“ಶ್ರೀ ರಾಘವೇಂದ್ರ ಗ್ರ್ಯಾಂಡ್… ಜ್ಯೂಸಸ್, ಚಾಟ್ಸ್, ಚೈನೀಸ್, ನಾರ್ತ್ ಇಂಡಿಯನ್, ಸೌತ್ ಇಂಡಿಯನ್….”
ಇಂಡಿಯನ್ ಟಯರ್ಸ್
ಕಮಲ ಆರ್ಟ್ಸ್
ನವಗ್ರಹ ಬಾಯ್ಸ್
ಖುಷಿ ಈಟಿಂಗ್ ಚಾಯ್ಸ್
ಎಕ್ಸ್ಟ್ರಾ ಚಟ್ನಿ
ಮನೋಜ್ ಫ್ರೇಮ್ಸ್
ಇನ್‌ಟೈಂ ಸ್ಟುಡಿಯೋ.
ಏನಿವು ಅಂದುಕೊಂಡಿರೇ? ಇವು ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಕಾಣಿಸುವ ಅಂಗಡಿಗಳ ನಾಮಫಲಕಗಳು! ಇಂಗ್ಲಿಷ್ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆದಂಥವು. ಜೊತೆಗೆ ಇಂಗ್ಲಿಷ್ ಫಲಕವಂತೂ ಅದರ ಕೆಳಗೆ ಇದ್ದೇ ಇರುತ್ತೆ ಬಿಡಿ.
ಹೌದೂ…ಯಾಕೆ ನಾವು ಮತ್ತು ನಮ್ಮವರು ಹೀಗೆ!?
ಇಂಗ್ಲಿಷ್ ಬಳಸಿದರೆ ಪ್ರತಿಷ್ಠೆ ಹೆಚ್ಚು ಎಂಬ ಭಾವನೆಯೋ, ಅಥವಾ ಕನ್ನಡ ಸಂವಾದಿ ಪದ ಹುಡುಕಲು ಆಲಸ್ಯವೋ, ಅಥವಾ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ‘ಏನೋ ಒಂದು ಭಾಷೆ, ಅಂಗ್ಡಿ ಹೆಸರು ಗೊತ್ತಾದ್ರೆ ಸಾಕು’ ಎಂದು ಒಟ್ರಾಶಿ ಬರೆಸಿಬಿಡುತ್ತಾರೋ…ಏನು ಕಾರಣ? ಅಥವಾ ಯಾವ ಯಾವ ಭಾಷೆಯವರು ಸಿಗುತ್ತಾರೋ ಅವರೊಂದಿಗೆ ಅದೇ ಭಾಷೆಯಲ್ಲಿ ಮಾತಾಡುವ ಕನ್ನಡಿಗರ ಅಭ್ಯಾಸ ಇದಕ್ಕೆ ಮೂಲವೋ?
ಕಾಲೇಜಿಗೆ ಗಾಡಿ ಓಡಿಸುತ್ತಾ ಹೋಗುವಾಗ ಈ ಫಲಕಗಳು ಕಣ್ಣಿಗೆ ಬೀಳುತ್ತವಲ್ಲ, ಆಗ ಇವೆಲ್ಲ ಯೋಚನೆಗಳು ನನ್ನ ತಲೆಗೆ ಬರುತ್ತವೆ. ಪರಿಹಾರ ಹೊಳೆಯದೆ ತಲೆಬಿಸಿ ಆಗುತ್ತಲ್ಲಾ ಮಾರಾಯ್ರೇ! ಇದೇ ಹೊತ್ತಿಗೆ ‘ ಕೂಲ್ ಜಾಯಿಂಟ್’ ಅನ್ನುವ ಫಲಕ ನನ್ನ ಕಣ್ಣಿಗೆ ಬೀಳಬೇಕೇ..ಅಯ್ಯೋ!!. ಅದೊಂದು ಹಣ್ಣಿನ ರಸದ ಅಂಗಡಿ.
‘ಬನ್ನಿ, ನಿಮ್ಮ ತಲೆಬಿಸಿ ಕಡಿಮೆ ಮಾಡ್ಕೊಳಿ’ ಅಂತ ಹೇಳಿತೇ ಆ ಫಲಕ!?
ಅರೆ! ನಾನು ಮನಸ್ಸಿನಲ್ಲೇ ಈ ಪಿರಿಪಿರಿ ಅನುಭವಿಸುತ್ತಿದ್ದಾಗ ‘ಇಂಗ್ಲಿಷ್-ಕಂಗ್ಲಿಷ್ ನಾಮಫಲಕ’ಗಳ ನಿಯಮಕ್ಕೆ ಅಪವಾದವೆಂಬಂತೆ ‘ಅರಿವೆ’ ಎಂಬ ಮುದ್ದಾದ ಕನ್ನಡ ಪದವನ್ನು ತನ್ನ ಹೆಸರಾಗಿ ಇಟ್ಟುಕೊಂಡಿದ್ದ ಒಂದು ಬಟ್ಟೆಯಂಗಡಿ ಕಣ್ಣಿಗೆ ಬಿತ್ತು. ‘ಹೆಚ್ಚಲಿ ನಿಮ್ಮ ಪೀಳಿಗೆ’ ಎಂದು ಮನದಲ್ಲೇ ಆ ಅಂಗಡಿ ಮಾಲೀಕರಿಗೆ ಹಾರೈಸಿದೆ.