ಮೊನ್ನೆ ನಮ್ಮ ಬಡಾವಣೆಯ ತರಕಾರಿ ಅಂಗಡಿಗೆ ಹೋಗಿದ್ದಾಗ ಒಂದು ವಿಚಿತ್ರ ಅನುಭವ ಆಯಿತು. ತರಕಾರಿ ಮಾರುತ್ತಿದ್ದವನ ಹತ್ತಿರ ‘ಈರುಳ್ಳಿ ಎಷ್ಟು?’ ಅಂದೆ. ಅವನು ‘ನಲವತ್ತು ರೂಪಾಯ್’ ಅಂದವನು ತಕ್ಷಣ ‘ಫಾರ್ಟಿ ರೂಪೀಸ್’ ಅಂದ. ನನ್ನ ಮನಸ್ಸಿನಲ್ಲಿ ‘ಯಾಕೆ ಇವನು ಹೀಗಂದ?’ ಎಂಬ ಪ್ರಶ್ನೆ ಮೂಡಿತು.
”ಯಾಕಪ್ಪಾ, ನಂಗೆ ಕನ್ನಡ ಬರಲ್ಲ ಅನ್ನಿಸ್ತಾ? ತಕ್ಷಣ ಇಂಗ್ಲಿಷ್ನಲ್ಲಿ ಬೆಲೆ ಹೇಳಿದ್ರಲ್ಲಾ? ” ಎಂದು ಕೇಳಿದೆ. ನಮ್ಮ ಬಡಾವಣೆಯಲ್ಲಿ ಮಾರವಾಡಿಗಳು, ಜೈನರು ತುಂಬ ಮಂದಿ ಇದ್ದಾರೆ. ನನ್ನನ್ನೂ ಅವರಲ್ಲಿ ಒಬ್ಬರು ಅಂದುಕೊಂಡಿರಬೇಕು ಈ ಮನುಷ್ಯ ಎಂಬುದು ನನ್ನ ಗುಮಾನಿಯಾಗಿತ್ತು. ಆದರೆ ನನ್ನ ಪ್ರಶ್ನೆಗೆ ಅವನು ಕೊಟ್ಟ ಉತ್ತರ ತುಂಬ ಅನಿರೀಕ್ಷಿತವಾಗಿತ್ತು. “ಇಲ್ಲ ಇಲ್ಲ ಮೇಡಂ. ನಂಗೆ ಸರಿಯಾಗಿ ಕನ್ನಡ ಬರಲ್ಲ” ಅಂದ ಆ ಯುವಕ. ಅವನ ಮಾತಿನಿಂದ ನನಗೆ ತಿಳಿದು ಬಂದದ್ದು ಇಷ್ಟು. ಅವನು ಉತ್ತರ ಪ್ರದೇಶದಿಂದ ಎರಡು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದಾನೆ. ಕನ್ನಡದವರ ತರಕಾರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಾನೆ. ಹೀಗಾಗಿ ಅವನಿಗೆ ಕನ್ನಡ ಸರಿಯಾಗಿ ಬರುವುದಿಲ್ಲ. ತಾನು ಕನ್ನಡದಲ್ಲಿ ಹೇಳಿದ್ದು ಸರಿಯೋ, ತಪ್ಪೋ ಎಂದು ಅನ್ನಿಸಿಬಿಡುತ್ತೆ. ದಿನಾ ಒಂದಷ್ಟು ಹೊಸ ಕನ್ನಡ ಪದ ಕಲಿತು ವ್ಯಾಪಾರ ಮುಂದುವರಿಸುತ್ತಿದ್ದಾನೆ.
ಈ ವಿವರಗಳು ಹಾಗಿರಲಿ. ದೂರದ ಕನ್ನಡೇತರ ಪ್ರದೇಶದಿಂದ ಬಂದ ಒಬ್ಬ ಬಡಹುಡುಗ ಕನ್ನಡ ನಾಡಿನಲ್ಲಿ ಹೊಟ್ಟೆಪಾಡಿಗಾಗಿ ದುಡಿಯುತ್ತಾ, ಶ್ರದ್ಧೆಯಿಂದ ಕನ್ನಡ ಕಲಿಯುತ್ತಿರುವುದನ್ನು ನೋಡಿ ನನ್ನ ಮನಸ್ಸು ತುಂಬಿ ಬಂತು.
Like us!
Follow us!