ಭಾವಗೀತೆಗಳು ಅಂದರೆ ಕನ್ನಡಿಗರೆಲ್ಲರೂ ” ಹಾಂ ಗೊತ್ತು” ಅನ್ನುತ್ತಾರೆ. ಆದರೆ ಭಾವನೃತ್ಯ ಎಂಬುದು ಹೆಚ್ಚು ಜನರು ಬಳಸುವ ಪದ ಅಲ್ಲ.
ಭಾವಗೀತೆಯೊಂದಕ್ಕೆ ನಾಟ್ಯ ಸಂಯೋಜನೆ ಮಾಡಿದರೆ ಅದು ಭಾವನೃತ್ಯ. ಭರತನಾಟ್ಯ, ಸಮಕಾಲೀನ ನೃತ್ಯ, ಜಾನಪದ ನೃತ್ಯ ಯಾವುದೇ ಆಗಬಹುದು ; ಭಾವವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ಭಾವನೃತ್ಯವು ಪರಿಣಾಮಕಾರಿಯಾಗಿ ಮಾಡುತ್ತದೆ. ಕುವೆಂಪು, ಬೇಂದ್ರೆ, ಪುತಿನ, ಕೆಎಸ್ ನ, ಹೆಚ್.ಎಸ್.ವಿ., ಜಿ.ಎಸ್.ಶಿವರುದ್ರಪ್ಪ ….ಇಂತಹ ಕವಿಗಳ ರಚನೆಗಳು ಭಾವನೃತ್ಯಕ್ಕೆ ಬಹುವಾಗಿ ಒಪ್ಪುತ್ತವೆ. ಉದಾಹರಣೆಗೆ ಕುವೆಂಪು ಅವರ ‘ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ’ ಗೀತೆ. ಬಹು ವರ್ಣಮಯವಾಗಿ, ಸುಂದರವಾಗಿ ಇದನ್ನು ನಾಟ್ಯದಲ್ಲಿ ಪ್ರಸ್ತುತ ಪಡಿಸಬಹುದು. ನಿಸಾರ್ ಅಹಮದ್ ಅವರ ‘ಬೆಣ್ಣೆ ಕದ್ದ ನಮ್ಮ ಕೃಷ್ಣ’, ಕೆ ಎಸ್ ನ ಅವರ ‘ಕರ್ನಾಟಕ ಗೀತೆ’, ಬೇಂದ್ರೆಯವರ ‘ಶ್ರಾವಣ ಬಂತು’ ಭಾವಗೀತೆ, ಮತ್ತು ಡಿವಿಜಿಯವರ ಅಂತಃಪುರ ಗೀತೆಗಳಂತೂ ಈ ವಿಷಯದಲ್ಲಿ ಅದ್ಭುತ ಸಾಧ್ಯತೆಗಳನ್ನು ತೆರೆಯುತ್ತವೆ. ಕನ್ನಡ ಸಾಹಿತ್ಯವನ್ನು ಜನರ ಬಳಿ ಕೊಂಡೊಯ್ಯುವಲ್ಲಿ ಭಾವಗೀತೆಗಳಂತೆಯೇ ಭಾವನೃತ್ಯಗಳೂ ಸಹ ಸೇತುವೆಯಾಗಿ ಕೆಲಸ ಮಾಡಬಲ್ಲವು.