ಈಚೆಗೆ ಸುಮಾರು ಅರವತ್ತು ವರ್ಷ ಸಮೀಪಿಸುತ್ತಿದ್ದ ಇಬ್ಬರು ಪರಿಚಿತರ ಒಂದು ಸಂಭಾಷಣೆಗೆ ನಾನು ಸಾಕ್ಷಿಯಾದೆ. ಒಬ್ಬರು ತಮ್ಮ ಎದುರಿಗಿದ್ದವರಿಗ “ಏನ್ರೀ, ಇವತ್ತು ನಿಮ್ಮ ಹುಟ್ಟಿದ ಹಬ್ಬಾನಾ? ನಾವು ಹಳೇ ಕಾಲದವ್ರು ಹುಟ್ಟಿದ್ದು ಒಂದು ದಿನಾಂಕವಾದ್ರೆ, ಶಾಲೆಯಲ್ಲಿ ಬರೆಸಿದ ಜನ್ಮ ದಿನಾಂಕಾನೇ ಬೇರೆ ಆಗಿರುತ್ತಲ್ಲ, ನಿಮ್ಗೆ ಕೈ ಕೊಡಕ್ಕೆ ಮುಂಚೆ ಕೇಳಿ ಕೈಕೊಡೋಣ ಅಂತ ವಿಚಾರಿಸ್ದೆ” ಅಂದರು. ಅದಕ್ಕೆ, ಎದುರಿಗಿದ್ದ ಅವರ ಪರಿಚಿತರು “ನಿಮ್ಮ ಊಹೆ ಸರಿ ಸರ್. ಕಛೇರಿ ದಾಖಲೆಯ ಜನ್ಮದಿನ ಇವತ್ತು ಅಷ್ಟೇ, ನನ್ನ ಜನ್ಮ ದಿನಾಂಕ ಬೇರೆಯೇ ಇದೆ” ಅಂದರು.
ಇಲ್ಲಿ ನನ್ನ ಗಮನ ಸೆಳೆದದ್ದು ಅಂದರೆ ‘ಕೈಕುಲುಕು’ (shake hand) ಎಂಬ ಪದ ಬಳಕೆಯಾಗಬೇಕಾದ ಕಡೆ ‘ಕೈಕೊಡು’ ಎಂಬ ಪದ ಬಳಕೆಯಾದದ್ದು. ಕೈಕೊಡು ಎಂಬ ಪದಕ್ಕೆ ನಿಘಂಟಿನಲ್ಲಿ ‘ಕೈ ನೀಡು, ಕೈಯನ್ನು ಆಸರೆಯಾಗಿ ಕೊಡು, ಗೌರವಾದರಗಳಿಂದ ಕರೆತರುವುದಕ್ಕಾಗಿ ಕೈಹಿಡಿ, ಸಹಾಯ ಮಾಡು, ನೆರವು ನೀಡು, ಮೋಸ ಮಾಡು, ವಂಚಿಸು’ ಎಂಬೆಲ್ಲ ಅರ್ಥಗಳಿದ್ದರೂ, ಸಾಮಾನ್ಯವಾಗಿ ನಾವು ಈ ನುಡಿಗಟ್ಟನ್ನು ‘ಮೋಸ ಮಾಡು, ವಂಚಿಸು’ ಎಂಬ ಅರ್ಥದಲ್ಲೇ ಬಳಸುತ್ತೇವೆ. ಉದಾಹರಣೆಗೆ,
“ಬೆಳಿಗ್ಗೆ ಕರೆಂಟು ಕೈಕೊಡ್ತು ನೋಡಿ, ಮಿಕ್ಸಿಗೆ ಹಾಕಕ್ಕೇ ಆಗ್ಲಿಲ್ಲ”, ” ಗೆಳೆಯ ಅಂತ ನಂಬ್ಕೊಂಡಿದ್ದೆ ಕಣ್ಲಾ, ಕೊನೆ ಗಳಿಗೆಯಲ್ಲಿ ಕೈಕೊಟ್ಟ ನೋಡು, ದುಡ್ಡು ಕೊಡ್ಲೇ ಇಲ್ಲ”, “ಬೇಡ ಕಣ್ರೀ, ಆ ಮೇಸ್ತ್ರೀನ ಮಾತ್ರ ನಂಬ್ಕೋಬೇಡಿ, ನಮ್ಗೆ ಸರಿಯಾಗಿ ಕೈಕೊಟ್ಟ”…..ಹೀಗೆ.
ಇದರಿಂದಾಗಿಯೇ ನನಗೆ ನನ್ನ ಪರಿಚಿತರು ‘ ಕೈಕೊಡು ಪದವನ್ನು ‘ಕೈ ಕುಲುಕು’ ಎಂಬ ಅರ್ಥದಲ್ಲಿ ಬಳಸಿದಾಗ ಆಶ್ಚರ್ಯ ಆಗಿದ್ದು.
ಕೆಲವು ಸಲ ಪದಗಳು/ನುಡಿಗಟ್ಟುಗಳು ತಪ್ಪು ಅರ್ಥದಲ್ಲೇ ಬಳಕೆಯಾಗುತ್ತಾ ಭಾಷಾ ಸಮುದಾಯದಲ್ಲಿ ಹಾಗೇ ಉಳಿದುಬಿಡುತ್ತವೆ!