ಭಾಷೆಗಳು ಬೇರೆ ಭಾಷೆಯ, ಸಂಸ್ಕೃತಿಯ ಪದಗಳನ್ನು ತಮ್ಮದಾಗಿಸಿಕೊಳ್ಳುವ ರೀತಿ ತುಂಬ ಕುತೂಹಲ ಹುಟ್ಟಿಸುವಂಥದ್ದು‌. ನಮ್ಮ ಕನ್ನಡವು ಎರಡು ನಿರ್ದಿಷ್ಟ ಇಂಗ್ಲಿಷ್ ಪದಗಳನ್ನು ತನ್ನದಾಗಿಸಿಕೊಂಡ ಅಥವಾ ಕನ್ನಡದಲ್ಲಿ ಅದಕ್ಕೆ ಸಂವಾದಿಯಾಗಿ‌ ಬಳಕೆಯಾಗುತ್ತಿರುವ ಪದಗಳ ಬಗ್ಗೆ ಈಗ ಚರ್ಚಿಸಲಿದ್ದೇನೆ.

ಹೊಸ ಪೀಳಿಗೆಯ ಮಕ್ಕಳಿಗೆ, 

ಆಧುನಿಕ (ಇಂಗ್ಲಿಷ್ ಮಾಧ್ಯಮ ಎಂದು ಅರ್ಥೈಸಿಕೊಳ್ಳಬೇಕು) ಶಾಲೆಗಳಲ್ಲಿ  ಶಿಶುವಿಹಾರದಿಂದಲೂ, ‘excuse me , please, sorry, thank you’ ಮುಂತಾದ ‘ಮ್ಯಾಜಿಕ್ ವರ್ಡ್ಸ್’ ಗಳನ್ನು, ಜನರೊಡನೆ ವ್ಯವಹರಿಸುವಾಗ ಬಳಸಬೇಕು, ಅದು ನಾಗರಿಕತೆ, ಸೌಜನ್ಯಗಳ ಸಂಕೇತ’ ಎಂಬ ಪಾಠವನ್ನು ಹೇಳಿಕೊಡುತ್ತಾರಲ್ಲವೇ? ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಯಾವ ಪದಗಳಿವೆ ಅಂತ ಯೋಚಿಸುತ್ತಿದ್ದೆ. ಆಗ ನನ್ನ ಗಮನಕ್ಕೆ ಬಂದ ಸಂಗತಿಗಳು ಇವು. 

1. ಪ್ಲೀಸ್ ಪದಕ್ಕೆ ಗ್ರಾಂಥಿಕವಾಗಿ ‘ದಯವಿಟ್ಟು’, ‘ದಯಮಾಡಿ’ ಎಂಬ ಪದಗಳನ್ನು ನಾವು ಬಳಸಿದರೂ ಸಾಮಾನ್ಯ ಮಾತುಕತೆಯಲ್ಲಿ ಅವುಗಳನ್ನು ಬಳಸುವುದಿಲ್ಲ. ಅವುಗಳ ಬದಲು ‘ಸ್ವಲ್ಪ’ ಎಂಬ ಪದವನ್ನು ಬಳಸ್ತೇವೆ!!! ಉದಾಹರಣೆಗೆ, 

Will you please switch on the fan?

ಸ್ವಲ್ಪ ಫ್ಯಾನ್ ಹಾಕ್ತೀರಾ?….

Can you please give the pen?

ಸ್ವಲ್ಪ ಪೆನ್ ಕೊಡ್ತೀರಾ?….

Will you please move that side?

ಸ್ವಲ್ಪ ಆ ಕಡೆ ಸರ್ಕೋತೀರಾ?….

Will you please show me another saree?

ಸ್ವಲ್ಪ ಬೇರೆ ಸೀರೆ ತೋರಿಸ್ತೀರಾ?…ಹೀಗೆ.

2. ಇನ್ನು, excuse me ಪದಕ್ಕೆ ತೀರಾ ಗ್ರಾಂಥಿಕ ತರ್ಜುಮೆಗಳಲ್ಲಿ ‘ಕ್ಷಮಿಸಿ’ ಎಂಬ ಪದವನ್ನು ಬಳಸಿದರೂ ದೈನಂದಿನ ವ್ಯವಹಾರದಲ್ಲಿ ಈ ಪದಕ್ಕೂ ಸ್ವಲ್ಪ ಅನ್ನುವ ಪದವನ್ನೇ ಬಳಸುವುದು ನಾವು! ಉದಾಹರಣೆಗೆ,

Excuse me, will you come this side?

ಏನ್ರೀ, ಸ್ವಲ್ಪ ಈ ಕಡೆ ಬರ್ತೀರಾ?

Excuse me, can I move to that side?

ನಾನು ಸ್ವಲ್ಪ ಆ ಕಡೆ ಹೋಗಲಾ?

Excuse me, that is my seat.

ಇಲ್ನೋಡಿ ಸ್ವಲ್ಪ, ಅದು ನನ್ ಸೀಟು.

Excuse me, can I come in?

ನಾನು ಸ್ವಲ್ಪ ಒಳಗ್ ಬರಬಹುದಾ?

ಹೀಗೆ, ‘ಸ್ವಲ್ಪ’ ಪದವು ತನ್ನ ಗ್ರಾಂಥಿಕ ಅರ್ಥಗಳಾದ ‘ಅಲ್ಪವಾದುದು, ಕ್ಷುದ್ರವಾದುದು, ತುಸು, ಕೊಂಚ, ಅಲ್ಪ’ ಎಂಬವುಗಳಿಂದ ತುಂಬ ಭಿನ್ನವಾದ ಅರ್ಥ ವಿಸ್ತಾರವನ್ನು ಪಡೆದುಕೊಂಡಿದೆ. ಭಾಷೆ ಬೆಳೆಯುವ, ತನ್ನನ್ನು ತಾನು ವಿಸ್ತರಿಸಿಕೊಳ್ಳುವ ರೀತಿ ಅನನ್ಯ ಮತ್ರು ಸ್ವಾರಸ್ಯಕರ. ಅಲ್ಲವೇ?