ಕರ್ನಾಟಕದ ಸರಳ, ಪೌಷ್ಟಿಕ ಹಾಗೂ ಪ್ರಖ್ಯಾತ ಆಹಾರಗಳಲ್ಲಿ ರಾಗಿಮುದ್ದೆ ಒಂದು. ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಇದು ಪ್ರಧಾನ ದೈನಿಕ ಆಹಾರವಾಗಿದೆ (ಸ್ಟೇಪಲ್ ಫುಡ್ ಎಂಬ ಅರ್ಥದಲ್ಲಿ). ಇದಕ್ಕೆ ‘ಹಿಟ್ಟು’ ಎಂಬ ಇನ್ನೊಂದು ಹೆಸರಿದೆ! ಮತ್ತೆ, ಇನ್ನೂ ಬೇಯಿಸದ ರಾಗಿಹಿಟ್ಟಿಗೆ ರಾಗಿಹಸಿಟ್ಟು (ರಾಗಿ ಹಸಿಹಿಟ್ಟು) ಅನ್ನುತ್ತಾರೆ ನೋಡಿ!
ತಾಯಿ ಮಂಗಳೂರಿನವರಾಗಿದ್ದು ತಂದೆ ತುಮಕೂರಿನವರಾಗಿದ್ದ ನಮ್ಮ ಮನೆಯಲ್ಲಿ ರಾಗಿಮುದ್ದೆ ದೈನಿಕ ಆಹಾರವಾಗಿರಲಿಲ್ಲ, ಆದರೆ ಅಪರೂಪಕ್ಕೆ ಮಾಡುವ ಒಂದು ವಿಶೇಷ ಆಹಾರವಾಗಿತ್ತು. ‘ರಾಗಿಮುದ್ದೆ ಮಾಡಿದ್ರೆ ಅದಕ್ಕೆ ಸರಿಯಾದ ಹುಳಿ(ಸಾಂಬಾರ್) ಇರ್ಬೇಕು, ಇಲ್ದಿದ್ರೆ ಕಷ್ಟ’ ಎಂಬ ಮಾತನ್ನು ಮನೆಯಲ್ಲಿ ಕೇಳುತ್ತಾ ಬೆಳೆದವಳು ನಾನು. ಅಂತಹ ನನಗೆ ಚಟ್ನಿ, ದಿಢೀರನೆ ಕಿವುಚಿದ ಟೊಮೆಟೊ ಹಸಿಗೊಜ್ಜು, ಮೊಸರಿನಲ್ಲಿ ಕಲಸಿದ ಉಪ್ಪು ಖಾರಗಳಂತಹ ಸುಲಭ ವ್ಯಂಜನಗಳು ಕೂಡ ಮುದ್ದೆಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂಬುದು ಗೊತ್ತಾದದ್ದು ತುಂಬ ತಡವಾಗಿ. ನಮ್ಮ ಗೃಹವಾಳ್ತೆ ಸಹಾಯಕಿ ಯಲ್ಲಮ್ಮನಿಂದ ಈ ವಿಷಯ ನನಗೆ ಗೊತ್ತಾಯಿತು.
ಇರಲಿ. ನಾವು ಚಿಕ್ಕವರಾಗಿದ್ದಾಗ, ಎಂದಾದರೊಮ್ಮೆ ನಮ್ಮ ತಾಯಿಯವರು ಮನೆಯಲ್ಲಿ ರಾಗಿಮುದ್ದೆ ಮಾಡಿದಾಗ, ನನ್ನ ತಮ್ಮ ಅದನ್ನು ನುಂಗಲು ಗೊತ್ತಾಗದೆ ಅಗಿಯಲು ಹೋಗಿ ‘ಅಯ್ಯೋ, ಬಾಯೆಲ್ಲ ಅಂಟಂಟು…ಮುದ್ದೆ ಬೇಡಾ ನಂಗೆ’ ಎಂದು ರಂಪ ಮಾಡುತ್ತಿದ್ದ. ಆಗ ನಮ್ಮ ತಂದೆಯವರು “ರಾಗಿ ಮುದ್ದೆಯನ್ನ ಅಗೀಬಾರ್ದಪ್ಪ. ಚಿಕ್ಕ ಚಿಕ್ಕ ಉಂಡೆ ಮಾಡಿ ನುಂಗ್ಬೇಕು. ‘ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ, ಹಿಟ್ಟಂ ಬಿಟ್ಟಂ ಕೆಟ್ಟಂ’ ಅಂತಾರೆ ಗೊತ್ತಾ” ಎನ್ನುತ್ತಿದ್ದರು (ರಾಗಿಮುದ್ದೆ ತಿಂದವನು ಬೆಟ್ಟವನ್ನೇ ಕಿತ್ತಿಟ್ಟನು, ಅಂದರೆ ಶಕ್ತಿಶಾಲಿಯಾದನು. ಮುದ್ದೆಯನ್ನು ಬಿಟ್ಟವನು ಕೆಟ್ಟನು ಅಂದರೆ ಉದ್ಧಾರ ಆಗಲಿಲ್ಲ).
