ಯೂಸ್ ಇಟ್ ಆರ್ ಲೂಸ್ ಇಟ್ – ಜೀವಿಗಳು ತಮ್ಮ ದೇಹದ ಅಂಗಗಳನ್ನು ದೀರ್ಘ ಕಾಲ ಬಳಸದೆ ಹೋದರೆ  ಆ ಜೀವಿಗಳ ಮುಂದಿನ ಪೀಳಿಗೆಗಳು ಆ ಅಂಗವನ್ನು ಕಳೆದುಕೊಳ್ಳುತ್ತವೆ ಎಂಬುದು ಜೀವಶಾಸ್ತ್ರದ ನಿಯಮ. ‌ಒಬ್ಬ ಕನ್ನಡ  ಭಾಷಾ ಅಧ್ಯಾಪಕಿಯಾಗಿ ನನಗೆ ಈ‌ ನಿಯಮವು ಕನ್ನಡ ಭಾಷೆಯ ಪದಗಳಿಗೂ ಅನ್ವಯಿಸುತ್ತದೆ ಅನ್ನಿಸುತ್ತದೆ. ‌ಸೊಗಸು, ಅವ್ಸರ, ಸಾಂಗ, ಫಜೀತಿ, ಪಿಚ್ಚೆನ್ನಿಸು, ವರ್ತ್ನೆ, ಶಾಮೀಲು, ಧಾರಾಳ, ನಿಧಾನಸ್ಥ, ತಿಂದೂ ಉಂಡೂ, ಕಂಡಿದಾರೆ ಕಂಡಿದಾರೆ, ಚಳುಕು, ಕುಸುಬಿಷ್ಟೆ, ರಾಜಾರೋಷವಾಗಿ, ದಂಡಿಯಾಗಿ, ಮಾರಾಯ್ರಾಗಿ…….ನಮ್ಮ ತಾತ, ಅಜ್ಜಿಯ ಕಾಲದಲ್ಲಿ ಹಾಗೂ ಹಳೆಯ ಸಿನಿಮಾಗಳಲ್ಲಿ ಇಂತಹ ಅನೇಕ ಕನ್ನಡ ಪದಗಳನ್ನು ನಾವು ಕೇಳುತ್ತಿದ್ದೆವು. ಈಗ ಇಂತಹ ಪದಗಳನ್ನು ಬಳಸುವವರನ್ನು ಕಾಣುವುದು ತುಂಬ ಕಡಿಮೆಯಾಗುತ್ತಿದೆ.‌ ಕಥೆ, ಕಾದಂಬರಿಗಳಲ್ಲಿ ಒಂದು‌ ಕಾಲದಲ್ಲಿ ಬಹಳವಾಗಿ ಬಳಕೆಯಾಗುತ್ತಿದ್ದ ಇಂತಹ ಪದಗಳು ಈಗ ಕೇಳಸಿಗುವುದೂ ಕಷ್ಟ. 

ಜೀವಂತ ಭಾಷೆಯೊಂದದರಲ್ಲಿ ಕೆಲವು ಹಳೆಯ ಪದಗಳು ಮರೆಯಾಗುತ್ತಾ ಇನ್ನು ಕೆಲವು ಹೊಸ ಪದಗಳು ಸೇರುತ್ತಾ ಹೋಗುವುದು ಸಹಜ ಎಂಬುದು ಭಾಷಾಶಾಸ್ತ್ರಜ್ಞರ ಅಭಿಪ್ರಾಯ. ‌ಇದು ಒಪ್ಪತಕ್ಕ ಮಾತೇ ಆದರೂ ಓದಿನ ಅಥವಾ ಕೇಳ್ಮೆಯ ಕೊರತೆಯಿಂದಾಗಿ ನಮ್ಮ ನುಡಿಗಡಣವು ಕುಗ್ಗುತ್ತಾ ಹೋಗುವುದು ಸಂತೋಷದ ಸಂಗತಿಯೇನಲ್ಲ. ನಮ್ಮ ಮಕ್ಕಳು ಮತ್ತು‌ ಯುವಜನರನ್ನು ನಾನಾ ರೀತಿಯ ಕನ್ನಡಗಳಿಗೆ ಮತ್ತು ಶ್ರೀಮಂತ-ವಿಪುಲ ಕನ್ನಡ ಪದರಾಶಿಗೆ ತೆರೆದುಕೊಳ್ಳುವಂತೆ ಮಾಡುವುದೇ ಇದಕ್ಕೆ ಪರಿಹಾರ.‌ ಈ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಎಲ್ಲ‌ ಹಂತಗಳ ಕನ್ನಡ ಅಧ್ಯಾಪಕರು, ಕನ್ನಡ ಸಾಹಿತ್ಯ ಹಾಗೂ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಗಮನ ವಹಿಸುವ ಅಗತ್ಯ ಇದೆ ಅನ್ನಿಸುತ್ತದೆ.‌ ಅಮೆರಿಕಾದ ಸ್ಪೆಲ್ಲಿಂಗ್ ಬೀ ತರಹದ ಪ್ರತಿಷ್ಠಿತ ಪದ ಸ್ಪರ್ಧೆಗಳನ್ನು ಕನ್ನಡದಲ್ಲೂ ಮಾಡಲು ನಾವು ಆಲೋಚಿಸಬಹುದಲ್ಲವೇ?