ಈಚೆಗೆ  ಒಂದು ಸಲ ನಮ್ಮನೆಯಲ್ಲಿ ಅನ್ನ ಮಾಡಲಿಕ್ಕಾಗಿ ಕುಕ್ಕರ್ ಇಟ್ಟು ಕೂಗಿಸಿ, ಅದು ಆರಿದ ಮೇಲೆ ಮುಚ್ಚಳ ತೆಗೆದಾಗ ನಡೆದ ಪ್ರಸಂಗ ಇದು‌.‌ ಆಗ ಅಡಿಗೆಮನೆಯಲ್ಲಿ ನಾನು, ಯಲ್ಲಮ್ಮ (ನನ್ನ ಮನೆವಾಳ್ತೆ ಸಹಾಯಕಿ) ಇಬ್ಬರೂ ಇದ್ದೆವು‌. ಕುಕ್ಕರ್ ಮುಚ್ಚಳ ತೆಗೆದು ಅನ್ನ ಸರಿಯಾಗಿದೆಯೇ ಎಂದು ಗಮನಿಸಿದಾಗ ಅದು ಗಟ್ಟಿ ಗಟ್ಟಿಯಾಗಿಯೇ ಇತ್ತು, ಅಕ್ಕಿ ಕಾಳುಗಳು ಅರಳದೆ ಇನ್ನೂ ಬಿರುಸಾಗಿಯೇ ಇದ್ದವು‌. ಬಹುಶಃ ನೀರಿಟ್ಟಿದ್ದು ಕಡಿಮೆ ಆಯಿತೋ ಏನೋ. ಆ ಗಟ್ಟಿ ಗಟ್ಟಿ ಅಗುಳುಗಳನ್ನು ಯಲ್ಲಮ್ಮನೂ ಗಮನಿಸಿ ”ಅಯ್ಯೋ…. ಅನ್ನ ಮುಳ್ಳಕ್ಕಿ ಆಗ್ಹೋಯ್ತು ಅಮ್ಮ” ಅಂದ್ರು. ಹಾಂ! ಮುಳ್ಳಕ್ಕಿ!? ಈ ಪದವನ್ನು ನಾನೆಂದೂ ಕೇಳಿರಲಿಲ್ಲ. ಬಹುಶಃ ಹಳೆ ಮೈಸೂರು, ತುಮಕೂರು ಭಾಗದಲ್ಲಿ ಈ ಪದದ ಬಳಕೆ ಇರಬಹುದು. 

ಬಹುಶಃ ಅಕ್ಕಿಯು ಅರ್ಧಂಬರ್ಧ ಬೆಂದು ಅನ್ನ ತಿನ್ನುವಾಗ ಗಟ್ಟಿ ಗಟ್ಟಿ ಅನ್ನಿಸಿ, ಅಗಿಯಲು ಕಷ್ಟವಾಗಿ ಅದು ಬಾಯಿಗೆ ಚುಚ್ಚುವ ಭಾವನೆ ಬಂದಾಗ ನಮ್ಮ‌ ಪೂರ್ವಜರು ಈ ಪದವನ್ನು ರಚಿಸಿಕೊಂಡು ಚಲಾವಣೆಗೆ ತಂದಿರಬಹುದು‌. ಎಷ್ಟು ಚಿತ್ರಕವಾಗಿದೆ ಈ ಪದ ಎಂದು ಯೋಚಿಸದೆ ಇರಲಾಗಲಿಲ್ಲ ನನಗೆ. ನಮ್ಮ ಜನಪದ ಸಮುದಾಯದ ಪದನಿರ್ಮಿತಿಯ ಬಗ್ಗೆ ಒಮ್ಮೆ ತಲೆದೂಗಿದೆ ನಾನು. ಅಂತೂ ಸರಿಯಾದ ಬೇಯದ ಅಕ್ಕಿಯ ದೆಸೆಯಿಂದ ಒಂದು ಹೊಸ ಪದ ಕಲಿತಂತಾಯಿತು ನೋಡಿ.