ನಾವು ಕನ್ನಡ ಅಧ್ಯಾಪಕರು ಚುಕ್ಕಿ(ಪೂರ್ಣವಿರಾಮ), ಪುಟ್ಟ ಕೊಕ್ಕೆ(ಅಲ್ಪವಿರಾಮ)ಗಳಂತಹ ನೋಡಲು ಅತಿ ಚಿಕ್ಕದಾಗಿರುವ ಸಂಗತಿಗಳ ಬಗ್ಗೆ, ಅಂದರೆ ಲೇಖನಚಿಹ್ನೆಗಳ ಬಗ್ಗೆ ಬಹಳ ತಲೆ ಕೆಡಿಸ್ಕೋತೀವಿ. ಇವುಗಳನ್ನು ಸರಿಯಾಗಿ ಬಳಸಬೇಕಾದ ರೀತಿಯನ್ನು ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ಹೇಳ್ತಾನೇ ಇರ್ತೀವಿ. ವಿದ್ಯಾರ್ಥಿಗಳಿರಲಿ ನಾವು ಅಧ್ಯಾಪಕರೇ ಈ ಪುಟಾಣಿ ಗುರುತುಗಳ ಬಗ್ಗೆ ಎಷ್ಟು ಜಾಗ್ರತೆ ವಹಿಸಬೇಕಾಗುತ್ತೆ ಎಂಬುದನ್ನು ತೋರಿಸಿಕೊಡುವ ಪ್ರಸಂಗವೊಂದು ಒಮ್ಮೆ ನಾನು ಕೆಲಸ ಮಾಡಿದ್ದ ಕಾಲೇಜೊಂದರಲ್ಲಿ ನಡೆದಿತ್ತು. ಅದನ್ನು ಹೇಳಲೆಂದೇ ಈ ಪ್ರಸಂಗವನ್ನು ಬರೀತಿದೀನಿ.
ಬಿಎ, ಬಿಎಸ್ಸಿ, ಬಿಕಾಂ, ಬಿಎ, ಬಿಸಿಎ ಮುಂತಾದ ವಿವಿಧ ಪದವಿ ಸಂಯೋಜನೆಗಳಿದ್ದ ದೊಡ್ಡ ಕಾಲೇಜು ಅದು. ಇಂತಹ ಕಾಲೇಜಿನಲ್ಲಿ ಕನ್ನಡ ವಿಭಾಗದ ವೇಳಾಪಟ್ಟಿಯನ್ನು ವ್ಯವಸ್ಥಿತವಾಗಿ ಮಾಡುವುದೇ ಒಂದು ಸವಾಲು. ಅನೇಕ ಸಲ, ಅಧ್ಯಾಪಕರಿಗೆ ಉಂಟಾಗುವ ಸಮಯ ಹೊಂದಾಣಿಕೆಯ ಸಮಸ್ಯೆಯೋ, ತೀರಾ ಮುಂಚೆ ಅಥವಾ ತೀರಾ ತಡವಾಗಿ ಇರುವ ತರಗತಿಗಳನ್ನು ಯಾರು ತೆಗೆದುಕೊಳ್ಳುವುದು ಎಂಬ ಪ್ರಶ್ನೆಯೋ, ಅಂತೂ ಇಂತಹ ಬೇರೆ ಬೇರೆ ಕಾರಣಗಳಿಂದಾಗಿ ವೇಳಾಪಟ್ಟಿಯು ಅಂತಿಮ ರೂಪಕ್ಕೆ ಬರುವ ಮೊದಲು ಅದರಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿರುತ್ತವೆ. ಇಂತಹ ಒಂದು ಸಂದರ್ಭದಲ್ಲಿ ನಡೆದ ಅಚ್ಚರಿಯ ಸಂಗತಿಯೊಂದನ್ನು ಇಲ್ಲಿ ಹಂಚಿಕೊಳ್ತಿದ್ದೇನೆ.
