“ಅಬ್ಬ, ನೋಡಿಲ್ಲಿ! ಒಂದು ಕಾಲಿರೋ ಒಬ್ಬ ವ್ಯಕ್ತಿ ಇಟ್ಟಿರೋ ಚಾಟ್ ಅಂಗಡಿ ಎಷ್ಟು ಹೆಸರು ಮಾಡಿದೆ! ಒಮ್ಮೆ ಹೋಗ್ಬರೋಣ ಮೀರಾ” ಎಂದು ನನ್ನ ಮನೆಯವರು ಅಂದಾಗ ನನ್ನಲ್ಲಿ ಕುತೂಹಲ ಮೂಡಿತು. ಯೂಟ್ಯೂಬ್ ನಲ್ಲಿದ್ದ ದೃಶ್ಯಚಿತ್ರವೊಂದರ ಮೂಲಕ ತಿಳಿದ ವಿಷಯ ಇದು‌.

ಹಾಗೆಯೇ, ಮುಂದೊಂದು ವಾರಾಂತ್ಯದಲ್ಲಿ ನಾಗರಬಾವಿ ವರ್ತುಲ ರಸ್ತೆಯಲ್ಲಿದ್ದ ಆ ತಿನಿಸಿನಂಗಡಿಯನ್ನು ಹುಡುಕಿಕೊಂಡು ಹೊರಟೆವು. ಗೂಗಲ್ ಗುರು ದಾರಿ ತೋರಿದ್ದರಿಂದ ವಿಳಾಸ  ಹುಡುಕುವುದು ಅಷ್ಟೇನೂ ಕಷ್ಟವಾಗಲಿಲ್ಲ.‌ 

ರಸ್ತೆ ಬದಿಯಲ್ಲಿ ಪುಟ್ಟ ಟೆಂಪೋ ಒಂದನ್ನು ಚಾಟ್  ಅಂಗಡಿಯಾಗಿ ಪರಿವರ್ತಿಸಿ, ಪಕ್ಕದಲ್ಲಿ 8-10 ಪ್ಲಾಸ್ಟಿಕ್ ಕುರ್ಚಿಗಳನ್ನು ಹಾಕಿ, ಪಾನಿಪೂರಿ, ಮಸಾಲಾಪೂರಿ ಮುಂತಾದ ಚಾಟ್ ವಿಭಾಗಕ್ಕೆ ಸೇರುವ ತಿಂಡಿಗಳನ್ನು ಅಲ್ಲಿ ಮಾರಲಾಗುತ್ತಿತ್ತು. ಆ ಅಂಗಡಿಯ ಅಕ್ಕಪಕ್ಕ  ಜನ ನಿಂತು, ಕುಳಿತು ಬೇಕಾದ್ದನ್ನು ಕೊಂಡು ತಿನ್ನುತ್ತಿದ್ದರು. ಆಗ ‘ಬುಟ್ಟಿ ಚಾಟ್’ ಎಂಬ ಪದ ಅಲ್ಲಿ ನನ್ನ ಕಿವಿ ಮೇಲೆ ಬಿದ್ದು ನನಗೆ ಆಶ್ಚರ್ಯ ಆಯಿತು. ಏನು ಅಂತ ಕುತೂಹಲದಿಂದ ನೋಡಿದಾಗ ಒಂದು ಪುಟಾಣಿ ಬೋಗುಣಿಯಾಕಾರದ –  ಜಾಮೂನು ಬಟ್ಟಲಿನ ಗಾತ್ರದ್ದು ಅನ್ನಬಹುದು – ಕರಿದ ಹಿಟ್ಟಿನ ರಚನೆಯಲ್ಲಿ ಒಂದಿಷ್ಟು ಬಟಾಣಿ, ಮಸಾಲೆ, ಈರುಳ್ಳಿ ಚೂರುಗಳು, ಮೊಸರು, ಬೂಂದಿ ಕಾಳು ಮುಂತಾದುವನ್ನು ಹಾಕಿ, ಇಂತಹ 5-6 ಬೋಗುಣಿಗಳನ್ನು ಒಂದು ಕಾಗದದ ತಟ್ಟೆ ಯಲ್ಲಿಟ್ಟು ಕೊಡುತ್ತಾರೆ. ಆ ಬೋಗುಣಿಯನ್ನೇ ಪಾನಿಪುರಿಯನ್ನು ಇಡಿಯಾಗಿ ಬಾಯಿಗೆ ಹಾಕಿಕೊಂಡಂತೆ ತಿನ್ನುವುದು!  ಕಟೋರಿ ಚಾಟ್ ಎಂಬ ಹಿಂದಿ ಪದಕ್ಕೆ ಬುಟ್ಟಿ ಚಾಟ್ ಎಂದು ಕನ್ನಡದ ಹೆಸರಿಟ್ಟದ್ದು,  ಬಂದ ತಿಂಡಿಪ್ರಿಯರೊಂದಿಗೆ ಖುಷಿಖುಷಿಯಾಗಿ  ಮಾತಾಡುತ್ತಾ, ತಮ್ಮ ವಾಹನದ ಮೈತುಂಬ ಕನ್ನಡದ ಸೂಕ್ತಿಗಳನ್ನು ಹಾಕಿ ಕನ್ನಡಾಭಿಮಾನವನ್ನು ತಮ್ಮದೇ ಆದ ರೀತಿಯಲ್ಲಿ

ಮೆರೆದದ್ದು, ಮತ್ತು ಒಂಟಿ ಕಾಲಿನಲ್ಲಿ ನಿಂತುಕೊಂಡು, ತಮ್ಮ ಇನ್ನೊಂದು ಮೊಂಡುಕಾಲನ್ನು ಪೀಠವೊಂದರ ಮೇಲೆ ಇರಿಸಿದ ದಿಂಬಿನ ಮೇಲಿಟ್ಟು ….

ಓಹ್…..ನಗುನಗುತ್ತಾ ಆತ್ಮಗೌರವದ ಬದುಕು ಕಟ್ಟಿ ಕೊಂಡ ಯುವಕ‌.‌ ಸ್ಫೂರ್ತಿದಾಯಕ ವ್ಯಕ್ತಿತ್ವ ಇವರದು ಅನ್ನಿಸಿತು. 

ನಮ್ಮ ಕಾಲು, ಕೈ ಮುಂತಾದ ದೇಹದ ಭಾಗಗಳು ಹೇಗೇ ಇರಲಿ ಸಕಾರಾತ್ಮಕ, ಶಕ್ತ ಮನಸ್ಸು ಒಂದಿದ್ದರೆ ಗೌರವದ ಬದುಕಿಗಾಗಲೀ, ಕನ್ನಡಾಭಿಮಾನಕ್ಕಾಗಲೀ‌ ಕುಂದಿಲ್ಲ ಎಂದು ತೋರಿದ ವೀರೇಶ ದಿವ್ಯಾಂಗರಲ್ಲಿ ಇರಬಹುದಾದ ದಿವ್ಯಮನಸ್ಸಿಗೆ ಮಾದರಿ.‌