ಶೈಕ್ಷಣಿಕ ವರ್ಷ ಪ್ರಾರಂಭ ಆದಾಗ ನಾವು ಅಧ್ಯಾಪಕರು ಹೊಸ ಹೊಸ ವಿದ್ಯಾರ್ಥಿಗಳನ್ನು ಭೇಟಿ ಮಾಡ್ತೇವೆ. ಹೊಸ ಹೊಸ ಮುಖಗಳು, ಹೊಸ ಹೊಸ ಹೆಸರುಗಳು, ಹೊಸ ಹೊಸ ಅನುಭವಗಳು.
ಹೀಗೆಯೇ ಮೊನ್ನೆ ಒಂದು ತರಗತಿಯಲ್ಲಿ ಹಾಜರಿ ಹಾಕ್ತಾ ಇದ್ದಾಗ ‘ಚಾರುಲತ’ ಎಂಬ ಹೆಸರನ್ನು ಕರೆದೆ. ಒಬ್ಬಳು ಹುಡುಗಿ ಓಗೊಟ್ಟಳು. ‘ತನ್ನ ಹೆಸರಿನ ಅರ್ಥವು ಈ ಕಿಶೋರಿಗೆ ಗೊತ್ತಿರಬಹುದೇ?’ ಎಂಬ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಮೂಡಿ, “ಚಾರುಲತ ಅಂದರೆ ಏನಮ್ಮ ಮಗು?” ಎಂದು ಅವಳನ್ನು ನಾನು ಕೇಳಿದೆ. ಆ ಪ್ರಶ್ನೆಯನ್ನು ಅವಳು ನಿರೀಕ್ಷಿಸಿರಲೆಲ್ಲವೆಂದು ತೋರುತ್ತದೆ. “ಆಂ…ಮ್ಯಾಮ್… ಅದೂ…ಅದೂ…” ಎಂದು ತುಸು ಗೊಂದಲಗೊಂಡು ನಂತರ ಏನೋ ನೆನಪಾದವಳಂತೆ ‘ಹಾಂ …ಚಾರ್…ಅದೇ ನಾಲ್ಕು ಅಂತ..ಚಾರ್…ಅಂದಳು”. ಅಯ್ಯೋ, ಚಾರು ಎಂಬ ಸಂಸ್ಕೃತ ಪದವನ್ನು ಇವಳು ಹಿಂದಿಯ ಚಾರ್ ಎಂದು ಭಾವಿಸಿದ್ದಳು!
ಚಾರು ಮೂಲತಃ ಸಂಸ್ಕೃತ ಪದ. ಸುಂದರ, ರಮಣೀಯ, ಲಾವಣ್ಯಮಯ ಎಂಬ ಅರ್ಥ ಕೊಡುವ ಪದ. ಚಾರುಲತ ಎಂದರೆ ‘ಸುಂದರವಾದ ಬಳ್ಳಿ’ ಎಂದು ಅರ್ಥ.
ಹೆಣ್ಣುಮಕ್ಕಳಿಗೆ ಚಾರು, ಚಾರುಮತಿ, ಚಾರುಲತ ಎಂದೆಲ್ಲ ಹೆಸರಿಡುತ್ತಾರೆ. ಗಂಡುಮಕ್ಕಳಿಗೆ ಚಾರುದತ್ತ ಎಂದು ಹೆಸರಿಡುತ್ತಾರೆ. ಸೌಂದರ್ಯವನ್ನು ಪಡೆದವನು ಎಂಬ ಅರ್ಥವಿದೆ, ಚಾರುದತ್ತ ಎಂಬ ಈ ಹೆಸರಿಗೆ.
‘ಚಾರುಲತ’ ಎಂಬ ಪದವು ಒಂದು ಅಸಾಧಾರಣ ಸಿನಿಮಾದ ನೆನಪನ್ನು ಸಹ ತರುತ್ತದೆ.
1964 ರಲ್ಲಿ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಗಳಿಸಿದ, ಹಾಗೂ ಸತ್ಯಜಿತ್ ರೇ ಅವರು ನಿರ್ದೇಶಿಸಿದ, ರವೀಂದ್ರ ನಾಥ್ ಠ್ಯಾಗೋರ್ ಅವರ ನಷ್ಟನಿರ್ ( ಮುರಿದ ಗೂಡು ಎಂದು ಅರ್ಥ) ಎಂಬ ಕಿರುಕಾದಂಬರಿ( 1901)
ಆಧಾರಿತ ಚಲನಚಿತ್ರವಿದು. ಅದರ ಮುಖ್ಯ ಪಾತ್ರ ಚಾರುಲತ. ತನ್ನ ಕೆಲಸದಲ್ಲಿ ಮುಳುಗಿ ಹೋದ ಗಂಡನಿಂದಾಗಿ ಒಂಟಿತನದಲ್ಲಿ ನೋಯುವ ಹೆಂಡತಿಯೊಬ್ಬಳ ಪಾತ್ರ ಇದು. ಆ ಉತ್ತಮ ಅಭಿರುಚಿಯ ಸುಂದರಿ ತೊಡುತ್ತಿದ್ದ ಸುಂದರ ಅಲಂಕಾರ ಅಂಚುಳ್ಳ ಬಂಗಾಳಿ ಶೈಲಿಯ ರವಿಕೆಯು, ರೂಪಾಲಂಕಾರ ಪ್ರಪಂಚದಲ್ಲಿ ‘ಚಾರುಲತ ಬ್ಲೌಸ್’ ಎಂದೇ ಖ್ಯಾತವಾಗಿದೆ.
ತರಗತಿಯಲ್ಲಿ ಹಾಜರಿ ಕರೆಯುವಾಗ ಇಷ್ಟೆಲ್ಲ ಹೇಳಲು ಸಾಧ್ಯ ಇರಲಿಲ್ಲ. “ನಿನ್ನ ಹೆಸರಿನ ಅರ್ಥ ಸುಂದರವಾದ ಬಳ್ಳಿ ಅಂತ. ನೆನಪಿಟ್ಟುಕೋಮ್ಮ” ಎಂದು ಮಾತ್ರ ಹೇಳಿ ಸುಮ್ಮನಾದೆ.