ಈಚೆಗೆ ನಮ್ಮ ಹಂಪಿನಗರದ ಏಳನೇ ಮುಖ್ಯರಸ್ತೆಯ ಬಳಿ ಹೂವು ಕೊಂಡುಕೊಳ್ಳುತ್ತಿದ್ದಾಗ ಒಂದು ಕುತೂಹಲಕರ ವಿಷಯವನ್ನು ಗಮನಿಸಿದೆ. ಹೂಮಾರುವವರು ತಮ್ಮ ಬುಟ್ಟಿ ಇತ್ಯಾದಿಗಳನ್ನು ಇಟ್ಟುಕೊಂಡ ಜಾಗದ ಪಕ್ಕದಲ್ಲಿ ಇದ್ದ ಕಂಬವೊಂದಕ್ಕೆ ಕೆಲವು ಪುಟ್ಟ ಪುಟ್ಟ ದೇವರ ವಿಗ್ರಹಗಳನ್ನು ಕಟ್ಟಿಟ್ಟದ್ದು ಕಂಡುಬಂತು. ಬಹುಶಃ ಆ ಹೂ ಮಾರುವವರು ಮತ್ತು ಸುತ್ತಮುತ್ತ ಇದ್ದ ಹಣ್ಣಿನ ವ್ಯಾಪಾರಿಗಳು ಆ ವಿಗ್ರಹಗಳಿಗೆ ನಮಿಸಿ ತಮ್ಮ ದಿನದ ವ್ಯಾಪಾರವನ್ನು ಶುರು ಮಾಡುತ್ತಾರೆಂದು ತೋರುತ್ತದೆ. ಕಲ್ಲಿಗೆ ಭಕ್ತಿಯಿಂದ ಕುಂಕುಮ ಹಚ್ಚಿ ಹೂ ಇಟ್ಟು ಅದನ್ನೇ ಭಗವಂತನೆಂದು ತಿಳಿಯುವ ನಮ್ಮ ಜನಪದರ ಮುಗ್ಧತೆಯ ಬಗ್ಗೆ ನಾವು ಓದಿರುತ್ತೇವಲ್ಲವೇ? ಇದು ಅದೇ ಆಚರಣೆಯ ಮುಂದುವರಿದ ರೂಪ ಅನ್ನಿಸುತ್ತದೆ. ದೇವರನ್ನು ಕಂಬಕ್ಕೆ ಕಟ್ಟಿ ಪೂಜೆ ಮಾಡುವ ಮುಗ್ಧ ವ್ಯಾಪಾರಿಗಳನ್ನು ನೋಡಿದಾಗ ತುಂಟ ಮಗು ಶ್ರೀ ಕೃಷ್ಣನನ್ನು ಒರಳುಕಲ್ಲಿಗೆ ಕಟ್ಟಿಹಾಕಿದ ತಾಯಿ ಯಶೋಧೆಯ ನೆನಪಾಯಿತು. ದೇವರನ್ನು ಮಗು, ತಮ್ಮ ಮಿತ್ರ, ಕಾಪಾಡುವ ಅಂಗರಕ್ಷಕ ಎಂದು ಭಾವಿಸುವ ಈ ಮುಗ್ಧತೆಯೇ ದೈವಿಕವಲ್ಲವೇ? ಕಲ್ಮಷವರಿಯದ ಆ ಭಾವನೆಯೇ ದೇವರಲ್ಲವೇ ಅನ್ನಿಸಿತು.