ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದುವ ಪದವಿ ಅಥವಾ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ತಮ್ಮ ಪಠ್ಯದ ಭಾಗವಾಗಿ ಛಂದಸ್ಸನ್ನು ಓದುತ್ತಾರೆ. ಛಂದಸ್ಸು ಎಂದರೆ ಪದ್ಯರಚನೆಯ ನಿಯಮ ಎಂದು ಅರ್ಥ. ಒಂದು ಪದ್ಯದ ಲಯ, ಗತಿ, ಓಟ, ಪ್ರಾಸ, ತಾಳಕ್ಕೆ ಸಿಗುವ ಗುಣ ಇವೆಲ್ಲವನ್ನೂ ಅಧ್ಯಯನ ಮಾಡುವುದು ಛಂದಸ್ಸಿನ ಪರಿಧಿಯಲ್ಲಿ ಸೇರುತ್ತದೆ. ಛಂದಸ್ಸು ಎಂದರೆ ಹೊದಿಸುವುದು ಎಂದೂ ಅರ್ಥವಿದೆ. ಪದಗಳಿಗೆ ಲಯದ ಹೊದಿಕೆ ತೊಡಿಸುವುದು ಅನ್ನಬಹುದೇನೋ.
ಛಂದಸ್ಸನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುವುದೆಂದರೆ ಅದು ಅಧ್ಯಾಪಕರಿಗೆ ಸವಾಲಿನ ವಿಷಯವೇ ಸರಿ. ಏಕೆಂದರೆ ಕೇವಲ ಶಾಸ್ತ್ರವಿಷಯಗಳನ್ನ ಓದಿ ಹೇಳಿಬಿಟ್ಟರೆ ಪದ್ಯದ ಲಯಗಾರಿಕೆ, ತಾಳಬದ್ಧತೆ, ಛಂದಸ್ಸು ಇವೆಲ್ಲ ಅರ್ಥವಾಗುವುದಿಲ್ಲ. ಅಧ್ಯಾಪಕರು ತಾವು ಮೊದಲು ಲಯದ ವಿಷಯವನ್ನು ತಮ್ಮ ಭಾವನೆ, ಗ್ರಹಿಕೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಅದನ್ನು ಲಯಬದ್ಧವಾಗಿ, ಕೆಲವೊಮ್ಮೆ ತಾಳ ಹಾಕಿ ಹೇಳಿ ತೋರಿಸಬೇಕಾಗುತ್ತದೆ. ಮೂರು ಮಾತ್ರೆಯ ಕಟ್ಟು, ನಾಲ್ಕು ಮಾತ್ರೆಯ ಕಟ್ಟು, ಐದು ಮಾತ್ರೆಯ ಕಟ್ಟು ಮತ್ತು ಮೂರು-ನಾಲ್ಕು ಮಾತ್ರೆಯ ಕಟ್ಟು ಇವು ಕನ್ನಡದ ಪ್ರಧಾನ ಲಯಗಳು. ಈ ಲೇಖಕಿಗೆ ಎಂ.ಎ. ವ್ಯಾಸಂಗದಲ್ಲಿ ಪಾಠ ಮಾಡುತ್ತಿದ್ದ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಛಂದಸ್ಸನ್ನು ಉತ್ಸಾಹದಿಂದ ಸಾಲುಗಳಿಗೆ ಜೀವತುಂಬಿ ಲಯಬದ್ಧವಾಗಿ ಪಾಠ ಮಾಡುತ್ತಿದ್ದದ್ದು ಸದಾ ನೆನಪಾಗುತ್ತದೆ. ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದ ಅಧ್ಯಾಪಕ ಶ್ರೀ.ಅ.ರಾ.ಮಿತ್ರ ಅವರು ಛಂದಸ್ಸನ್ನು ಲಯಬದ್ಧವಾಗಿ ಅಷ್ಟೇ ಅಲ್ಲದೆ ಆಹ್ಲಾದಕರವಾದ ಹಾಸ್ಯಮಯ ರೀತಿಯಲ್ಲಿ ಪಾಠ ಮಾಡುತ್ತಿದ್ದುದನ್ನು, ನನ್ನ ಎಂ.ಎ.ಸಹಪಾಠಿ ಹಾಗೂ ಆತ್ಮೀಯ ಗೆಳತಿ, ಕನ್ನಡ ಅಧ್ಯಾಪಕಿ ವಸುಂಧರರು ನೆನೆಯುತ್ತಾರೆ. ಹಾಗೆಯೇ ಎಂ.ಇ.ಎಸ್ ಕಾಲೇಜಿನಲ್ಲಿ ದಿವಂಗತ ಶ್ರೀ ಶ್ರೀನಿವಾಸಮೂರ್ತಿಯವರು ಸಹ ಛಂದಸ್ಸಿನ ಪಾಠವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದರೆಂದು ನನ್ನ ಇನ್ನೊಬ್ಬ ಗೆಳತಿ, ಕನ್ನಡ ಅಧ್ಯಾಪಕಿ ಶಾರದಾರು ನೆನೆಯುತ್ತಾರೆ. ಅಂದರೆ ನಮ್ಮ ಸಂಸ್ಕೃತಿ ಶ್ರೀಮಂತ ಕನ್ನಡ ನಾಡಿನಲ್ಲಿ ಇಂತಹ ಅದೆಷ್ಟು ಅಧ್ಯಾಪಕರು ನಾಡಿನ ತುಂಬ ಸಾವಿರಾರು ವಿದ್ಯಾರ್ಥಿಗಳಿಗೆ ಛಂದಸ್ಸಿನ ಪಾಠದಲ್ಲಿ ಕಿವಿಯ ಮೂಲಕ ಹೃದಯ ತಲುಪುವಂತೆ ಲಯದ ಪಾಠಗಳನ್ನು ಹೇಳಿಕೊಟ್ಟಿರಬಹುದು! ಅವರಿಗೊಂದು ಸಲಾಂ.
Like us!
Follow us!