ್ಟವಾದ ಪದಗಳನ್ನು ಜನರು ಸುಲಭ ಮಾಡಿಕೊಳ್ಳುವ ರೀತಿ ಇದು. ಮಹಾರಾಜ‌ – ಮಾರಾಜ, ವರ್ಷದ ತೊಡಗು – ವರ್ಷ್ತೊಡ್ಕು – ಹೊಸ್ತೊಡ್ಕು, ಅಸಹ್ಯ – ಅಸಯ್ಯ, ಸ್ವಾತಂತ್ರ್ಯ – ಸ್ವಸಂತ್ರ ……. ಹೀಗೆ! 

ಅಂತೂ ನಾವು ಕನ್ನಡ ಅಧ್ಯಾಪಕರು ತರಗತಿಯಲ್ಲಿ ಕನ್ನಡ ಪಾಠ ಮಾಡಿದರೆ ಜನರು ನಮಗೆ ಬೀದಿ, ಅಂಗಡಿ, ಮಾರುಕಟ್ಟೆಗಳಲ್ಲಿ ಹೀಗೆ ಪರೋಕ್ಷ ವಾಗಿ ಕನ್ನಡ ಪಾಠ ಮಾಡುತ್ತಾರೆ!  ಕಲಿಕೆಗೆ ಕೊನೆ ಎಲ್ಲಿದೆ!        

ಒಂದಂತೂ ನಿಜ.‌ ನನಗೆ ವರ್ತ್ನೆ ಎಂಬ ಪದ ಕಿವಿಗೆ ಬಿದ್ದಾಗಲೆಲ್ಲ ಆ ಹೂವಾಡಗಿತ್ತಿ ಮತ್ತು ಗೆಳತಿ ವಸುಂಧರ ನೆನಪಾಗ್ತಾರೆ.