ಮೊನ್ನೆ ದಿನ, ಎಂದಿನಂತೆ ನನ್ನ ದ್ವಿಚಕ್ರಿಣಿಯಲ್ಲಿ( ಹೊಂಡಾ ಆಕ್ಟಿವಾ ಸ್ಕೂಟರು) ನಾನು ಕಾಲೇಜಿಗೆ ಹೋಗುತ್ತಿದ್ದಾಗ, ರಾಜಾಜಿನಗರ ಪ್ರವೇಶಸ್ಥಳದಲ್ಲಿ ( ಎಂಟ್ರೆನ್ಸ್) ರಸ್ತೆಗಳು  ಕೂಡುವ ಬಿಂದುವಿನಲ್ಲಿ ಸಂಚಾರದೀಪ ಕೆಂಪಾಯಿತು. ಸರಿ, ಗಾಡಿ ನಿಲ್ಲಿಸಿ, ಆ ದೀಪ ಹಸಿರಾಗಲು ಕಾಯುತ್ತಿದ್ದೆ. ಆಗ ನನ್ನ ಮುಂದೆ ನಿಂತಿದ್ದ ಆಟೋರಿಕ್ಷಾ ಒಂದರ ಹಿಂದೆ ಬರೆದಿದ್ದ ಬರಹವೊಂದು ನನ್ನ ಗಮನ ಸೆಳೆಯಿತು. 

“ಹೇಳಿ ಮಾಡಿಸಿದ ಜೋಡಿ ಅನ್ನುವುದು ಸಿಗುವುದು ಚಪ್ಪಲಿಯ ವಿಷಯದಲ್ಲಿ ಮಾತ್ರ, ಇನ್ನೆಲ್ಲ‌ ಹೊಂದಾಣಿಕೆ” ಎಂಬ ಸಾಲು ಅದು! ಅಬ್ಬ ಅನ್ನಿಸಿತು‌. ಬದುಕಿನ ಒಂದು ರುದ್ರವಾಸ್ತವವನ್ನು ಎಷ್ಟು ಸರಳವಾಗಿ ಹೇಳಿದೆಯಲ್ಲ ಈ ಚಿಂತನೆ ಎಂಬ ಭಾವ ನನ್ನನ್ನು ಆವರಿಸಿತು. 

ಹೌದು, ಮದುವೆಗಳಲ್ಲಿ ವಧು-ವರರ ಎತ್ತರ, ಗಾತ್ರ, ಉದ್ಯೋಗ ಇತ್ಯಾದಿ ಬಾಹ್ಯ ಸಂಗತಿಗಳು ತುಂಬ ಹೊಂದುತ್ತಿದ್ದರೆ ಜನ ‘ನೋಡಿ, ಹೇಳಿ ಮಾಡಿಸಿದ ಜೋಡಿ, ಎಷ್ಟು ಚೆನ್ನಾಗಿದೆ’ ಎಂದು ಉದ್ಗರಿಸುತ್ತಾರೆ. ಆದರೆ ನಿಜ ಜೀವನದ ಮದುವೆಯಲ್ಲಿ ಎತ್ತರ, ಗಾತ್ರಗಳಿಗಿಂದ ಮುಖ್ಯವಾದುವೆಂದರೆ ಹೊಂದಾಣಿಕೆ, ರಾಜಿ – ಈ ಗುಣಗಳು.‌ ಇವಿಲ್ಲದೆ ದೀರ್ಘಾವಧಿ ಬಾಳಿದ ಮದುವೆಗಳು ಎಲ್ಲಿವೆ ಪ್ರೇಮವಿವಾಹಗಳೂ ಇದಕ್ಕೆ ಹೊರತಲ್ಲ ಬಿಡಿ. 

ಒಂದು ಮಟ್ಟದ ಬಿಟ್ಟುಕೊಡುವಿಕೆ ಮತ್ತು, ಸಂಗಾತಿಯ ತಪ್ಪುಗಳಿಗೆ ಕಣ್ಣು ಮುಚ್ಚಿಕೊಳ್ಳುವ ಗುಣ ಇಲ್ಲದಿದ್ದರೆ ಮದುವೆಗಳು ಮುರಿಯಲು ಬಹಳ‌ ದಿನ ಬೇಡ. ನಮ್ಮ ಮನೆಗಳಲ್ಲಿ ಗಂಡ, ಹೆಂಡತಿ, ಮಕ್ಕಳು, ಅತ್ತೆ, ಮಾವ…ಇನ್ನು ಉದ್ಯೋಗ ಸ್ಥಳದಲ್ಲಿ ನಮ್ಮ ಕೆಲಸದ ತಂಡಸದಸ್ಯರು ಇವರೆಲ್ಲರೂ ಪರಸ್ಪರರಿಗೆ ಹೇಳಿ ಮಾಡಿಸಿದಂತೆ ಇರುತ್ತಾರೇನು? ಅಥವಾ ನಮ್ಮ ಬಗ್ಗೆಯಾದರೂ ಅವರಲ್ಲಿ ‘ಇವರು ನನಗೆ ಹೇಳಿ ಮಾಡಿಸಿದಂತೆ ಇದ್ದಾರಪ್ಪ’ ಎಂಬ ಭಾವನೆ ಬರುತ್ತದೇನು? ನೂರಕ್ಕೆ ತೊಂಬತ್ತೊಂಬತ್ತು ಸಲ ಇದಕ್ಕೆ ಸಿಗುವ ಉತ್ತರ ‘ಇಲ್ಲ’ ಎಂಬುದು. 

ನನಗೆ ಅಚ್ಚರಿ‌ ತಂದ ಅಂಶ ಅಂದರೆ ಈ ಸಾಲು ನನಗೆ ಓದಲು ಸಿಕ್ಕಿದ್ದು ಜೀವನ ವಿವೇಕವನ್ನು ಕುರಿತ ಒಂದು ಉದ್ಗ್ರಂಥದಲ್ಲಿ ಅಲ್ಲ, ನಮ್ಮೂರಿನ ಒಂದು ಆಟೋರಿಕ್ಷಾದ ಹಿಂಭಾಗದಲ್ಲಿ. ಜೈ ಕನ್ನಡ ನಾಡು!