ವಿಮಾನ ನಿಲ್ದಾಣ, ದೊಡ್ಡ ದೊಡ್ಡ ವಾಣಿಜ್ಯ , ಬೆಂಗಳೂರಿನ ‘ನಮ್ಮ ಮೆಟ್ರೊ’ ರೈಲು ವ್ಯವಸ್ಥೆ ಇಲ್ಲೆಲ್ಲ ನಾವು, ತಾನೇ ಮೇಲಕ್ಕೆ ಕೆಳಕ್ಕೆ ಚಲಿಸುತ್ತಾ ಜನರ ಹತ್ತುವಿಕೆ, ಇಳಿಯುವಿಕೆಗಳನ್ನು ಸುಲಭ ಮಾಡುವ ‘ಎಸ್ಕೆಲೇಟರ್’ ಗಳನ್ನು ಬಳಸುತ್ತೇವಲ್ಲ? ಅದನ್ನು ನೋಡಿದಾಗೆಲ್ಲ ‘ಇದಕ್ಕೆ ಕನ್ನಡದಲ್ಲಿ ಏನಂತಾರೆ?’ ಅನ್ನುವ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಏಳುತ್ತಿತ್ತು. ಈಚೆಗೆ, ನಮ್ಮ ಪರಿಚಿತರಾದ ‘ಲೈಟಿಂಗ್ ಕೃಷ್ಣಪ್ಪ’ ಎಂಬ ಬೆಳಕು ಕರ್ಮಿ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಇದಕ್ಕೆ ಉತ್ತರ ಸಿಗಲು ನಿಮಿತ್ತವಾದರು.
ಲೈಟಿಂಗ್ ಕೃಷ್ಣಪ್ಪ ನಮ್ಮ ನಾಟ್ಯ ಸಂಸ್ಥೆ ಚಿತ್ರನಾಟ್ಯದ ವೇದಿಕೆ ಕಾರ್ಯಕ್ರಮ ವೊಂದಕ್ಕೆ ಬೆಳಕು ವ್ಯವಸ್ಥೆ ಮಾಡಲು ಬಂದಿದ್ದರು. ಎಪ್ಪತ್ತೈದು ವರ್ಷ ಮೀರಿರುವ ಅವರು ಇಪ್ಪತ್ತರ ಹುಡುಗನ ಚೈತನ್ಯದಿಂದ ಕೆಲಸ ಮಾಡುತ್ತಾರೆ. ಅವರ ಕಾರ್ಯೋತ್ಸಾಹ ಯಾರಾದರೂ ಮೆಚ್ಚುವಂಥದ್ದು. ಅಂದು, ಕೆಲಸ ಆದ ನಂತರ ಕಾಫಿ ಕುಡಿಯಲು ಹೋದಾಗ, ಹೀಗೇ ಸಾಂದರ್ಭಿಕವಾಗಿ ನಾನು, ಅವರ ಬೆಳಕು ಕ್ಷೇತ್ರದ ಅನುಭವ, ಕೆಲಸ ಕಲಿತ ರೀತಿಯ ಬಗ್ಗೆ ಅವರನ್ನು ವಿಚಾರಿಸಿದೆ. ಅವರು ಮಾತಾಡುತ್ತಾ, ತಾವು ಕನ್ನಡದ ಶ್ರೇಷ್ಠ ನಾಟಕ-ಸಿನಿಮಾ ಪ್ರತಿಭೆ ದಿ.ಶಂಕರ್ ನಾಗ್ ಅವರ ಗರಡಿಯಲ್ಲಿ ಪಳಗಿದವರು ಎಂದರು, ಹಾಗೂ ಶಂಕರ್ ನಾಗ್ ರ ಅಗಾಧ ಕಲಾಸಾಮರ್ಥ್ಯ, ಕನಸುಗಾರಿಕೆಗಳ ಬಗ್ಗೆ ಹೇಳುತ್ತಾ ‘ಶಂಕರ್ ಸರ್ ಗೆ ನಂದಿಬೆಟ್ಟಕ್ಕೆ ರೋಲಿಂಗ್ ಮೆಟ್ಲು’ ಹಾಕ್ಸೋ ಕನಸಿತ್ತು ಮೇಡಂ’ ಅಂದರು. ‘ರೋಲಿಂಗ್ ಮೆಟ್ಲು (ಮೆಟ್ಟಿಲು)…ಅರೆ! ಇದು ಎಸ್ಕೆಲೇಟರ್ ಗೆ ಒಂದು ಕಂಗ್ಲಿಷ್ ಸಂವಾದಿ ಪದ ಅಲ್ವಾ’ ಅನ್ನಿಸಿತು ನನಗೆ. ನಂತರ, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ – ಕನ್ನಡ ನಿಘಂಟು ( ಪ್ರಕಟಣೆ -1985)ನೋಡಿದಾಗ ಎಸ್ಕೆಲೇಟರ್ ಪದಕ್ಕೆ ’ಚರ ಸೋಪಾನ, ತಿರುಗು ಮೆಟ್ಟಿಲು’ ಎಂಬ ಪದಗಳು ಇದಕ್ಕೆ ಸಂವಾದಿಯಾಗಿ ಸಿಕ್ಕಿದವು!
ಅಂದ ಹಾಗೆ, ರೋಲಿಂಗ್ ಮೆಟ್ಲು ಎಂಬ ಈ ಪದಕ್ಕೆ ‘ಉರುಳುವ ಮೆಟ್ಟಿಲು’ ಎಂಬ ಪದವನ್ನು ಬಳಸಬಹುದೇ ಎಂದು ಯೋಚಿಸುತ್ತಿದ್ದೇನೆ ನಾನು. ಈ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ ಕನ್ನಡ ಬಂಧುಗಳೇ.
Like us!
Follow us!