ಕನ್ನಡದ ವರಕವಿ  ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಭಾಷೆಯ ಪದಗಳನ್ನು ಲೀಲಾಮಯವಾಗಿ, ಗರಿಷ್ಠ ಅರ್ಥವಿಸ್ತಾರದಲ್ಲಿ ಬಳಸುತ್ತಿದ್ದ ರೀತಿಯು ತುಂಬ ವಿಶಿಷ್ಟವಾದದ್ದು. ಒಂದೇ ಪದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ದುಡಿಸಿಕೊಳ್ಳುತ್ತಿದ್ದದ್ದು, ಹೆಚ್ಚುಕಮ್ಮಿ ಒಂದೇ ಉಚ್ಚಾರವುಳ್ಳ ಆದರೆ ಅಪಾರ ಅರ್ಥ ವ್ಯತ್ಯಾಸವುಳ್ಳ ಪದಗಳನ್ನು ಒಟ್ಟೊಟ್ಟಿಗೆ ಬಳಸಿ ಶ್ರಾವ್ಯಸುಂದರ ಹಾಗೂ ಅರ್ಥಬಂಧುರ ಲೋಕವನ್ನು ಸೃಷ್ಟಿಸುವ ಅದ್ಭುತ ಶಕ್ತಿ ಅವರಲ್ಲಿತ್ತು. ಅದಕ್ಕೆ ಒಂದು ಉದಾಹರಣೆ‌ ಅಂದರೆ ಅವರು ಕನಸು ಮತ್ತು ಕಣಸು ಎಂಬ ಪದಗಳನ್ನು ತಮ್ಮ ಕವಿತೆಯೊಂದರಲ್ಲಿ ಬಳಸಿರುವ ರೀತಿ. 

ಪ್ರಸ್ತುತ ಕವಿತೆಯ ಹೆಸರು ‘ಕನಸಿನೊಳಗೊಂದು ಕಣಸು’. ಇದು ಬೇಂದ್ರೆಯವರು ಬರೆದು 1932ರಲ್ಲಿ‌  ಪ್ರಕಟಿಸಿದ ‘ಗರಿ’ಎಂಬ ಕವನ ಸಂಕಲನದಲ್ಲಿದೆ. ಕನ್ನಡನಾಡು ಇನ್ನೂ ಏಕೀಕರಣಗೊಳ್ಳದಿದ್ದ ಸಂಕಷ್ಟಮಯ ಕಾಲದಲ್ಲಿ, ನಿದ್ದೆಯಲ್ಲಿದ್ದ ಕನ್ನಡಿಗನೊಬ್ಬನಿಗೆ ಅವನ ಕನಸಿನಲ್ಲಿ