ಮುದ್ದೆಗೆ ಹಿಟ್ಟು ಅನ್ನುವ ಇನ್ನೂ ಕೆಲವು ಸನ್ನಿವೇಶಗಳನ್ನು ನಾವು ಗಮನಿಸಬಹುದು.
ಯಾರಾದರೂ ತಮ್ಮ ಮೇಲೆ ಅನವಶ್ಯಕ ಯಜಮಾನಿಕೆ ಮಾಡಿದರೆ “ಯಜಮಾನ್ಕೆ ಮಾಡೋದ್ ನೋಡು ನನ್ನ ಮೇಲೆ! ಅವ್ರೇನ್ ಹಿಟ್ಟುಬಟ್ಟೆ ಕೊಟ್ಟು ಸಾಕಿದಾರಾ ನನ್ನ?” ಎಂದು, ‘ಯಜಮಾನ್ಕೆ ಮಾಡಿದ ಅಪರಾಧಿ’ಯನ್ನು ಬಯ್ದುಕೊಳ್ಳುವಾಗ ಹಿಟ್ಟು ಅಂದರೆ ರಾಗಿಮುದ್ದೆ ಅನ್ನುವ ಅರ್ಥವೇ ಇರುತ್ತದೆ. “ವತ್ತಾರೆ ಇಟ್ಟುಂಕ್ಕೊಂಡು ಒಲಕ್ ಬಂದೆ ಕಣ್ಲಾ” (ಮುಂಜಾನೆ ರಾಗಿಮುದ್ದೆ ಉಂಡು ಹೊಲಕ್ಕೆ ಬಂದೆ ಕಣೋ) ಅನ್ನುವ ಮಂಡ್ಯ ಕಡೆಯ ಜನರ ಮಾತು ಸಹ ಇಲ್ಲಿ ನೆನಪಾಗುತ್ತದೆ. ರಾಗಿಮುದ್ದೆಯನ್ನು ಪಡವಲಕಾಯಿ ತೊವ್ವೆ ಜೊತೆ ರುಚಿಸಿಕೊಂಡು ಉಣ್ಣುತ್ತಿದ್ದ ಪುಟ್ಟಪ್ಪಜ್ಜ ಎಂಬ ತಮ್ಮ ಒಬ್ಬ ಅಜ್ಜನವರ ಬಗ್ಗೆ ಕವಿ ಹೆಚ್.ಎಸ್.ವೆಂಕಟೇಶಮೂರ್ತಿಯವರು ‘ಸುರಿಮಳೆಯ ಇರುಳಲ್ಲಿ ಪಡವಲಕಾಯಿ ತೊವ್ವೆ’ ಎಂಬ ತಮ್ಮ ಒಂದು ಪ್ರಬಂಧದಲ್ಲಿ ಬರೆದಿದ್ದಾರೆ.
ಒಟ್ಟಿನಲ್ಲಿ ರಾಗಿಮುದ್ದೆಗೆ ಹಿಟ್ಟು ಎಂಬ ಹೆಸರಿರುವುದು ತುಸು ಸೋಜಿಗದ ವಿಷಯವೇ…ನಮ್ಮಂತಹ ‘ದಿನಾ ಹಿಟ್ಟು ಉಂಡು’ ರೂಢಿ ಇರದ ಜನರಿಗೆ.