ನೀವು ಎಂದಾದರೂ ಬಿಡುವಾಗಿದ್ದಾಗ, ಬೆಳಿಗ್ಗೆ 7-9 ಗಂಟೆ ಸಮಯದಲ್ಲಿ ಬೆಂಗಳೂರಿನ ನಮ್ಮ ವಿಜಯನಗರಕ್ಕೆ ಬನ್ನಿ. ಆಗ ವಿಜಯನಗರ ಕ್ಲಬ್ ಇರುವ ಮೊದಲನೆಯ ಮುಖ್ಯರಸ್ತೆಗೆ,  ಒಂಬತ್ತನೇ ಅಡ್ಡರಸ್ತೆಯೆಂಬ,  ಹಂಪಿನಗರದ ಈಜುಕೊಳ ರಸ್ತೆಯು ಸೇರುವ ವೃತ್ತಕ್ಕೆ ಬಂದಿರೆಂದರೆ, ಅಲ್ಲೇ ಪಕ್ಕದಲ್ಲಿ, ನಿಮಗೆ ‘ಕಲ್ಮಿನೇಟ್’ ಎಂಬ ‘ವಿಲಕ್ಷಣ’ ಹೆಸರುಳ್ಳ ತರಕಾರಿ ಅಂಗಡಿ ಕಾಣಿಸುತ್ತದೆ. ಅಂಗಡಿ ಮಾತ್ರವಲ್ಲ, 

ಅದರ ತುಂಬ ಸಿಹಿತಿಂಡಿಗೆ ಇರುವೆ ಮುತ್ತಿದಂತೆ ತುಂಬಿರುವ ಜನರೂ ಕಾಣಿಸುತ್ತಾರೆ.  ಬಹಳ ತಾಜಾ ತರಕಾರಿಯನ್ನು ಕಡಿಮೆ ಬೆಲೆಗೆ ಮಾರುವುದರಿಂದ ಇದು ನಮ್ಮ ಬಡಾವಣೆಯಲ್ಲಿ ತುಂಬ ಪ್ರಸಿದ್ಧವಾದ ತರಕಾರಿ ಅಂಗಡಿಯಾಗಿದೆ. ದೂರದೂರದ ಬಡಾವಣೆಗಳಿಂದಲೂ ಜನ ಈ ಅಂಗಡಿಗೆ ಬಂದು ತರಕಾರಿ ಖರೀದಿಸುತ್ತಾರೆ. 

ಪದಕುತೂಹಲಿಯಾದ ನನಗೆ,  ಸಾಕಷ್ಟು  ಕನ್ನಡಮಯ ಅನ್ನಿಸುವ ಪರಿಸರವುಳ್ಳ  ನಮ್ಮ ಹಂಪಿ ನಗರದಲ್ಲಿರುವ ಈ ವ್ಯಾಪಾರಸ್ಥಳಕ್ಕೆ ‘ಕಲ್ಮಿನೇಟ್’ ಎಂಬ ಇಂಗ್ಲಿಷ್ ಹೆಸರು‌ ಯಾಕಿಟ್ಟರು?  ಸಾಲದೆಂಬಂತೆ ‘ಮುಗಿತಾಯ, ಕೊನೆ’ ಎಂಬ ನಕಾರಾತ್ಮಕ ಅರ್ಥವನ್ನು ಸಹ ಹೊಂದಿರುವ ಕಲ್ಮಿನೇಟ್’ ಪದವನ್ನೇ ಯಾಕೆ  ಹೆಸರೆಂದು ಇಟ್ಟರು? ಎಂಬ ಕುತೂಹಲ ಕಾಡಿತು. ಜೊತೆಗೆ ‘ಸಮೃದ್ಧವಾದ ಕನ್ನಡ ಭಾಷೆಯಲ್ಲಿ ಇವರಿಗೊಂದು ಕನ್ನಡ ಹೆಸರು ಸಿಗಲಿಲ್ಲವೇ?’ ಎಂಬ ಕೋಪವೂ ಇತ್ತು ಅನ್ನಿ. 