ಕನ್ನಡಮ್ಮನು ಮಲಿನ ವಸ್ತ್ರಗಳಲ್ಲಿ, ಚಿಂತಿತ ಮುಖ ಹೊತ್ತು  ಕಾಣಿಸಿಕೊಳ್ಳುತ್ತಾಳೆ.‌  ಇವರಿಬ್ಬರ ನಡುವೆ ಕನ್ನಡ ನಾಡಿನ ಆಗಿನ ಶೋಚನೀಯ ಸ್ಥಿತಿಗತಿಯ ಬಗ್ಗೆ  ಮತ್ತು ಅದನ್ನು ಸರಿಪಡಿಸಲು ಏನು ಮಾಡಬಹುದು ಎಂಬ ಬಗ್ಗೆ ಸಂವಾದ ನಡೆಯುತ್ತದೆ.‌ ಕನ್ನಡ ನಾಡಿನ ಉದ್ಧಾರಕ್ಕಾಗಿ ಕನ್ನಡಿಗನ ಆತ್ಮಬಲಿಯನ್ನು ಕನ್ನಡತಾಯಿಯು‌‌ ಚಂಡಿಚಾಮುಂಡಿಯ ರೂಪದಲ್ಲಿ ಕೇಳುತ್ತಿದ್ದಾಳೆ ಎಂಬ ಬೆಚ್ಚಿ ಬೀಳಿಸುವ ಸಂಗತಿಯನ್ನು ಮನದಟ್ಟು ಮಾಡಿಸುವ ಕವಿತೆ ಇದು. ತಾಯಿ ಮಗನ ಸಂಭಾಷಣೆಯು ಒಂದೊಂದೇ ಸಾಲಿನಲ್ಲಿದ್ದು ಓದಲು, ಕೇಳಲು ಚುರುಕಾಗಿ, ಆಕರ್ಷಕವಾಗಿದೆ. ನಿದ್ದೆ, ಎಚ್ಚರ ಎಂಬ ಸಂಗತಿಗಳು ಸಹ ಇಲ್ಲಿ ತಮ್ಮ ಸಾಮಾನ್ಯ ಅರ್ಥ ವನ್ನು ಮೀರಿ ಕನ್ನಡನಾಡಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ನಿರ್ಲಕ್ಷ್ಯ ಮತ್ತು ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾದ ರೀತಿ ಎಂಬ ಅರ್ಥಗಳನ್ನು (ಕ್ರಮವಾಗಿ) ಪಡೆದುಬಿಡುತ್ತವೆ!

ಈ ಕವಿತೆಯಲ್ಲಿ ಕನಸು ಎಂಬ ಪದವನ್ನು ‘ಸ್ವಪ್ನ’ ಎಂಬ ಅರ್ಥದಲ್ಲಿ ಬಳಸಲಾಗಿದ್ದರೆ ಕಣಸು ಎಂಬ ಪದಕ್ಕೆ ನಿಘಂಟಿನಲ್ಲಿ ಇರುವ ‘ನೋಟ, ಕಾಣ್ಕೆ, ಅತಿಮಾನುಷ ದರ್ಶನ, ಅಲೌಲಿಕವಾದ ತೋರಿಕೆ’ ಎಂಬ ಅರ್ಥಗಳನ್ನು ದುಡಿಸಿಕೊಳ್ಳಲಾಗಿದೆ.‌ ಅಂದರೆ ಈ ಕವಿತೆಯು ಕನ್ನಡಿಗನೊಬ್ಬನಿಗೆ ಮಲಗಿದ್ದಾಗ ಬಿದ್ದ ಕನಸಿನಲ್ಲಿ ಕಂಡಂತಹ ದರ್ಶನ, ಕನ್ನಡ ನಾಡಿನ ಮುಂದಿನ ಭವಿಷ್ಯದ ಅಲೌಕಿಕವಾದ ತೋರಿಕೆ!

ಒಂದೇ ಒಂದು ಅಕ್ಷರ ವ್ಯತ್ಯಾಸವಿರುವ ‘ಕನಸು’ ಮತ್ತು‌ ‘ಕಣಸು’ ಪದಗಳನ್ನು ‘ಕನಸಿನೊಳಗೊಂದು ಕನಸಾಗಿ ಮತ್ತು ಕಣಸಾಗಿ’ ಬಳಸಿ, ಬೃಹತ್ ಅರ್ಥ ಪರಂಪರೆಯನ್ನೇ ಸೃಷ್ಟಿಸಿದ ವರಕವಿ ಬೇಂದ್ರೆಯವರ ಶಬ್ದಪ್ರೀತಿಗೆ ಮತ್ತು ಕಾವ್ಯಪ್ರತಿಭೆಗೆ ಒಮ್ಮೆ ಕೈಮುಗಿಯೋಣ.‌ ಇಂತಹ ಪದಗಾರುಡಿಗ ಪುತ್ರನನ್ನು ಪಡೆದ ಕನ್ನಡತಾಯಿಗೆ ಮತ್ತೆ ಮತ್ತೆ

ನಮೋನಮೋ ಎನ್ನೋಣ.