ಈ ಸಲದ ಕನ್ನಡ ಪ್ರಸಂಗದಲ್ಲಿ ಆಗೀಗ ನನ್ನ ಕಿವಿಗೆ ಬಿದ್ದು ತುಂಬ ಗೊಂದಲ ಉಂಟು ಮಾಡ್ತಿದ್ದ ಒಂದು ಪದದ ಬಗ್ಗೆ ಬರೀತಿದೀನಿ. ಅದ್ಯಾವುದೆಂದರೆ ‘ಚಾಚಾ’ ಅನ್ನುವ ಪದ. ‘ಅವ್ರೇನು ದೊಡ್ಡ ಚಾಚಾ ಅಲ್ಲ’, ‘ನಂಗೊತ್ತಿಲ್ವಾ! ತೋರಿಸಿಕೊಳ್ಳಕ್ಕೆ ನಾನೇ ಒಬ್ಬ ಚಾಚಾ ಅಂತ ಆಡ್ತಾನೆ’, ‘ಮಾಡೋದೆಲ್ಲ ಮಾಡಿ ಈಗ ದೊಡ್ಡ ಚಾಚಾ ತರಹ ಆಡೋದು’…… ಹೀಗೆ ಅನೇಕ ಸಲ‌ ದೈನಂದಿನ ಮಾತಿನಲ್ಲಿ ಜನರು ಈ ಪದಗಳ ಬಳಸುವುದನ್ನು  ಕೇಳಿದ್ದೆ ನಾನು. 

ಚಾಚಾ ಅಂದರೆ ಹಿಂದಿ ಭಾಷೆಯಲ್ಲಿ ಚಿಕ್ಕಪ್ಪ ಎಂದು ಅರ್ಥ. ನಮ್ಮ ದೇಶದ ಮೊಟ್ಟ ಮೊದಲ ಪ್ರಧಾನ ಮಂತ್ರಿಯಾದ ಜವಾಹರ್ ಲಾಲ್ ನೆಹರುರನ್ನು‌ – ಮಕ್ಕಳನ್ನು ಅವರು ತುಂಬ ಇಷ್ಟ ಪಡುತ್ತಿದ್ದುದರಿಂದ – ಚಾಚಾ ನೆಹರು (ನೆಹರು ಚಿಕ್ಕಪ್ಪ) ಅನ್ನುತ್ತಿದ್ದರಲ್ಲವೆ. ಅದೇನೋ ಸರಿ.‌ ಆದರೆ ನಾನು ಉದಾಹರಿಸಿದ ಮೇಲಿನ ಮೂರು ವಾಕ್ಯಗಳಲ್ಲಿ ಚಾಚಾ ಎಂಬ ಪದವು ಚಿಕ್ಕಪ್ಪ ಎಂಬ ಅರ್ಥದಲ್ಲಿ ಬಳಕೆ ಆಗಿಲ್ಲ. ಅದು ‘ಪ್ರಾಮಾಣಿಕ’ ಅನ್ನುವ ಅರ್ಥದಲ್ಲಿ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಅಪ್ರಮಾಣಿಕರನ್ನು ಬಯ್ದುಕೊಳ್ಳುವ ಸಂದರ್ಭದಲ್ಲೇ  ನಿಷೇಧಪದವಾದ ‘ಅಲ್ಲ’ ಎಂಬ ಪದದೊಂದಿಗೆ, ಅಥವಾ ವ್ಯಂಗ್ಯವಾಗಿ ‘ ದೊಡ್ಡ ಚಾಚಾ ಇವ್ನು’ ಎಂಬ ರೀತಿಯಲ್ಲಿ ಬಳಕೆಯಾಗುತ್ತದೆ.  ಅನೌಪಚಾರಿಕ ಸಂದರ್ಭದ ಪ್ರಯೋಗಗಳಿವು. ‘ಯಾಕೆ ಹೀಗೆ ಬಳಸ್ತಾರೆ? ಚಿಕ್ಕಪ್ಪ ಎಂಬ ಪದಕ್ಕೆ ಈ ವಿಚಿತ್ರ ಉಪಯೋಗ ಹೇಗೆ ಬಂತು?’ ಎಂದು ಬಹಳ ಯೋಚಿಸುತ್ತಿದ್ದೆ. 

ಇದಕ್ಕೆ ಪರಿಹಾರ ಮೊನ್ನೆ ಸಿಕ್ಕಿತು ನೋಡಿ. ನನ್ನ ಹಿರಿ ಮಗಳು ರಶ್ಮಿ ತನ್ನ ತಂದೆಯ (ರವಿಕುಮಾರ್) ಬಳಿ ಮಾತಾಡುತ್ತಾ ತಾನು ವ್ಯವಹರಿಸಿದ್ದ ಯಾವುದೋ ಒಂದು ಸಂಸ್ಥೆಯವರನ್ನು ಕುರಿತು, ‘ಅವ್ರು ಅಂಥಾ ಸಾಚಾ ಏನಲ್ಲಪ್ಪ, ಸುಮ್ನೆ ಮೇಲೆ ತೋರಿಸ್ಕೋತಾರೆ, ಅಷ್ಟೇ’ ಅಂದಳು. ಒಳಗೊಂದು, ಹೊರಗೊಂದು ಸ್ವಭಾವ ತೋರುತ್ತಿದ್ದವರ ಬಗ್ಗೆ ಹೇಳುತ್ತಾ ಈ ಪದ  ಬಳಸಿದ್ದು ಅವಳು. ಆಗ ನನ್ನ ತಲೆಯಲ್ಲಿ ದೀಪ ಹೊತ್ತಿಕೊಂಡಿತು ನೋಡಿ! ಓಹ್, ಅದು ಚಾಚಾ ಅಲ್ಲ, ಸಾಚಾ!!! ಸಚ್ ಅಂದರೆ ಸತ್ಯ ಎಂಬ ಹಿಂದಿ ಪದದಿಂದ ಜನ್ಮಿಸಿರುವ ಪದ ಸಾಚಾ. ಸಾಚಾ ಪದವು ಬಳಸಲು ಚಾಚಾ ಪದಕ್ಕಿಂತ ತುಸು ಕಷ್ಟವಾದುದರಿಂದ, ಭಾಷಾ ಶಾಸ್ರಜ್ಞರು ಹೇಳುವ ಸುಲಭೀಕರಣ ಸಿದ್ಧಾಂತಕ್ಕೆ ಒಳಪಟ್ಟು ನಮ್ಮ ಮಂದಿ ಹೀಗೆ ಮಾಡಿದ್ದಾರೆ! ‘ನೋಡೇ ಪುಟ್ಟಿ, ನಿನ್ನಿಂದ ನಂಗೆ ಕನ್ನಡ ಪ್ರಸಂಗಕ್ಕೆ ಒಂದು ವಿಷ್ಯ ಸಿಕ್ತು’ ಅಂದೆ. ಮೆಲುನಗೆ ನಕ್ಕಳು ನನ್ನ ಮಗಳು.‌