ಇತ್ತೀಚೆಗೆ ನಡೆದ ಒಂದು ಸಮಾರಂಭವೊಂದರಲ್ಲಿ ನಿರೂಪಕರು ‘ಬಂದಿರುವ ಮಾನ್ಯ ಅಭ್ಯಾಗತರನ್ನು ವೇದಿಕೆಗೆ ಸ್ವಾಗತಿಸುತ್ತೇನೆ’ ಅಂದರು. ಇಷ್ಟೇ ಅಲ್ಲದೆ ‘ ‘ಇಂದು ಅಭ್ಯಾಗತರಾಗಿ ಆಗಮಿಸಿರುವ’, ‘ ಅಭ್ಯಾಗತರು ಆಗಮಿಸಿರುವ ಸಂತೋಷಮಯ ಕ್ಷಣದಲ್ಲಿ’…..ಇಂತಹ ಪದಪುಂಜಗಳನ್ನು ಆ ನಿರೂಪಕರು ಮತ್ತೆ ಮತ್ತೆ ಬಳಸಿದರು. ಆಗ ನನಗೆ ಅತಿಥಿ ಮತ್ತು ಅಭ್ಯಾಗತ ಪದಗಳಿಗಿರುವ ವ್ಯತ್ಯಾಸ ಆ ನಿರೂಪಕರಿಗೆ ಗೊತ್ತಿಲ್ಲ ಅನ್ನಿಸಿತು.
ಆಮಂತ್ರಣವನ್ನು ಪಡೆದು ಬಂದ ವ್ಯಕ್ತಿಯನ್ನು ಅತಿಥಿ ಎಂದು ಆಮಂತ್ರಣವನ್ನು ಪಡೆಯದೆ ಬಂದ ವ್ಯಕ್ತಿಯನ್ನು ಅಭ್ಯಾಗತ ಎಂದು ಅರ್ಥೈಸುವುದು ವಾಡಿಕೆ. ಹೀಗಾಗಿ ವಿಶೇಷವಾಗಿ ಆಮಂತ್ರಣ ಕೊಟ್ಟು ಮಾನ್ಯತೆ ನೀಡಿ ‘ಮುಖ್ಯ ಅತಿಥಿ’ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿ, ಅವರನ್ನು ವೇದಿಕೆಗೆ ಕರೆಯುವಾಗ ಅಭ್ಯಾಗತರು ಎಂದು ಹೇಳಿದರೆ ಅವರು ಆಮಂತ್ರಣ ಇಲ್ಲದೆ ಬಂದವರು ಎಂದು ಹೇಳಿದಂತಾಗುತ್ತದೆ! ಹೀಗಾಗಿ ನಿರೂಪಕರು ಅಥವಾ ಈ ಪದಗಳನ್ನು ಯಾವುದೇ ಸಂದರ್ಭದಲ್ಲಿ ಬಳಸುವವರು ಸರಿಯಾದ ಅರ್ಥದಲ್ಲಿ ಬಳಸಬೇಕು.
ನಾವು ಮಾತಾಡುವ ಅಥವಾ ಬರೆಯುವ ಪ್ರತಿ ಪದಕ್ಕೂ ಇರುವ ಅರ್ಥವನ್ನು ತಿಳಿದೇ ಬಳಸುತ್ತೇವೆ ಎಂಬ ಸಂಕಲ್ಪ ಮಾಡಿಕೊಂಡರೆ ಬಹುಶಃ ಇಂತಹ ತಪ್ಪುಗಳು ಆಗಲಾರವು ಅನ್ನಿಸುತ್ತೆ.