ಇಂಟರ್ನಲ್ ರೆಜಿಸ್ಟೆನ್ಸ್ – ಆಂತರಿಕ ಪ್ರತಿರೋಧ – ವಿದ್ಯುಚ್ಛಕ್ತಿಯ ಆಕರವೊಂದರಲ್ಲಿರುವ ಪ್ರತಿರೋಧ.
ಇಂಟರ್ ಮೀಡಿಯೆಟ್ ರಿಯಾಕ್ಟರ್ – ಮಧ್ಯಮಗತಿಯ ಅಣುಸ್ಥಾವರ – ಇದೊಂದು ವಿಶೇಷ ರೀತಿಯ ಅಣುಸ್ಥಾವರ. ಇದರಲ್ಲಿ ಬೀಜಕೇಂದ್ರದ ಸರಣಿಕ್ರಿಯೆಯನ್ನು ಮಧ್ಯಮಗತಿಯ ನ್ಯೂಟ್ರಾನುಗಳು ನಿರ್ವಹಿಸುತ್ತಿರುತ್ತವೆ.
ಇಂಟರ್ ಮೀಡಿಯೆಟ್ ನ್ಯೂಟ್ರಾನ್ಸ್ – 100 eV ಯಿಂದ 10000 eV ವರೆಗಿನ ಶಕ್ತಿಯನ್ನು ಹೊಂದಿರುವ ನ್ಯೂಟ್ರಾನುಗಳು.
ಇಂಟರ್ನಲ್ ಎನರ್ಜಿ : ಸಿಂಬಲ್ U – ಆಂತರಿಕ ಶಕ್ತಿ (ಸಂಕೇತ U) – ಒಂದು ವ್ಯವಸ್ಥೆಯಲ್ಲಿನ ಅಣುಗಳು ಹಾಗೂ ಪರಮಾಣುಗಳ ಚಲನಾ ಶಕ್ತಿ ಮತ್ತು ಅಂತಃಶಕ್ತಿಗಳ ಒಟ್ಟು ಮೊತ್ತ.
ಇಂಟರ್ನಲ್ ಕಂಬಶ್ಚನ್ ಇಂಜಿನ್ – ಆಂತರಿಕ ದಹನ ಯಂತ್ರ – ಉಗಿ ಯಂತ್ರಗಳಲ್ಲಿರುವಂತೆ ಪ್ರತ್ಯೇಕ ಕುಲುಮೆಯಿಲ್ಲದೆ, ಇಂಧನವನ್ನು ತನ್ನಲ್ಲಿಯೇ ಇರುವ ದಹನ ಘಟಕಗಳಲ್ಲಿ ಉರಿಸುವಂತಹ ಒಂದು ತಾಪಯಂತ್ರ.
ಇಂಟರ್ ಮಾಲಿಕ್ಯುಲಾರ್ ಫೋರ್ಸಸ್ – ಅಂತರ್ ಅಣುವಿಕ ಬಲಗಳು – ಅಣುಗಳು ಮತ್ರು ಪರಮಾಣುಗಳ ನಡುವಿನ ಬಲಗಳು. ಇವು ಆಕರ್ಷಣೆಯ ಬಲಗಳಾಗಿರುತ್ತವೆ.
ಇಂಟರ್ ಫೆರ್ರೋಮೀಟರ್ – ಅಲೆ ಹಾಯುವಿಕೆಯ ಮಾಪಕ – ಬೆಳಕಿನ ತರಂಗಾಂತರ, ವರ್ಣಪಟಲದ ಗೆರೆಗಳ ಅತಿಸೂಕ್ಷ್ಮ ರಚನೆಗಳು, ಬೇರೆ ಬೇರೆ ವಸ್ತುಗಳ ವಕ್ರೀಭವನ ಸೂಚ್ಯಂಕಗಳು ….ಈ ಮುಂತಾದ ಇನ್ನೂ ಹಲವು ಸಂಗತಿಗಳನ್ನು ನಿಖರವಾಗಿ ಅಳೆಯಲು ಬಳಸುವ ದೃಶ್ಯೋಪಕರಣ.
ಇಂಟರ್ಫೆರೆನ್ಸ್ – ಅಡ್ಡ ಹಾಯುವಿಕೆ – ಒಂದು ಅಲೆಯ ಮೇಲೆ ಇನ್ನೊಂದು ಅಲೆಯು ಹಾಯ್ದಾಗ ಉಂಟಾಗುವ ಪರಿಣಾಮ.