ಗ್ಯಾಲ್ವಾನಿಕ್ ಸೆಲ್ ಆರ್ ವೋಲ್ಟಾಯಿಕ್ ಸೆಲ್ – ಗ್ಯಾಲ್ವನಿ ವಿದ್ಯುತ್ ಕೋಶ ಅಥವಾ ವೋಲ್ಟಾ ವಿದ್ಯುತ್ ಕೋಶ – ಇದು ಒಂದು ಆದಿಮ ವಿದ್ಯುತ್ ವಿಭಜಕ ಕೋಶ. ಇದರಲ್ಲಿ ಎರಡು ಬೇರೆ ಬೇರೆ ಲೋಹದ ಹಾಳೆಗಳನ್ನು ಒಂದು ವಿದ್ಯುತ್ ವಿಭಜಕ ದ್ರಾವಣದಲ್ಲಿ ಮುಳುಗಿಸಿ ಇಟ್ಟಿರುತ್ತಾರೆ.
ಗೆಲೆಲಿಯನ್ ಟೆಲಿಸ್ಕೋಪ್ – ಗೆಲೆಲಿಯವರ ದೂರದರ್ಶಕ – ನೇರ ಬಿಂಬವನ್ನು ಉಂಟುಮಾಡುವ, ಬೇರೆ ಬೇರೆ ಸಂಗಮದೂರಗಳನ್ನು ಹೊಂದಿರುವ ಎರಡು ಮಸೂರಗಳನ್ನು ಹೊಂದಿರುವ, ಗೆಲಿಲಿಯೋ ಗೆಲಿಲಿ ಎಂಬ ವಿಜ್ಞಾನಿಯು ಕಂಡುಹಿಡಿದಿರುವ ದೂರದರ್ಶಕ ಇದು.
ಗೆಲಿಲಿಯನ್ ಇನ್ವೇರಿಯನ್ಸ್ – ಗೆಲಿಲಿಯವರ ನಿತ್ಯಸತ್ಯ ಸಿದ್ಧಾಂತ - ಒಂದು ಇನ್ನೊಂದಕ್ಕೆ ಸಂಬಂಧಿಸಿದಂತೆ, ಏಕರೂಪವಾದ ವೇಗದಲ್ಲಿ ಚಲಿಸುತ್ತಿರುವ ಎರಡು ವಸ್ತುಗಳ ಮಟ್ಟಿಗಿನ ಭೌತಶಾಸ್ತ್ರದ ನಿಯಮಗಳು ಎಲ್ಲಾ ಪರಾಮರ್ಶನ ವ್ಯವಸ್ಥೆಗಳಲ್ಲೂ ಒಂದೇ ಆಗಿರುತ್ತವೆ, ಬದಲಾಗುವುದಿಲ್ಲ.
ಗ್ಯಾಲಕ್ಸಿ – ಆಕಾಶಗಂಗೆ – ನಕ್ಷತ್ರಗಳು, ಧೂಳು ಮತ್ತು ಅನಿಲಗಳ ಒಂದು ಬೃಹತ್ ಮೊತ್ತವಿದು. ಇವೆಲ್ಲವೂ ತಮ್ಮಲ್ಲಿನ ಪರಸ್ಪರ ಗುರುತ್ವಾಕರ್ಷಣ ಬಲದಿಂದಾಗಿ ಒಟ್ಟಿಗೆ ಇರುತ್ತವೆ.
ಗೈನ್ – ಲಾಭ – ಬಲವರ್ಧಕವೊಂದರಲ್ಲಿ ಒಳಹಾಕುವ ವಿದ್ಯುತ್ತಿಗೂ ಹೊರಬರುವ ವಿದ್ಯುತ್ತಿಗೂ ಇರುವ ಅನುಪಾತ.
ಫ್ಯೂಷನ್ ರಿಯಾಕ್ಟರ್ – ಸಂಯೋಗ ಪರಮಾಣು ಸ್ಥಾವರ – ಬೀಜಕೇಂದ್ರಗಳ ಸಂಯೋಗದಿಂದ ಉಂಟಾಗುವ ಉಷ್ಣತೆ/ಶಕ್ತಿಯನ್ನು ಉತ್ಪಾದಿಸುವ ಉಪಕರಣಗಳು. ಈ ಶಕ್ತಿಯನ್ನು ಬಳಸಿ ವಿದ್ಯುಚ್ಛಕ್ತಿಯನ್ನು ತಯಾರಿಸುತ್ತಾರೆ.
ಪ್ಯೂಷನ್ – ಬೆರೆಯುವಿಕೆ (ಸಂಯೋಗ) – ಎರಡು ಪರಮಾಣು ಬೀಜಕೇಂದ್ರಗಳು ಸಂಯೋಗಗೊಂಡು ಒಂದು ದೊಡ್ಡ ಬೀಜಕೇಂದ್ರವಾಗುವುದು.
ಫ್ಯೂಸಿಬಲ್ ಅಲ್ಲೋಯ್ಸ್ – ಕರಗುವ ಮಿಶ್ರಲೋಹಗಳು – ಕಡಿಮೆ ಉಷ್ಣತೆ ( ಸುಮಾರು ನೂರು ಡಿಗ್ರಿ ಸೆಂಟಿಗ್ರೇಡ್) ಯಲ್ಲಿ ಕರಗುವ ಮಿಶ್ರಲೋಹಗಳು. ಬೆಂಕಿ ಆರಿಸುವ ಕೊಳವೆಗಳು ಮುಂತಾದ ಅನೇಕ ವಸ್ತುಗಳ ತಯಾರಿಕೆಯಲ್ಲಿ ಇವನ್ನು ಉಪಯೋಗಿಸುತ್ತಾರೆ. ಬಿಸ್ಮತ್, ತವರ, ಸೀಸ ಮತ್ತು ಕ್ಯಾಡ್ಮಿಯಂಗಳ ‘ಉತ್ತಮ ಕರಗು ಮಿಶ್ರಣ’ದಿಂದ ಸಾಮಾನ್ಯವಾಗಿ ಇವನ್ನು ತಯಾರಿಸಲಾಗುತ್ತದೆ.