ಒಂದು ಬುಧವಾರ ನನ್ನ ಸಹೋದ್ಯೋಗಿಯೊಬ್ಬರು ‘ತನ್ನ ವೇಳಾಪಟ್ಟಿಯಲ್ಲಿ ‘ಮೊದಲ ಬಿ. ಬಿಎ’ ಎಂಬ ತರಗತಿ ಬಂದಿದೆ, ಆದರೆ ಕಲಾ ಕಾಲೇಜಿನಲ್ಲಿ ಬಿಎ ತರಗತಿಯಲ್ಲಿ ಬಿ ಎಂಬ ವಿಭಾಗವೇ ಇಲ್ಲ, ಹೀಗಾಗಿ ತರಗತಿ ಇಲ್ಲದೆ ತಾನು ವಾಪಸ್ ಬಂದುದಾಗಿ’ ಹೇಳಿದರು. ಇದಾದ ಮೂರು ನಾಲ್ಕು ದಿನಗಳ ನಂತರ, ನಮ್ಮ ಭಾಷಾ ನಿಕಾಯದ ನಿರ್ದೇಶಕರು ‘ಮೊದಲ ಬಿಬಿಎ ಮಕ್ಳು ಕನ್ನಡ ತರಗತಿ ನಡೀಲಿಲ್ಲ ಅಂತ ಬಂದಿದ್ರು. ಯಾರಿಗ್ರೀ ಆ ತರಗತಿ ಇದೆ, ನೋಡ್ಬೇಕಲ್ಲ’ ಅಂದರು. ವಿಶ್ವವಿದ್ಯಾಲಯದ ನಾಲ್ಕೂ ಕಾಲೇಜುಗಳ ಕನ್ನಡ ವಿಭಾಗಗಳ ಎಲ್ಲಾ ಅಧ್ಯಾಪಕರ ವೇಳಾಪಟ್ಟಿಗಳನ್ನು ಜಾಲಾಡಿದರೂ ಆ ತರಗತಿ ಸಿಗಲಿಲ್ಲ! ಆಮೇಲೆ ಒಬ್ಬರು ವೇಳಾಪಟ್ಟಿಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ ‘ಅರೆ, ಮೊದಲ ಬಿ.ಬಿಎ ಅನ್ನೋ ತರಗತೀನೇ ಇಲ್ಲ ಕಲಾ ಕಾಲೇಜಲ್ಲಿ. ಅದು ಮೊದಲ ಬಿಬಿಎ ತರಗತಿ ಇರ್ಬೇಕು’ ಅಂದರು. ಓಹ್… ಹೌದಲ್ಲ!!!! ಎಲ್ಲರಿಗೂ ಒಂದೇ ಒಂದು ಚುಕ್ಕಿ ಅಂದರೆ ಪೂರ್ಣವಿರಾಮವು ತಪ್ಪು ಸ್ಥಳದಲ್ಲಿ ಬಂದಿದ್ದರಿಂದ ಆದ ಗೊಂದಲ, ಅವಾಂತರದ ಬಗ್ಗೆ ಆಶ್ಚರ್ಯ ಆಯಿತು.
ಅಂತೂ, ನಾವು ವಿದ್ಯಾರ್ಥಿಗಳಿಗೆ ಲೇಖನ ಚಿಹ್ನೆಗಳನ್ನು ಸರಿಯಾಗಿ ಹಾಕುವ ಬಗ್ಗೆ ಒತ್ತಿ ಹೇಳಲು ನಮ್ಮದೇ ಉದಾಹರಣೆ ಸಿಕ್ಕಿತು ಅನ್ನಿ!
‘ಯಾರಿಟ್ಟರು ಚುಕ್ಕಿ?….. ಯಾಕಿಟ್ಟರು ಚುಕ್ಕಿ?….’ ಎಂಬ ಕನ್ನಡ ಸಿನಿಮಾ ಹಾಡು ನೆನಪಾಯಿತೇ ನಿಮಗೆ?