ನನ್ನ ತಂಗಿ ಅರಳು ಹುರಿದ ಹಾಗೆ ಚಟಪಟ ಅಂತ ಮಾತಾಡ್ತಾಳಪ್ಪ, ಮಗು ಪಿಳಿಪಳಿ ಕಣ್ ಬಿಟ್ಕೊಂಡು ನೋಡ್ತಿತ್ತು, ಸರ್ರನೆ ಹೋಗಿ ಭರ್ರನೆ ಬರ್ತೀನಿ, ನೀರು ಝುಳುಝುಳು ಹರೀತಿದೆ ನೋಡಿ, ಢಣ ಢಣ ಗಂಟೆ ಬಾರಿಸಿತು…
ಹೀಗೆ ಅನುಕರಣ ಶಬ್ದಗಳನ್ನು ಬಳಸಿರುವ ವಾಕ್ಯಗಳನ್ನು ಆಗಾಗ ನಾವು ಹೇಳುತ್ತಲೂ ಕೇಳುತ್ತಲೂ ಇರುತ್ತೇವಲ್ಲವೇ? ಈ ಅನುಕರಣ ಶಬ್ದಗಳನ್ನು ವ್ಯಾಕರಣ ಪಂಡಿತರು ಅರ್ಥ ಇಲ್ಲದ ಆದರೆ ಒಂದು ಕ್ರಿಯೆಯ ಸದ್ದನ್ನು ಅನುಕರಿಸುವ ಪದಗಳು ಅನ್ನುತ್ತಾರೆ. ಅನುಕರಣಾವ್ಯಯಗಳು ಎಂದು ಒಂದು ವಿಭಾಗವೇ ಇರುತ್ತೆ ವ್ಯಾಕರಣ ಗ್ರಂಥಗಳಲ್ಲಿ.
ನಿಜ. ಒಪ್ಪೋಣ, ಅನುಕರಣ ಶಬ್ದಗಳಿಗೆ ಅರ್ಥ ಇರುವುದಿಲ್ಲ. ಆದರೆ ತಲುಪಿಸಬೇಕಾದ ಭಾವವನ್ನು ಅವು ಎಷ್ಟು ಚೆನ್ನಾಗಿ ತಲುಪಿಸುತ್ತವೆ ಎಂದರೆ ಆಶ್ಚರ್ಯವಾಗುತ್ತದೆ. ಉದಾಹರಣೆಗೆ ‘ನನ್ನೆದೆ ಢವಢವ ಅಂತಾ ಇದೆ’ ಎನ್ನುವ ಒಂದು ಪುಟ್ಟ ವಾಕ್ಯವು ಹತ್ತು ಪುಟಗಳ ಪ್ರಬಂಧವು ತಲುಪಿಸುವ ಭಾವವನ್ನು ಸಲೀಸಾಗಿ ತಲುಪಿಸಿಬಿಡಬಹುದು. ದಿವಂಗತ ಕವಿ ಶ್ರೀ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ‘ ಹಕ್ಕಿ ಚಿಲಿಪಿಲಿ ಗಿಲಕಿ ಗಿಲಿಗಿಲಿ’ ಎಂಬ ತಮ್ಮ ಒಂದು ಶಿಶುಗೀತೆಯಲ್ಲಿ ಕೇವಲ ಅನುಕರಣ ಅವ್ಯಯಗಳನ್ನು ತುಂಬ ಸಮರ್ಥವಾಗಿ ಬಳಸಿ ಅಷ್ಟರಿಂದಲೇ ಇಡೀ ಪದ್ಯ ಬರೆದು ಅಚ್ಚರಿ ಹುಟ್ಟಿಸಿದ್ದಾರೆ. ಯಶವಂತ ಚಿತ್ತಾಲರಂತಹ ಪ್ರತಿಭಾವಂತ ಲೇಖಕರು ತಮ್ಮ ಸೂಕ್ಷ್ಮ ಗಮನಿಕೆಯಿಂದ ಹೊಸ ಹೊಸ ಅನುಕರಣ ಪದಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಅನುಕರಣ ಪದಗಳ ಪ್ರಪಂಚ ತುಂಬ ಸ್ವಾರಸ್ಯಕರವಾದುದು. ಸರಿ, ಈಗ ರಾತ್ರಿ ಹತ್ತು ಗಂಟೆ! ನಾನೀಗ ಸರಸರ ಅಂತ ಈ ಕನ್ನಡ ಪ್ರಸಂಗ ಬರೆದು ಮುಗಿಸಿ, ಪಟಪಟ ಅಂತ ಎಲ್ಲ ಎತ್ತಿಟ್ಟು, ಉಶ್ಯಪ್ಪ ಅಂತ ನಿದ್ದೆ ಮಾಡಲಾ?
Like us!
Follow us!