ಅಂದ ಹಾಗೆ ಕಲ್ಮಿನೇಟ್, ಕಲ್ಮಿನೇಷನ್ ಎಂಬ ಪದದೊಂದಿಗೆ ನನ್ನ ಮನಸ್ಸಿನಲ್ಲಿ ಜೋಡಿಸಿಕೊಂಡಿರುವ ನೆನಪೊಂದನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ನಾನು. ಕೆಲವು ವರ್ಷಗಳು ಅಂದರೆ ಸುಮಾರು 8-10 ವರ್ಷಗಳ ಹಿಂದೆ “ಕೋಳಿಗಳಿಗೆ ಯಾವುದೋ ಖಾಯಿಲೆ ಬಂತು, ತಿಂದರೆ ಜನರ ಆರೋಗ್ಯಕ್ಕೆ ಅಪಾಯವಾಗುತ್ತೆ” ಎಂದು,  ಅವುಗಳನ್ನು ಸಾಮೂಹಿಕವಾಗಿ ಸಾಯಿಸುತ್ತಿದ್ದರಲ್ಲ, ಆಗ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ culminated the chicken, culmination of birds ಎಂಬ ಪದಗಳನ್ನು ಓದಿದ್ದು ಸದಾ ನನ್ನ ನೆನಪಿನಲ್ಲಿರುತ್ತೆ.  

ಸರಿ, ನನ್ನ ಕುತೂಹಲ ಸ್ವಭಾವ ಎಲ್ಲಿ ಸುಮ್ಮನಿರಲು ಬಿಡುತ್ತೆ ನನ್ನ! ಒಂದು ದಿನ ಆ ತರಕಾರಿ ಅಂಗಡಿಗೆ ಹೋದವಳು ಅಲ್ಲಿನ ಮಾರಾಟಗಾರರನ್ನು ಕೇಳಿಯೇಬಿಟ್ಟೆ – ‘ಏನು ನಿಮ್ಮ‌ ಅಂಗಡಿಯ ಹೆಸರಿನ ಅರ್ಥ?’ ಅಂತ. ಪ್ರಬಂಧಕರಂತೆ ಕಾಣುತ್ತಿದ್ದ ಮಹಿಳೆಯೊಬ್ಬರು ‘ಕಲ್ಮಿನೇಟ್ ಅಂದರೆ ಎಂಡ್ ಲೆಸ್’ (ಕೊನೆ ಇಲ್ಲದ್ದು) ಅಂದರು. ಕಲ್ಮಿನೇಟ್ ಪದಕ್ಕೆ ಶಿಖರ ತಲುಪುವುದು, ಗರಿಷ್ಠ ಮಟ್ಟ ಮುಟ್ಟುವುದು ಎಂಬ ಅರ್ಥವೂ ಇದೆ ಇಂಗ್ಲಿಷ್ ನಲ್ಲಿ.‌ ಆದರೆ ಕೊನೆ ಇಲ್ಲದ್ದು ಎಂಬ ಅರ್ಥ ಇದ್ದಂತಿಲ್ಲ. 

ಒಂದು ಇಂಗ್ಲಿಷ್ ಪದದ ಅರ್ಥ ವಿಸ್ತಾರ ತಮಗೆ ಗೊತ್ತೋ, ಗೊತ್ತಿಲ್ಲವೋ ಆ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ, ಒಟ್ರಾಶಿ ಇಂಗ್ಲಿಷ್ ನಲ್ಲಿ ಹೆಸರಿಟ್ಟರೆ ವ್ಯಾಪಾರ ಜಾಸ್ತಿ ಆಗುತ್ತೆ, ಅಥವಾ ತಮ್ಮನ್ನು ಬಹಳ ಆಧುನಿಕರು ಎಂದು ಜನ ಭಾವಿಸುತ್ತಾರೆ ಎಂಬ ಭಾವನೆ ನಮ್ಮ ನಾಡಿನ‌ ಅಂಗಡಿ ಮಾಲೀಕರುಗಳಲ್ಲಿ ‌ಇದೆಯೋ ಹೇಗೆ!? ನಮ್ಮ ಸಿನಿಮಾ ನಿರ್ಮಾಪಕರಲ್ಲೂ ಈ ಸ್ವಭಾವ ಇದೆ.‌ ಯಾಕೆ ಹೀಗೆ!?

ಚಿಂತೆ ಅನ್ನಬಹುದಾದ ಈ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತೆ.